ADVERTISEMENT

‘ಅಧ್ಯಕ್ಷ ಸ್ಥಾನ ದೇವನೂರ ಒಪ್ಪಿಕೊಳ್ಳುವ ನಿರೀಕ್ಷೆ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 20:09 IST
Last Updated 17 ಡಿಸೆಂಬರ್ 2014, 20:09 IST
‘ಅಧ್ಯಕ್ಷ ಸ್ಥಾನ ದೇವನೂರ ಒಪ್ಪಿಕೊಳ್ಳುವ ನಿರೀಕ್ಷೆ’
‘ಅಧ್ಯಕ್ಷ ಸ್ಥಾನ ದೇವನೂರ ಒಪ್ಪಿಕೊಳ್ಳುವ ನಿರೀಕ್ಷೆ’   

ಹಾಸನ: ‘ಶ್ರವಣಬೆಳಗೊಳದಲ್ಲಿ ನಡೆಯಲಿರುವ ಅಖಿಲ ಭಾರತ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾ­ಧ್ಯಕ್ಷರಾಗಲು ಸಾಹಿತಿ ದೇವನೂರ ಮಹದೇವ ಅವರು ಒಪ್ಪಿ­ಕೊಳ್ಳಲೂಬಹುದು. ನಾವು ಇನ್ನೂ ಅವರ ಸಂಪರ್ಕ­ದಲ್ಲಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಲ್‌. ಜನಾರ್ದನ ಹೇಳಿದರು.

ಸಮ್ಮೇಳನದ ಅಂಗವಾಗಿ ಬುಧವಾರ ನಡೆದ ಸಭೆಯಲ್ಲಿ ಕೆಲವು ಸಾಹಿತಿಗಳು ದೇವನೂರ ಅವರ ನಿಲುವನ್ನು ಸಮರ್ಥಿ­ಸಿ­ಕೊಂಡರು. ಇದಕ್ಕೆ ಜನಾರ್ದನ್‌ ಮೇಲಿನಂತೆ ಪ್ರತಿಕ್ರಿಯೆ ನೀಡಿದರು. ‘ಏನೇ ಇದ್ದರೂ 19ರಂದು ನಡೆಯಲಿರುವ  ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಜಿಲ್ಲಾ ಘಟಕದಿಂದ ನಾವು ದೇವನೂರ ಹೆಸರನ್ನೇ ಸೂಚಿಸಲಿದ್ದೇವೆ ಎಂದರು.

ಲೇಖಕ ಚಂದ್ರಕಾಂತ ಪಡೇಸೂರ ಮಾತ-­ನಾಡಿ, ‘ಸಮ್ಮೇಳನದ ಅಧ್ಯಕ್ಷರಾ­ದ­ವರು ರಾಜ್ಯದೆಲ್ಲೆಡೆ ಸಂಚರಿಸಿ ಜಾಗೃತಿ ಮೂಡಿಸಲು ಸಾಧ್ಯವಾ­ಗು­ತ್ತದೆ. ಮಹದೇವ ಅಧ್ಯಕ್ಷ ಸ್ಥಾನ ತಿರಸ್ಕ­ರಿಸುವ ಬದಲು, ಅಧ್ಯಕ್ಷರಾಗಿ ನಂತರದ ದಿನಗಳಲ್ಲಿ ಭಾಷಾ ಮಾಧ್ಯ­ಮದ ಬಗ್ಗೆ ಹೋರಾಟ ನಡೆಸಬಹುದಾಗಿತ್ತು’ ಎಂದರು.

‘ಆ ನಿಲುವು ಸರಿಯಲ್ಲ. ಎಲ್‌. ಬಸವರಾಜು ಅಂಥ ಪ್ರಯತ್ನ ಮಾಡಿದ್ದರು. ಆದರೆ, ಅವರ ಹೋರಾಟಕ್ಕೆ ಸರ್ಕಾರ ಕವಡೆಕಾಸಿನ ಕಿಮ್ಮತ್ತು ಕೊಟ್ಟಿರಲಿಲ್ಲ. ಅಂಥ ಹೋರಾಟ ಯಾವ ಪರಿಣಾಮ ಉಂಟು ಮಾಡದು ಎಂದು ಕೆಲವರು ಎತ್ತರದ ದನಿಯಲ್ಲಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.