ADVERTISEMENT

ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ

ಹೆಚ್ಚಿದೆ ವರ್ಗ ಮತ್ತು ನಿವೃತ್ತರ ಸಂಖ್ಯೆ

ಬಿ.ಎಸ್.ಷಣ್ಮುಖಪ್ಪ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST
ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ
ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳ ಕೊರತೆ   

ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ನ್ಯಾಯಮೂರ್ತಿಗಳ ಕೊರತೆ ಕಾಡುತ್ತಿದೆ. ವರ್ಗಾವಣೆ ಮತ್ತು ನಿವೃತ್ತರಾಗುತ್ತಿರುವವರ ಸಂಖ್ಯೆ ಗಮನಾರ್ಹವಾಗಿ ಹೆಚ್ಚುತ್ತಿದ್ದರೂ ಖಾಲಿ ಸ್ಥಾನಗಳು ಭರ್ತಿಯಾಗುತ್ತಿಲ್ಲ. ರಾಜ್ಯ ಹೈಕೋರ್ಟ್‌ಗೆ ಮಂಜೂರಾಗಿರುವ ನ್ಯಾಯಮೂರ್ತಿಗಳ ಒಟ್ಟು ಸಂಖ್ಯೆ 62. ಆದರೆ ಸದ್ಯ ಕಾರ್ಯ ನಿರ್ವಹಿಸುತ್ತಿರುವವರ ಸಂಖ್ಯೆ 30. ಇವರಲ್ಲಿ ನ್ಯಾಯಮೂರ್ತಿ ಕೆ.ಎಲ್‌.ಮಂಜುನಾಥ್‌ ಸೋಮವಾರ (ಏ.20) ನಿವೃತ್ತಿ ಆಗುತ್ತಿದ್ದರೆ, ಸನಿಹದಲ್ಲೇ ಎನ್‌.ಆನಂದ್‌ (7.5.2015), ಎ.ಎಸ್‌.ಪಾಚ್ಚಾಪೂರೆ (16.6.2015) ಮತ್ತು ಸಿ.ಆರ್‌. ಕುಮಾರಸ್ವಾಮಿ (24.8.12015) ನಿವೃತ್ತಿ ಆಗುತ್ತಿದ್ದಾರೆ.

ಈಗಿನ ಮುಖ್ಯ ನ್ಯಾಯಮೂರ್ತಿ ಡಿ.ಎಚ್‌.ವಘೇಲಾ ಅವರನ್ನು ಈಗಾಗಲೇ ಒಡಿಶಾ ಹೈಕೋರ್ಟ್‌ಗೆ ವರ್ಗ ಮಾಡಿ ಆದೇಶಿಸಲಾಗಿದೆ.  ಎರಡು ತಿಂಗಳ ಅವಧಿಯಲ್ಲಿ ಅವರು ಯಾವುದೇ ವೇಳೆ ಇಲ್ಲಿಂದ ಒಡಿಶಾಕ್ಕೆ ತೆರಳಲಿದ್ದಾರೆ.   ಕೋಲ್ಕತ್ತ ಹೈಕೋರ್ಟ್‌ನಿಂದ ಇಲ್ಲಿಗೆ ವರ್ಗವಾಗಿ ಬಂದಿರುವ ಹಿರಿಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ  ಸದ್ಯ ಎರಡನೇ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ವಘೇಲಾ ಅವರು ನಿರ್ಗಮಿಸಿದರೆ  ಜೂನ್‌ ವೇಳೆಗೆ ಮತ್ತೊಂದು ಸ್ಥಾನ ಕಡಿಮೆಯಾಗಲಿದೆ.

ಕೆಎಟಿ ಪೀಠದ ಬೇಡಿಕೆ ವಿಪರ್ಯಾಸ: ‘ಸಮಯಕ್ಕೆ ಸರಿಯಾಗಿ ನ್ಯಾಯಮೂರ್ತಿಗಳನ್ನು ನೇಮಕ ಮಾಡದೆ ಇರುವುದು ಹಳೆಯ ಸಮಸ್ಯೆಯಾದರೆ ಈಗಿರುವ ನ್ಯಾಯಮೂರ್ತಿಗಳಲ್ಲೇ ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್‌ ಪೀಠಗಳೂ ಕಾರ್ಯ ನಿವರ್ಹಿಸಬೇಕಿದೆ. ಇದರ ಮಧ್ಯೆಯೇ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಪೀಠ ನಮಗೂ ಬೇಕು ಎಂಬ ಕೂಗುಗಳು ಉತ್ತರ ಕರ್ನಾಟಕದ ಭಾಗದಿಂದ ಕೇಳಿ ಬರುತ್ತಿವೆ. ಹೈಕೋರ್ಟ್‌ಗೆ ನ್ಯಾಯಮೂರ್ತಿಗಳು ಇಲ್ಲದಿರುವಾಗ ಇಂತಹ ಬೇಡಿಕೆ  ವಿಪರ್ಯಾಸವೇ ಸರಿ’ ಎನ್ನುತ್ತಾರೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎಚ್‌.ಸಿ.ಶಿವರಾಮು.

ಬಡವರಿಗೆಲ್ಲಿದೆ ನ್ಯಾಯ?: ‘ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ನ್ಯಾಯಮೂರ್ತಿಗಳ ಸಂಖ್ಯೆ ಏರಿಕೆಯಾಗುತ್ತಿಲ್ಲ’ ಎಂಬ ಕೊರಗು ಅಖಿಲ ಭಾರತ ವಕೀಲರ ಸಂಘದ  ಅಧ್ಯಕ್ಷ ಎಸ್‌. ಶಂಕರಪ್ಪ ಅವರದ್ದು.

‘ಕೋರ್ಟ್‌ಗಳಲ್ಲಿ ಬಡವರಿಗೆ ಒಂದು ನ್ಯಾಯ. ಶ್ರೀಮಂತರಿಗೆ ಒಂದು ನ್ಯಾಯ ಎಂಬ ತಾರತಮ್ಯ ತಾಂಡವವಾಡುತ್ತಿದೆ. ಇದಕ್ಕೆ ಉದಾಹರಣೆಯಾಗಿ ಮನಮೋಹನ ಸಿಂಗ್‌, ಜಯಲಲಿತಾ, ಜನಾರ್ದನ ರೆಡ್ಡಿ ಅಂತಹವರ ಪ್ರಕರಣಗಳು ನಮ್ಮ ಕಣ್ಣ ಮುಂದಿವೆ. ಶ್ರೀಸಾಮಾನ್ಯರು ಹೈಕೋರ್ಟಿನಲ್ಲಿ ಆದೇಶ ಪಡೆಯಬೇಕೆಂದರೆ ಕನಿಷ್ಠ ಐದು ವರ್ಷವಾದರೂ ಕಾಯಬೇಕಿದೆ.  ಇದಕ್ಕೆಲ್ಲಾ ಮುಖ್ಯ ಕಾರಣ ನ್ಯಾಯಮೂರ್ತಿಗಳ ಕೊರತೆ’ ಎನ್ನುತ್ತಾರೆ ಶಂಕರಪ್ಪ.

‘ಮುಖ್ಯ ನ್ಯಾಯಮೂರ್ತಿಗಳೇ ಕಾರಣ’: ‘ರಾಜ್ಯದಲ್ಲಿ ಖಾಲಿ ಇರುವ  ನ್ಯಾಯಮೂರ್ತಿಗಳ ಸ್ಥಾನ ಭರ್ತಿ ಮಾಡುವಲ್ಲಿನ ವಿಳಂಬಕ್ಕೆ ಮುಖ್ಯ ನ್ಯಾಯಮೂರ್ತಿಗಳೇ ಕಾರಣ’ ಎಂಬುದು ಕರ್ನಾಟಕ ವಕೀಲರ ಒಕ್ಕೂಟದ ಅಧ್ಯಕ್ಷ ಕೆ.ಎನ್‌.ಸುಬ್ಬಾರೆಡ್ಡಿ ಅವರ ದೂರು.
‘ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ  ಹೆಚ್ಚಿನ ಆಸಕ್ತಿ ತೋರಿಸಲೇ ಇಲ್ಲ. ಈಗ ಕೊಲಿಜಿಯಂ ವ್ಯವಸ್ಥೆ ಬೇರೆ ರದ್ದಾಗಿದೆ. ಇಂತಹ ಸನ್ನಿವೇಶದಲ್ಲಿ ನೇಮಕಗಳ ವಿಳಂಬದಿಂದ ಕಕ್ಷಿದಾರರು ವಿನಾಕಾರಣ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಆರೋಪಿಸುತ್ತಾರೆ.

ಎರಡೆತ್ತಿನ ಜಾಗದಲ್ಲಿ ಒಂದೇ ಎತ್ತು ದುಡಿಯುತ್ತಿರುವಂತೆ ನಮ್ಮ ನ್ಯಾಯಮೂರ್ತಿಗಳ ಮೇಲೆ ಅನಗತ್ಯ ಹೊರೆ ಇದೆ.
ಎಚ್‌.ಸಿ.ಶಿವರಾಮು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT