ADVERTISEMENT

‘ಆನ್‌ಲೈನ್‌ ಪರೀಕ್ಷೆ’ ದಾಖಲೆ ಇಲ್ಲವೆಂದ ಐಐಎಂ!

ರಾಜೇಶ್ ರೈ ಚಟ್ಲ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ಹುಬ್ಬಳ್ಳಿ: ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (ಬೆಸ್ಕಾಂ) ಮತ್ತು ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿಯ (ಹೆಸ್ಕಾಂ) ಸಹಾಯಕ ಎಂಜಿನಿಯರ್‌, ಸಹಾಯಕ ಲೆಕ್ಕಾಧಿಕಾರಿ ಮತ್ತು ಕಿರಿಯ ಎಂಜಿನಿಯರ್‌ಗಳ ಒಟ್ಟು 161 ಹುದ್ದೆಗಳ ನೇಮಕಾತಿಗೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂ-ಬಿ)  ಜನವರಿಯಲ್ಲಿ ನಡೆಸಿದ್ದ ‘ಆನ್‌ಲೈನ್‌ ಪರೀಕ್ಷೆ’ಯ ದಾಖಲೆಗಳನ್ನು ಒಂದೇ ತಿಂಗಳಲ್ಲಿ ನಾಶ ಮಾಡಲಾಗಿದೆ!

ಬೆಸ್ಕಾಂ ಮತ್ತು ಹೆಸ್ಕಾಂ, ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆಯ ಹೊಣೆಯನ್ನು (ಅಭ್ಯರ್ಥಿಗಳ ನೋಂದಣಿಯಿಂದ ರ್‍್ಯಾಂಕ್ ಪಟ್ಟಿ ಸಿದ್ಧಪಡಿಸುವರೆಗೆ) ಐಐಎಂಗೆ ನೀಡಿತ್ತು. ಪರೀಕ್ಷೆ ಬರೆದ ಅಭ್ಯರ್ಥಿ ಉತ್ತರಗಳ ಪ್ರತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ)ಯಡಿ ಕೇಳಿದಾಗ, ‘ಆನ್‌ಲೈನ್‌ ಪರೀಕ್ಷೆಗೆ ಸಂಬಂಧಿಸಿದ ದತ್ತಾಂಶಗಳನ್ನು ಇಟ್ಟುಕೊಳ್ಳುವಂತೆ ‘ಬೆಸ್ಕಾಂ’ ನಿರ್ದಿಷ್ಟ ಒಪ್ಪಂದ ಮಾಡಿಕೊಳ್ಳದೇ ಇದ್ದುದರಿಂದ, ಅಂಕ ದಾಖಲುಪಡಿಸಿಕೊಂಡ ಬಳಿಕ ಎಲ್ಲ ಡಾಟಾಗಳನ್ನು ನಾಶಪಡಿಸಲಾಗಿದ್ದು, ನಮ್ಮ ಬಳಿ ಯಾವುದೇ ದಾಖಲೆಗಳು ಇಲ್ಲ’ ಎಂದು ಐಐಎಂ–ಬಿ ಪ್ರತಿಕ್ರಿಯಿಸಿದೆ.

ಬೆಸ್ಕಾಂ ಮತ್ತು ಐಐಎಂ ನೀಡಿದ ಈ ಉತ್ತರದಿಂದ ಬೇಸತ್ತಿರುವ, ಉದ್ಯೋಗಾಕಾಂಕ್ಷಿ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಬಸವರಾಜ ಕೆ. ಬಮ್ಮನಕಟ್ಟಿ, ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಸಂದೇಹ ವ್ಯಕ್ತಪಡಿಸುತ್ತಾರೆ. ಈ ಕಾರಣಕ್ಕೆ, ಎಲ್ಲ ದಾಖಲೆಗಳ ಸಹಿತ ರಾಜ್ಯ ಮುಖ್ಯಕಾರ್ಯದರ್ಶಿ ಕೌಶಿಕ್‌ ಮುಖರ್ಜಿಗೆ ದೂರು ಸಲ್ಲಿಸಿರುವ ಬಮ್ಮನಕಟ್ಟಿ, ಇಡೀ ನೇಮಕಾತಿಯನ್ನೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಏನಿದು ಪ್ರಕರಣ?: ‘ಖಾಲಿ ಹುದ್ದೆಗಳ ನೇಮಕಾತಿಗೆ  ಜ. 11ರಂದು ಆನ್‌ಲೈನ್‌ ಮೂಲಕ ಪರೀಕ್ಷೆ ನಡೆಸಿದ ಐಐಎಂ, ಫೆ. 4ರಂದು ಫಲಿತಾಂಶ ಪ್ರಕಟಿಸಿತ್ತು. ಫಲಿತಾಂಶದ ಬಳಿಕ, ಆನ್‌ಲೈನ್‌ ಉತ್ತರ ಪ್ರತಿ (ರೆಸ್ಪಾನ್ಸ್‌ ಶೀಟ್‌), ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ಒದಗಿಸುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಫೆ. 13ರಂದು ಬೆಸ್ಕಾಂಗೆ ಅರ್ಜಿ ಸಲ್ಲಿಸಿದ್ದೆ.

ಮಾರ್ಚ್ 19ರಂದು ಪ್ರಶ್ನೆ ಪತ್ರಿಕೆ ಮತ್ತು ಕೀ ಉತ್ತರಗಳನ್ನು ಒದಗಿಸಿದ್ದ ಬೆಸ್ಕಾಂ, ಉತ್ತರ ಪ್ರತಿ ನೀಡಿಲ್ಲ. ನೇಮಕಾತಿ ವೇಳೆ ಪಾರದರ್ಶಕತೆ ಕಾಪಾಡುವ ದೃಷ್ಟಿಯಿಂದ ಪರೀಕ್ಷೆ ಬರೆದ ಅಭ್ಯರ್ಥಿಗೆ ಎಲ್ಲ ರೀತಿಯ ಮಾಹಿತಿಗಳನ್ನು ನೀಡುವಂತೆ ರಾಜ್ಯ ಮಾಹಿತಿ ಆಯೋಗ (ಎಸ್‌ಐಸಿ) ಮತ್ತು ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶಗಳನ್ನು ಉಲ್ಲೇಖಿಸಿ ಮೇಲ್ಮನವಿ ಪ್ರಾಧಿಕಾರಕ್ಕೆ ಮಾ. 16ರಂದು ಅರ್ಜಿ ಸಲ್ಲಿಸಿದಾಗ, ಉತ್ತರ ಪ್ರತಿ ಒದಗಿಸುವಂತೆ ಐಐಎಂಗೆ ಬೆಸ್ಕಾಂ (ಏ. 17ರಂದು) ಕೇಳಿತ್ತು. ಅದಕ್ಕೆ ಐಐಎಂ, ಏ. 30ರಂದು ಉತ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.