ADVERTISEMENT

ಹೈಕೋರ್ಟ್‌ ಮಧ್ಯಂತರ ತಡೆ

ನೃತ್ಯಗ್ರಾಮ ತೆರವಿಗೆ ಜಿಲ್ಲಾಡಳಿತದ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST

ಬೆಂಗಳೂರು: ಹೆಸರಘಟ್ಟ ಬಳಿಯ ನೃತ್ಯಗ್ರಾಮದ ತೆರವು ಪ್ರಕ್ರಿಯೆಗೆ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆ ನೀಡಿದೆ. ತೆರವು ಪ್ರಕ್ರಿಯೆ ಪ್ರಶ್ನಿಸಿ ಮುಂಬೈ ಮೂಲದ ಒಡಿಸ್ಸಿ ನೃತ್ಯ ಕೇಂದ್ರ ಟ್ರಸ್ಟ್‌ (ನೃತ್ಯಗ್ರಾಮ) ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌. ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ಮಧ್ಯಂತರ ತಡೆ ನೀಡಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು. ‘ಹೆಸರುಘಟ್ಟ ಬಳಿಯಲ್ಲಿನ 342 ಎಕರೆ ಜಮೀನನ್ನು ರಾಜ್ಯ ಸರ್ಕಾರ 1972ರಲ್ಲಿ ‘ಫಿಲ್ಮ್ ಕಾರ್ಪೋರೇಷನ್ ಆಫ್ ಲಿಮಿಟೆಡ್’ಗೆ 99 ವರ್ಷಗಳ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿತ್ತು. ಈ ವೇಳೆ ಉಪ ಗುತ್ತಿಗೆ ನೀಡುವುದಕ್ಕೂ ಫಿಲ್ಮ್ ಕಾರ್ಪೋರೇಷನ್‌ಗೆ ಅವಕಾಶ ಕಲ್ಪಿಸಲಾಗಿತ್ತು.

ಫಿಲ್ಮ್ ಕಾರ್ಪೋರೇಷನ್ ಆಫ್ ಲಿಮಿಟೆಡ್ ಯಾವ ಉದ್ದೇಶಕ್ಕೆ ಈ ಜಮೀನು ಪಡೆದಿತ್ತೊ ಅದನ್ನು ಪಾಲಿಸಿಲ್ಲ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಇತ್ತೀಚೆಗೆ 99 ವರ್ಷಗಳ ಮಂಜೂರಾತಿ ರದ್ದು ಮಾಡಿತ್ತು. ಈ ಕಾರಣಕ್ಕಾಗಿ ಉಪ ಗುತ್ತಿಗೆ ಪಡೆದಿರುವ ನೃತ್ಯಗ್ರಾಮದ ತೆರವಿಗೆ ಜಿಲ್ಲಾಡಳಿತ ನೋಟಿಸ್‌ ನೀಡಿತ್ತು.

ಮಂಗಳಾ ಶ್ರೀಧರ್‌ ಪ್ರಕರಣ ವಿಚಾರಣೆಗೆ ತಡೆ
ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಸದಸ್ಯೆ ಡಾ. ಮಂಗಳಾ ಶ್ರೀಧರ್ ವಿರುದ್ಧದ ಅಧೀನ ನ್ಯಾಯಾಲಯದ  ವಿಚಾರಣೆಗೆ ಹೈಕೋರ್ಟ್‌ ಸೋಮವಾರ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಮಂಗಳಾ ಶ್ರೀಧರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಆಕ್ಷೇಪಣೆ ಸಲ್ಲಿಸುವಂತೆ ಸಿಐಡಿಗೆ ಸೂಚಿಸಿದೆ.ಕರ್ನಾಟಕ ಗೆಜೆಟೆಡ್‌ ಪ್ರೊಬೇಷನರಿ ನೇಮಕಾತಿಗಾಗಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 2011ರಲ್ಲಿ ನಡೆಸಿ ಪರೀಕ್ಷೆ ನಡೆಸಿತ್ತು. ಈ ವೇಳೆ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅನ್ಯಾಯ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಈ ಕಾರಣಕ್ಕಾಗಿ ಮಂಗಳಾ ಶ್ರೀಧರ್‌ ಅವರನ್ನು ಸದಸ್ಯ ಸ್ಥಾನದಿಂದ ಅಮಾನತು ಮಾಡಲಾಗಿತ್ತು.‘ಕೆಪಿಎಸ್‌ಸಿ ಅಧ್ಯಕ್ಷ ಅಥವಾ ಸದಸ್ಯರನ್ನು ಅಮಾನತು ಮಾಡುವ ಮುನ್ನ  ರಾಷ್ಟ್ರಪತಿಗಳ ಅನುಮತಿ ಪಡೆಯಬೇಕು. ಆದರೆ, ರಾಜ್ಯಪಾಲರು ಈ ಪ್ರಕರಣದಲ್ಲಿ ರಾಷ್ಟ್ರಪತಿಗಳ ಅನುಮತಿ ಇಲ್ಲದೆ ನನ್ನ ಪ್ರಮಾಣೀಕೃತ ಹೇಳಿಕೆ ಪಡೆಯುತ್ತಿದ್ದಾರೆ. ಇದು ಕಾನೂನುಬಾಹಿರ. ಆದ್ದರಿಂದ ಇದಕ್ಕೆ ತಡೆ ನೀಡಬೇಕು’ ಎಂದು ಕೋರಿ ಮಂಗಳಾ ಶ್ರೀಧರ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT