ADVERTISEMENT

ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೆಸಾರ್ಟ್‌ಗೆ ಎನ್‌ಒಸಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೆಸಾರ್ಟ್‌ಗೆ ಎನ್‌ಒಸಿ
ಹುಲಿ ಸಂರಕ್ಷಿತ ಪ್ರದೇಶದಲ್ಲಿ ರೆಸಾರ್ಟ್‌ಗೆ ಎನ್‌ಒಸಿ   

ಬೆಂಗಳೂರು: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ, ದಾಂಡೇಲಿ ವನ್ಯಜೀವಿಧಾಮದ ಕ್ಯಾಸೆಲ್‌ರಾಕ್ ವಲಯದ ಅನಮೋಡ್ ಗ್ರಾಮದಲ್ಲಿರುವ ಟ್ರಿನಿಟಿ ಜಂಗಲ್ ರೆಸಾರ್ಟ್‌ಗೆ ನಿರಾಕ್ಷೇಪಣಾ ಪತ್ರ ನೀಡಬಹುದು ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಮಾಡಿರುವ ಶಿಫಾರಸಿಗೆ ವನ್ಯಜೀವಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹುಲಿ ಅಭಯಾರಣ್ಯದ ನಿರ್ದೇಶಕರು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ವನ್ಯಜೀವಿ) ಜೂನ್‌ 13ರಂದು ಬರೆದಿರುವ ಪತ್ರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ‘ಅಭಯಾರಣ್ಯ ಘೋಷಣೆಯ ಪೂರ್ವದಲ್ಲೇ ಇಲ್ಲಿ ರೆಸಾರ್ಟ್ ಅಸ್ತಿತ್ವದಲ್ಲಿತ್ತು. ಈಗ ಮಾಲೀಕತ್ವದ ಬದಲಾವಣೆಯಾ
ಗಿದೆ ಅಷ್ಟೇ. ಹೀಗಾಗಿ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲು ಪರಿಗಣಿಸಬಹುದು’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಅನಮೋಡ್‌ ಗ್ರಾಮದಲ್ಲಿ ಸರ್ವೆ ನಂ. 83ಬಿ ರಲ್ಲಿ ಒಂದು ಎಕರೆಯಲ್ಲಿ ‘ಜಟೋಯ ಇನ್‌ವೆಸ್ಟ್‌ಮೆಂಟ್‌ ಆ್ಯಂಡ್‌ ಹೋಲ್ಡಿಂಗ್ಸ್‌ ಲಿಮಿಟೆಡ್ ಮುಂಬೈ’ ಎಂಬ ಸಂಸ್ಥೆಯು ‘ಟ್ರಿನಿಟಿ ಜಂಗಲ್ ರೆಸಾರ್ಟ್’ ಎಂಬ ಪ್ರವಾಸೋದ್ಯಮ ರೆಸಾರ್ಟ್‌ ನಿರ್ಮಿಸಿದೆ.

‘ಈ ಗ್ರಾಮವು ದಾಂಡೇಲಿ ವನ್ಯಜೀವಿಧಾಮದೊಳಗೆ ಇದೆ. ಈ ಪ್ರದೇಶದಲ್ಲಿ ವನ್ಯಜೀವಿ (ಸಂರಕ್ಷಣಾ) ಕಾಯ್ದೆ 1972 ಪ್ರಕಾರ ಯಾವುದೇ ವ್ಯಾವಹಾರಿಕ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಈ ರೆಸಾರ್ಟ್‌ ನಡೆಸಲು ಅದರ ಮಾಲೀಕರು ಅರಣ್ಯ ಇಲಾಖೆ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅಗತ್ಯ ಅನುಮತಿ ಪಡೆದಿಲ್ಲ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 33(ಎ)ರ ಸ್ಪಷ್ಟ ಉಲ್ಲಂಘನೆ’ ಎಂದು ಕಾರ್ಯಕರ್ತರು ಗಮನ ಸೆಳೆದಿದ್ದಾರೆ.

ADVERTISEMENT

‘ರೆಸಾರ್ಟ್‌ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆ 2013ರ ಸೆಪ್ಟೆಂಬರ್‌ 6ರಂದು ಅನುಮತಿ ನೀಡಿದೆ ಎಂದು ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಪ್ರದೇಶದ ಹಿಂದಿನ ನಿರ್ದೇಶಕರು, ಮುಖ್ಯ ವನ್ಯಜೀವಿ ವಾರ್ಡನ್‌ಗೆ 2015ರ ಮಾರ್ಚ್‌ 4ರಂದು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರು. ಕರ್ನಾಟಕ ವನ್ಯಜೀವಿ ಪ್ರವಾಸೋದ್ಯಮ ನೀತಿಯಂತೆ, ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ ಮತ್ತು ಅವುಗಳ ಪರಿಧಿಯೊಳಗಿರುವ ಗ್ರಾಮ ಅಥವಾ ಸ್ಥಳಗಳಲ್ಲಿ ರೆಸಾರ್ಟ್‌ನಂತಹ ಪ್ರವಾಸೋದ್ಯಮ ಚಟುವಟಿಕೆಗಳನ್ನು ನಡೆಸಲು ಅನುಮತಿ ಇರುವುದಿಲ್ಲ. ಪ್ರವಾಸೋದ್ಯಮ ಇಲಾಖೆ ನೀಡಿರುವ ಅನುಮತಿ ಕಾನೂನುಬಾಹಿರ’ ಎಂದು ಅವರು ತಿಳಿಸಿದ್ದರು.

ಅನಮೋಡ್ ಹಾಗೂ ಸುತ್ತಲಿನ ಪ್ರದೇಶಗಳನ್ನು 2011ರ ಡಿಸೆಂಬರ್‌ನಲ್ಲಿ ದಾಂಡೇಲಿ ವನ್ಯಜೀವಿಧಾಮಕ್ಕೆ ಸೇರಿಸಲಾಗಿದೆ. 1986ರಿಂದ ಇಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸುತ್ತಿದ್ದೇವೆ ಎಂಬುದು ರೆಸಾರ್ಟ್‌ ಮಾಲೀಕರ ಸಮಜಾಯಿಷಿ. ಆದರೆ, ಇದನ್ನು ಸಾಬೀತುಪಡಿಸಲು ಅವರ ಹತ್ತಿರ ಪೂರಕ ದಾಖಲೆಗಳು ಇಲ್ಲ ಎಂದು ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ 2015ರ ಮಾರ್ಚ್‌ 4ರಂದು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದರು. ಅಲ್ಲದೆ ಮೂಲ ಮಾಲೀಕರ ಹಣಕಾಸಿನ ತೊಂದರೆಯ ಕಾರಣಕ್ಕೆ ಈ ಆಸ್ತಿಯನ್ನು ಕೆಎಸ್ಎಫ್‌ಸಿ ಮುಟ್ಟುಗೋಲು ಹಾಕಿಕೊಂಡಿತ್ತು. ಕೆಎಸ್ಎಫ್‌ಸಿ 2012ರ ಡಿಸೆಂಬರ್‌ 20ರಂದು ಹರಾಜು ಪ್ರಕ್ರಿಯೆ ನಡೆಸಿತ್ತು. ಈ ವೇಳೆ ಅರ್ಜಿದಾರರು ಈ ಆಸ್ತಿಯನ್ನು ಖರೀದಿಸಿದ್ದರು ಎಂದು ನಿರ್ದೇಶಕರು ಪತ್ರದಲ್ಲಿ ತಿಳಿಸಿದ್ದರು.

ಅಕ್ರಮ ರೆಸಾರ್ಟ್‌ ಬಗ್ಗೆ ವನ್ಯಜೀವಿ ಕಾರ್ಯಕರ್ತರು ಇಲಾಖೆಗೆ ದೂರು ಸಲ್ಲಿಸಿದ್ದರು.

ರೆಸಾರ್ಟ್‌ನ ಎಲ್ಲ ಕಾಮಗಾರಿ ಮುಗಿದಿದ್ದು ರೆಸಾರ್ಟ್‌ಗೆ ಅನುಮತಿ ನೀಡಬೇಕೆಂದು 2016ರ ಅಕ್ಟೋಬರ್‌, 2017ರ ಮಾರ್ಚ್‌, 2017ರ ಏಪ್ರಿಲ್‌ ಹಾಗೂ 2017ರ ಮೇ ತಿಂಗಳಲ್ಲಿ ರೆಸಾರ್ಟ್ ವ್ಯವಸ್ಥಾಪಕರು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಪತ್ರ ಬರೆದಿದ್ದಾರೆ. ‘ಕ್ಯಾಸಲ್‌ರಾಕ್ ಪ್ರದೇಶದಲ್ಲೇ ಎರಡು ರೆಸಾರ್ಟ್ ಹಾಗೂ ಒಂದು ಹೋಮ್‌ ಸ್ಟೇ ಯಾವುದೇ ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿವೆ. ನಮ್ಮ ರೆಸಾರ್ಟ್‌ಗೆ ಮಾತ್ರ ಇಲ್ಲಿಯ ತನಕ ಅನುಮತಿ ನೀಡಿಲ್ಲ’ ಎಂದು 2017ರ ಮೇ 3ರ ಪತ್ರದಲ್ಲಿ ತಿಳಿಸಿದ್ದಾರೆ.

‘ಪರಿಸರ ಸೂಕ್ಷ್ಮ ಪ್ರದೇಶಗಳು ಹಾಗೂ ವನ್ಯಜೀವಿ ಧಾಮಗಳ ಆಸು‍ಪಾಸಿನಲ್ಲಿ ರೆಸಾರ್ಟ್‌ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದನ್ನು ರಾಜ್ಯ ಹೈಕೋರ್ಟ್‌ 2017ರ ಏಪ್ರಿಲ್‌ನಲ್ಲಿ ಎತ್ತಿ ಹಿಡಿದಿದೆ. ಆದರೂ, ಅರಣ್ಯ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಲು ಮುಂದಾಗಿದ್ದಾರೆ. ಇದು ಸರಿಯಲ್ಲ’ ಎಂದು ವನ್ಯಜೀವಿ ಕಾರ್ಯಕರ್ತರು ಹೇಳಿದ್ದಾರೆ.

ದಾಖಲೆ ಪರಿಶೀಲ್ಸಿ: ಎಪಿಸಿಸಿಎಫ್‌ ವರದಿ
ಮುಖ್ಯ ವನ್ಯಜೀವಿ ವಾರ್ಡನ್‌ ಸೂಚನೆ ಮೇರೆಗೆ ಅಂದಿನ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್‌. ಮೂರ್ತಿ ಸ್ಥಳ ಪರಿಶೀಲನೆ ನಡೆಸಿ 2015ರ ಮಾರ್ಚ್‌ 27ರಂದು ಪಿಸಿಸಿಎಫ್‌ಗೆ ವರದಿ ಸಲ್ಲಿಸಿದ್ದರು. ರೆಸಾರ್ಟ್ ಮಾಲೀಕರ ಹತ್ತಿರ ಇರುವ ಮಾಲೀಕತ್ವದ ಎಲ್ಲ ದಾಖಲಾತಿಗಳನ್ನು ಹಾಗೂ ಹಕ್ಕು ಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದು ವರದಿಯಲ್ಲಿ ತಿಳಿಸಿದ್ದರು.

‘ಕ್ಯಾಸಲ್‌ರಾಕ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಹಲವಾರು ರೆಸಾರ್ಟ್‌ಗಳಿವೆ. ಈಗಿರುವ ಎಲ್ಲ ರೆಸಾರ್ಟ್‌ಗಳು ಹಾಗೂ ಹೋಮ್ ಸ್ಟೇಗಳು ಗೋವಾ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗೆ ಹತ್ತಿರದಲ್ಲಿ ಹೊಂದಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಅತಿಯಾದ ಪ್ರವಾಸೋದ್ಯಮಕ್ಕೆ ಆಕರ್ಷಿಸುವ ಸಾಧ್ಯತೆ ಇದ್ದು ಸುತ್ತಮುತ್ತಲಿನ ಜೀವ ವೈವಿಧ್ಯದ ಮೇಲೆ ಗಂಭೀರ ಪರಿಣಾಮ ಸಾಧ್ಯತೆ ಇದೆ. ಪ್ರಸ್ತುತ ಇರುವ ಪರಿಸರ ಪೂರಕ ಪ್ರವಾಸೋದ್ಯಮ ನೀತಿ ಹಾಗೂ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಈ ರೆಸಾರ್ಟ್‌ಗಳಿಗೆ ದಾಂಡೇಲಿ ಅಣಶಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯೊಳಗೆ ಅವಕಾಶ ನೀಡುವ ಬಗ್ಗೆ ಗಂಭೀರ ಪರಿಶೀಲನೆ ನಡೆಸಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.