ADVERTISEMENT

ಹುಸೇನಬ್ಬ ಅನುಮಾನಾಸ್ಪದ ಸಾವು ಪ್ರಕರಣ: ಪಿಎಸ್‌ಐ ಸೇರಿ 6 ಆರೋಪಿಗಳಿಗೆ ನ್ಯಾಯಾಂಗ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 10:39 IST
Last Updated 4 ಜೂನ್ 2018, 10:39 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಉಡುಪಿ: ದನದ ವ್ಯಾಪಾರಿ ಹುಸೇನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯಡ್ಕ ಠಾಣೆಯ ಪಿಎಸ್‌ಐ ಡಿ.ಎನ್‌.ಕುಮಾರ್, ಸಿಬ್ಬಂದಿ ಗೋಪಾಲ, ಮೋಹನ್‌ ಕೊತ್ವಾಲ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಕಾರವಾರ ಜೈಲಿಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.

ಎಸ್‌ಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರಮುಖ ಆರೋಪಿಗಳಾದ ಸುರೇಶ್‌ ಮೆಂಡನ್‌, ಪ್ರಸಾದ್ ಕೊಂಡಾಡಿ, ಉಮೇಶ್‌ ಶೆಟ್ಟಿ, ರತನ್‌ ಅವರನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಇದುವರೆಗೂ 10 ಮಂದಿಯನ್ನು ಬಂಧಿಸಲಾಗಿದ್ದು, ಶೀಘ್ರವೇ ಮತ್ತಷ್ಟು ಜನರನ್ನು ಬಂಧಿಸಲಾಗುವುದು ಎಂದರು.

ಮೃತ ಹುಸೇನಬ್ಬ ಅವರ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‌ಎಸ್‌ಎಲ್‌ ವರದಿ ಇನ್ನೂ ಕೈಸೇರಿಲ್ಲ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಪ್ರಕರಣದ ತನಿಖಾಧಿಕಾರಿಯನ್ನಾಗಿ ಕಾರ್ಕಳ ಎಎಸ್‌ಪಿ ಹೃಶಿಕೇಶ್ ಸೋನಾವಾನೆ ಅವರನ್ನು ನೇಮಿಸಲಾಗಿದೆ ಎಂದು ಎಸ್‌ಪಿ ತಿಳಿಸಿದರು.

ADVERTISEMENT

ಮೃತ ಹುಸೇನಬ್ಬ ಹಾಗೂ ಅವರ ಜತೆಗಿದ್ದ ಇಬ್ಬರು ದನಗಳನ್ನು ಸಾಗಾಟ ಮಾಡಲು ಪರವಾನಗಿಯನ್ನು ಹೊಂದಿರಲಿಲ್ಲ. ಈ ಸಂಬಂಧ ಅಕ್ರಮ ಗೋವುಗಳ ಸಾಗಾಟ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ ಎಂದರು.

ಪ್ರಕರಣದ ಹಿನ್ನೆಲೆ: ಮೇ 29ರಂದು ಪೆರ್ಡೂರಿನ ಶೀನಬೆಟ್ಟು ಬಳಿ ಮಂಗಳೂರಿನ ಜೋಕಟ್ಟೆ ನಿವಾಸಿ ಹುಸೇನಬ್ಬ ಪರಿಚಿತರೊಂದಿಗೆ ಸ್ಕಾರ್ಪಿಯೊ ವಾಹನದಲ್ಲಿ ದನಗಳನ್ನು ಸಾಗಿಸುತ್ತಿದ್ದಾಗ, ಬಜರಂಗದಳದ ಕಾರ್ಯಕರ್ತ ಸುರೇಶ್‌ ಹಾಗೂ ಇತರರು ದಾಳಿ ನಡೆಸಿದ್ದರು. ಈ ವೇಳೆ ವಾಹನದಲ್ಲಿದ್ದ ಇಬ್ಬರು ಪರಾರಿಯಾದರೆ, ವೃದ್ಧರಾದ ಹುಸೇನಬ್ಬ ಮಾತ್ರ ಸಿಕ್ಕಿಬಿದ್ದಿದ್ದರು. ಆರಕ್ಷಕರ ಎದುರಲ್ಲೇ ಹುಸೇನಬ್ಬ ಮೇಲೆ ಹಲ್ಲೆ ನಡೆಸಿದ ಆರೋಪಿಗಳು, ನಂತರ ಪೊಲೀಸರಿಗೆ ಒಪ್ಪಿಸಿದ್ದರು. 

ಹುಸೇನಬ್ಬ ಅವರನ್ನು ಜೀಪಿನಲ್ಲಿ ಠಾಣೆಗೆ ಕರೆದೊಯ್ಯುವಾಗ ಅವರು ಮೃತಪಟ್ಟಿದ್ದರು. ಬಳಿಕ ಆರೋಪಿಗಳ ನೆರವು ಪಡೆದ ಪೊಲೀಸರು ಶವವನ್ನು 1.2 ಕಿ.ಮೀ ದೂರದ ತೋಟವೊಂದಕ್ಕೆ ಸಾಗಿಸಿ, ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಸಂಬಂಧ ಮೃತರ ಸಹೋದರ ಮಹಮ್ಮದ್ ಇಸ್ಮಾಯಿಲ್‌ ಹಿರಿಯಡ್ಕ ಠಾಣೆಗೆ ದೂರು ನೀಡಿ, ‘ಹುಸೇನಬ್ಬ ಅವರನ್ನು ಬಜರಂಗದಳ ಕಾರ್ಯಕರ್ತರು ಬಡಿದು ಸಾಯಿಸಿದ್ದಾರೆ. ಪೊಲೀಸರ ಎದುರಲ್ಲೇ ಈ ಕೃತ್ಯ ನಡೆದಿದೆ’ ಎಂದು ಪ್ರಕರಣ ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದುವರೆಗೂ 10 ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.