ADVERTISEMENT

ಹೂಳೆತ್ತುವ ವಿಚಾರವಾಗಿ ಶೀಘ್ರದಲ್ಲೇ ಕೇಂದ್ರದ ನೀರಾವರಿ ಸಚಿವರು, ತಜ್ಞರ ಜತೆ ಚರ್ಚೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 29 ಮೇ 2017, 9:32 IST
Last Updated 29 ಮೇ 2017, 9:32 IST
ಹೂಳೆತ್ತುವ ವಿಚಾರವಾಗಿ ಶೀಘ್ರದಲ್ಲೇ ಕೇಂದ್ರದ ನೀರಾವರಿ ಸಚಿವರು, ತಜ್ಞರ ಜತೆ ಚರ್ಚೆ: ಯಡಿಯೂರಪ್ಪ
ಹೂಳೆತ್ತುವ ವಿಚಾರವಾಗಿ ಶೀಘ್ರದಲ್ಲೇ ಕೇಂದ್ರದ ನೀರಾವರಿ ಸಚಿವರು, ತಜ್ಞರ ಜತೆ ಚರ್ಚೆ: ಯಡಿಯೂರಪ್ಪ   

ಹೊಸಪೇಟೆ: ರೈತರು ನಡೆಸುತ್ತಿರುವ ಹೂಳಿನ ಜಾತ್ರೆಗೆ ಬಿಜೆಪಿ ಸಂಪೂರ್ಣ ಬೆಂಬಲವಿದೆ. ಹೂಳಿನ ವಿಚಾರವಾಗಿ ಶೀಘ್ರದಲ್ಲೇ ಕೇಂದ್ರದ ನೀರಾವರಿ ಸಚಿವರು, ತಜ್ಞರೊಂದಿಗೆ ಚರ್ಚಿಸಿ ಹೂಳೆತ್ತುವ ಕುರಿತು ಅಭಿಪ್ರಾಯ ಪಡೆಯಲಾಗುವುದು ಎಂದು  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ತಿಳಿಸಿದರು.  

ಸೋಮವಾರ ಸತತ ಹನ್ನೆರಡನೇ ದಿನವೂ ಮುಂದುವರಿದಿರುವ ಹೂಳಿನ ಜಾತ್ರೆ ನಡೆಯುತ್ತಿರವ ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದ್ದ ವೇಳೆ ಅವರು ಮಾತನಾಡಿದರು.

ಹೂಳು ತೆಗೆಯಲು ಆಗುವುದಿಲ್ಲ ಎಂದು ಸರ್ಕಾರ ಕೈಚೆಲ್ಲಿ ಕೂತಿದ್ದು ಸರಿಯಲ್ಲ. ಎರಡು ವಾರಗಳಿಂದ ರೈತರು ತಮ್ಮ ಇತಿಮಿತಿಯಲ್ಲಿ ಹೂಳು ತೆಗೆಯುತ್ತಿದ್ದಾರೆ. ಹಾಗಿದ್ದರೆ, ಸರ್ಕಾರಕ್ಕೆ ಏಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.

ADVERTISEMENT

ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಸರ್ಕಾರ ಇರಬೇಕು. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತವಾಗಿದ್ದು, ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿರುವ ಎಲ್ಲ ಜಲಾಶಯದಲ್ಲಿನ ಹೂಳು ತೆಗೆಸಲಾಗುವುದು, ಕೆರೆ ತುಂಬಿಸುವ ಕೆಲಸ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಕಾಲುಗುಣ ಸರಿಯಿಲ್ಲ. ಅವರು ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ  ಸತತ ಬರಗಾಲ ಬಂದಿದೆ. ಬರದಂತಹ ಭೀಕರ ಪರಸ್ಥಿತಿಯಲ್ಲೂ ಮುಖ್ಯಮಂತ್ರಿ ದಿನಕ್ಕೆರಡು ಸಿನಿಮಾ, ಐಷಾರಾಮಿ ಹೋಟೆಲ್ ಗಳಲ್ಲಿ ಆಹಾರ ಸವಿದು ಮೋಜು ಮಾಡುತ್ತಿದ್ದಾರೆ. ತಮ್ಮ ಜವಾಬ್ದಾರಿ ಏನೆಂಬುದನ್ನೇ ಮರೆತು ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಂಸದ ಶ್ರೀರಾಮುಲು, ಶಾಸಕರಾದ ಸಿ.ಟಿ.ರವಿ, ಗೋವಿಂದ ಕಾರಜೋಳ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ, ಮುಖಂಡರಾದ ರಘುನಾಥ ಮಲ್ಕಾಪುರೆ, ಶೋಭಾ ಕರಂದ್ಲಾಜೆ, ಜೆ.ಶಾಂತಾ ಅವರು ಹೂಳೆತ್ತುವ ಸ್ಥಳಕ್ಕೆ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.