ADVERTISEMENT

‘ಆರೋಪಪಟ್ಟಿಗೆ ಅಂತಿಮ ಸಿದ್ಧತೆ’

ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

ಬೆಂಗಳೂರು: ‘ರಾಮಕಥಾ ಗಾಯಕಿಯೊಬ್ಬರು ನೀಡಿದ ದೂರಿನ ಅನ್ವಯ ರಾಘವೇಶ್ವರ ಭಾರತಿ ಸ್ವಾಮೀಜಿ ವಿರುದ್ಧ ದಾಖಲಾದ ಅತ್ಯಾಚಾರ ಪ್ರಕರಣದ ಆರೋಪಪಟ್ಟಿ ಸಿದ್ಧಪಡಿಸುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ’ ಎಂದು  ಗೃಹಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ದೂರುದಾರರು 250ಕ್ಕೂ ಅಧಿಕ ಘಟನೆಗಳನ್ನು ದೂರಿನಲ್ಲಿ ವಿವರಿಸಿದ್ದರು. ಪ್ರತಿಯೊಂದು ಘಟನೆಗಳನ್ನು ಸಿಐಡಿ ಕೂಲಂಕಷವಾಗಿ ತನಿಖೆ ನಡೆಸಬೇಕಾಗಿರುವುದರಿಂದ ಆರೋಪ ಪಟ್ಟಿ ಸಲ್ಲಿಕೆ ವಿಳಂಬ ಆಗಿದೆ’ ಎಂದು ವಿವರಿಸಿದರು.

‘ಈ ಪ್ರಕರಣದಲ್ಲಿ ಪೊಲೀಸ್‌ ಅಧಿಕಾರಿಗಳು ಯಾರ ಪ್ರಭಾವಕ್ಕೂ ಒಳಗಾಗಿಲ್ಲ. ಅವರಿಗೆ ವಹಿಸಿದ ಕೆಲಸವನ್ನು ನಿರ್ವಹಿಸುವುದಕ್ಕೆ ಮುಕ್ತ ಸ್ವಾತಂತ್ರ್ಯ ಇದೆ’ ಎಂದು ಸ್ಪಷ್ಟಪಡಿಸಿದರು.

‘ರಾಘವೇಶ್ವರ ಸ್ವಾಮೀಜಿ ವಿರುದ್ಧ ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಇತ್ತೀಚೆಗೆ ದಾಖಲಾಗಿರುವ ದೂರಿನ ತನಿಖೆಯನ್ನೂ ಸಿಐಡಿ ಪೊಲೀಸರೇ ನಡೆಸಲಿದ್ದಾರೆ’ ಎಂದರು.

‘ನವದೆಹಲಿಯ ನಿರ್ಭಯಾ ಪ್ರಕರಣದ ಬಳಿಕ ಅತ್ಯಾಚಾರ ಪ್ರಕರಣಗಳ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚಾಗಿದೆ. ಹಾಗಾಗಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಶೇಕಡಾ 95ಕ್ಕೂ ಅಧಿಕ ಪ್ರಕರಣಗಳಲ್ಲಿ ಆರೋಪಿಗಳ ಬಂಧನ ಆಗಿದೆ’ ಎಂದರು.

‘ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಬಗ್ಗೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕೆಲವು ಸಲಹೆಗಳನ್ನು ನೀಡಿದ್ದಾರೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

‘ಪಕ್ಷಕ್ಕಿಂತ ಕಾಗೋಡು ಮಿಗಿಲು’: ಬಿಬಿಎಂಪಿಯಲ್ಲಿ ಜೆಡಿಎಸ್‌ ಜತೆ ಮೈತ್ರಿಗೆ ಮುಂದಾದ ಕ್ರಮವನ್ನು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್‌, ‘ಕಾಗೋಡು ತಿಮ್ಮಪ್ಪ ಅವರು ವಿಧಾನಸಭಾಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ಪಕ್ಷದಲ್ಲಿಲ್ಲ. ಅವರು ಪಕ್ಷಕ್ಕಿಂತಲೂ ಉನ್ನತ ಸ್ಥಾನದಲ್ಲಿದ್ದಾರೆ.  ಹುದ್ದೆಯ ಗೌರವವನ್ನು ಉಳಿಸಿಕೊಂಡಿದ್ದಾರೆ. ಮೈತ್ರಿಯ ಬಗ್ಗೆ ಅವರು ನೀಡಿರುವ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗುವುದು’ ಎಂದರು.

‘ಬಿಜೆಪಿಯನ್ನು ಹೊರತುಪಡಿಸಿ ಉಳಿದ ಪಕ್ಷಗಳ ಜತೆ ಕಾಂಗ್ರೆಸ್‌ ಹಿಂದೆಯೂ ಮೈತ್ರಿ ಮಾಡಿಕೊಂಡಿದೆ. ಇದರಲ್ಲಿ ವಿಶೇಷ ಏನೂ ಇಲ್ಲ. ಒಂದು ವೇಳೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಅದು ಪ್ರಶ್ನಾರ್ಹ. ಜೆಡಿಎಸ್‌– ಬಿಜೆಪಿ ಮೈತ್ರಿ ಸಾಧ್ಯವಾಗುವುದಾದರೆ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಏಕೆ ಸಾಧ್ಯ ಇಲ್ಲ’ ಎಂದು ಅವರು ಪ್ರಶ್ನಿಸಿದರು.

‘ಬಿಬಿಎಂಪಿಯ ಮೇಯರ್‌ ಚುನಾವಣೆಯಲ್ಲಿ ಈ ಹಿಂದೆಯೂ  ಸಂಸದರು ಹಾಗೂ ಶಾಸಕರು ಮತದಾನ ಮಾಡಿದ್ದರು. ಆದರೆ ಈಗ ಅನಗತ್ಯ ವಿವಾದ ಸೃಷ್ಟಿಸಲಾಗುತ್ತಿದೆ’ಎಂದರು.
*
ಯಾರೇ ಮೇಯರ್‌ ಆದರೂ ಕಾಂಗ್ರೆಸ್‌ ಸಹಕಾರ ನೀಡಲಿದೆ. ನಮ್ಮ ಪಕ್ಷದವರೇ ಮೇಯರ್‌ ಆದರೆ, ಇನ್ನಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅನುಕೂಲ ಆಗಲಿದೆ.
- ಕೆ.ಜೆ.ಜಾರ್ಜ್‌,
ಗೃಹಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.