ADVERTISEMENT

‘ಆಪ್‌ ಬಲಿ ರಾಜಕಾರಣ’

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2015, 19:30 IST
Last Updated 14 ಏಪ್ರಿಲ್ 2015, 19:30 IST

ನವದೆಹಲಿ: ‘ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಕೇಂದ್ರದಲ್ಲಿ ಅಧಿಕಾರದಲ್ಲಿರುವವರ ಜತೆ ಒಂದು ರೀತಿ ಕಣ್ಸನ್ನೆ ಒಪ್ಪಂದ ಮಾಡಿಕೊಂಡು ಬೇರೆ ರಾಜ್ಯಗಳಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿರಬಹುದೆಂಬ ಅನುಮಾನ ಬರುತ್ತದೆ’ ಎಂದು ಹಿರಿಯ ಸಾಹಿತಿ ಹಾಗೂ ಕರ್ನಾಟಕ ಸರ್ವೋದಯ ಪಕ್ಷದ ಸಂಚಾಲಕ ದೇವನೂರ ಮಹಾದೇವ ಆರೋಪಿಸಿದರು.

ಯೋಗೇಂದ್ರ ಯಾದವ್‌ ಮತ್ತು ಪ್ರಶಾಂತ್‌ ಭೂಷಣ್‌ ಅವರ ನೇತೃತ್ವದ ಎಎಪಿ ಬಣ ಮಂಗಳವಾರ ಏರ್ಪಡಿಸಿದ್ದ ‘ಸ್ವರಾಜ್ಯ ಸಂವಾದ’ದಲ್ಲಿ ಭಾಗವಹಿಸಿದ್ದ ದೇವನೂರ ಮಹಾದೇವ, ಅರವಿಂದ್‌ ಕೇಜ್ರಿವಾಲ್‌ ತಮ್ಮ ಸ್ವಂತ ಹಿತಾಸಕ್ತಿಗಾಗಿ ಬೇರೆಯವರನ್ನು ಬಲಿ ಕೊಡುವ ‘ಬಲಿ ರಾಜಕಾರಣ’ ಮಾಡಿದ್ದಾರೆ ಎಂದು ವಿಷಾದಿಸಿದರು.

‘ಕಳೆದ ವರ್ಷದ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ ಮತದಾರರು ಆಮ್‌ ಆದ್ಮಿ ಪಾರ್ಟಿಯ ನಾಲ್ವರು ಸದಸ್ಯರನ್ನು ಚುನಾಯಿಸಿ ಕಳುಹಿಸಿದ್ದಾರೆ. ಆ ರಾಜ್ಯದ ಶೇ 24ರಷ್ಟು ಮತದಾರರು ಎಎಪಿ ಬೆಂಬಲಿಸಿದ್ದಾರೆ. ಅಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನೆಲ ಹದವಾಗಿದೆ. ದೆಹಲಿ ಹೊರಗೆ ಪಕ್ಷ ವಿಸ್ತರಿಸದಿದ್ದರೆ ಅವರನ್ನು ಬಲಿಪಶು ಮಾಡಿದಂತಾಗುವುದಿಲ್ಲವೇ?’ ಎಂದು ಮಹಾದೇವ ಕೇಳಿದರು.

‘ಕರ್ನಾಟಕದಲ್ಲಿ ನಾವೂ ಎಎಪಿ ಬಗ್ಗೆ ದೊಡ್ಡ ಕನಸು ಕಂಡಿದ್ದೆವು. ನಮ್ಮದೇ ಕರ್ನಾಟಕ ಸರ್ವೋದಯ ಪಕ್ಷ ಇದ್ದರೂ ಕೇಜ್ರಿವಾಲ್‌ ಅವರನ್ನು ಬೆಂಬಲಿಸಿದೆವು. ಚುನಾವಣೆಗೆ ದೇಣಿಗೆ ಸಂಗ್ರಹಿಸಿ ಕೊಟ್ಟೆವು. ನಮ್ಮ ಜನ ದೆಹಲಿವರೆಗೂ ಬಂದು ಪ್ರಚಾರ ಮಾಡಿದರು. ಆದರೆ, ಎಎಪಿ ನಾಯಕ ನಮ್ಮ ಕನಸನ್ನು ಛಿದ್ರ ಮಾಡಿದರು ಎಂದು ದೂರಿದರು.

ದೆಹಲಿ ಚುನಾವಣೆಯಲ್ಲಿ ಆಮ್‌ ಆದ್ಮಿ ಪಾರ್ಟಿ ಸೋಲಿಸಲು ಪ್ರಶಾಂತ್‌ ಭೂಷಣ್‌ ಪಿತೂರಿ ಮಾಡಿದರು. ಎಎಪಿ 25– 30 ಸ್ಥಾನಗಳನ್ನು  ಮಾತ್ರ ಗೆದ್ದು ವಿರೋಧ ಪಕ್ಷವಾಗಿ ಉಳಿಯಬೇಕೆಂದು ಅವರು ಬಯಸಿದ್ದರು ಎಂದು ಆರೋಪಿಸಲಾಗಿದೆ. ಪ್ರಶಾಂತ್‌ ಏನು ಹೇಳಿದ್ದರೆಂದು ನನಗೆ ಗೊತ್ತಿಲ್ಲ. ಅಕಸ್ಮಾತ್‌ ವಿರೋಧ ಪಕ್ಷವಾಗಿ ಎಎಪಿ ಇರಬೇಕೆಂದು ಹೇಳಿದ್ದು ನಿಜವಾಗಿದ್ದರೆ ಅವರೊಬ್ಬ ದಾರ್ಶನಿಕರಂತೆ ಕಾಣುತ್ತಾರೆ’ ಎಂದು ಮಹಾದೇವ ಹೇಳಿದರು.

ದೇವನೂರ ಮಹಾದೇವ ಅವರ ಭಾಷಣವನ್ನು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಇಂಗ್ಲಿಷ್‌ಗೆ ಅನುವಾದಿಸಿದರು. ರೈತ ಮುಖಂಡರಾದ ಚಾಮರಸ ಮಾಲಿಪಾಟೀಲ, ಬಡಗಲಪುರ ನಾಗೇಂದ್ರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.