ADVERTISEMENT

‘ತಿಂಗಳ ಒಳಗೆ ಗುತ್ತಿಗೆ ಪೌರಕಾರ್ಮಿಕ ಪದ್ಧತಿ ರದ್ದು’

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST
ನಾರಾಯಣ
ನಾರಾಯಣ   

ದಾವಣಗೆರೆ: ಇನ್ನು ಒಂದು ತಿಂಗಳ ಒಳಗೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪೌರ ಕಾರ್ಮಿಕರ  ಪದ್ಧತಿ ರದ್ದಾಗಲಿದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ ಅವರು ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆ ಪದ್ಧತಿ ತೆಗೆದುಹಾಕಲು ಮುಖ್ಯಮಂತ್ರಿ ಕೂಡ ಉತ್ಸುಕರಾಗಿದ್ದಾರೆ. ಹಂತಹಂತವಾಗಿ ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡುವುದಾಗಿ ಅವರು ಕಳೆದ ಬಜೆಟ್‌ನಲ್ಲೂ ಹೇಳಿದ್ದರು. ದೇಶದಲ್ಲಿ ಹರಿಯಾಣದ ನಂತರ ಕರ್ನಾಟಕದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆ ರಾಜ್ಯದಲ್ಲಿ ಪೌರಕಾರ್ಮಿಕರಿಗೆ ಪುರಸಭೆಯಿಂದ ನೇರವಾಗಿ  ₹ 11,300 ನೀಡಲಾಗುತ್ತಿದೆ ಇಲ್ಲಿ ₹ 14 ಸಾವಿರ ನೀಡುವಂತೆ ಆಯೋಗ ಶಿಫಾರಸು ಮಾಡಿದೆ.  ₹ 9 ಸಾವಿರ ಮಾಸಿಕ ವೇತನದ ಜೊತೆಗೆ ₹ 3 ಸಾವಿರ ‘ರಿಸ್‌್ಕ’ ಭತ್ಯೆ, ₹ 2 ಸಾವಿರ ವೈದ್ಯಕೀಯ ಭತ್ಯೆ ಇದರಲ್ಲಿ ಒಳಗೊಂಡಿದೆ ಎಂದು ಅವರು ವಿವರ ನೀಡಿದರು.

ರಾಜ್ಯದಲ್ಲಿ ಸುಮಾರು ೩೫ ಸಾವಿರ ಗುತ್ತಿಗೆ ಪೌರ ಕಾರ್ಮಿಕರಿದ್ದು, ಕನಿಷ್ಠ ವೇತನ, ಇಎಸ್‌ಐ, ಪಿಎಫ್‌ - ಸೇರಿದಂತೆ ಯಾವುದೇ ಮೂಲ ಸೌಕರ್ಯಗಳೂ ಅವರಿಗೆ ಸಿಗುತ್ತಿಲ್ಲ. ಕನಿಷ್ಠ ವೇತನ ನೀಡದ ಸ್ಥಳೀಯ ಸಂಸ್ಥೆಗಳ ಒಟ್ಟು 18 ಮಂದಿ ಮುಖ್ಯಾಧಿಕಾರಿಗಳು ಮತ್ತು ಆಯುಕ್ತರಿಗೆ ಈಗಾಗಲೇ ನೋಟಿಸ್‌ ಜಾರಿಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದರು.

ವಿಧಾನಸೌಧ, ವಿಕಾಸ ಸೌಧದಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಕೂಡ ಕನಿಷ್ಠ ವೇತನ ಸಿಗುತ್ತಿಲ್ಲ. ಈಗಾಗಲೇ ಡಿಪಿಆರ್ ಕಾರ್ಯದರ್ಶಿಗೆ ಆಯೋಗವು ನೋಟಿಸ್‌ ನೀಡಿದ್ದು, ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ವಿವರ ಕೇಳಲಾಗಿದೆ ಎಂದು  ತಿಳಿಸಿದರು.

ಪೌರ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಸದುದ್ದೇಶದಿಂದ ರಾಜ್ಯ ಪೌರ ಕಾರ್ಮಿಕರ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲಿದ್ದು, ಇನ್ನೊಂದು ತಿಂಗಳಲ್ಲಿ ಇದು ಅಸ್ತಿತ್ವಕ್ಕೆ ಬರಲಿದೆ. ಗುಜರಾತ್‌ನಲ್ಲಿ ಮಾತ್ರ ಇಂಥ ಮಂಡಳಿ ಇದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.