ADVERTISEMENT

‘ಮದುವೆ’ ಮುದ್ರೆ ಪಡೆದ ದೇವದಾಸಿ ಪ್ರಕರಣ!

ತೇಪೆ ಹಾಕಲು ಯತ್ನ: ಆರೋಪ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2014, 19:30 IST
Last Updated 19 ಏಪ್ರಿಲ್ 2014, 19:30 IST

ಹರಪನಹಳ್ಳಿ: ತಾಲ್ಲೂಕಿನ ಕುಂಚೂರು ಗ್ರಾಮದ ಪರಿಶಿಷ್ಟ ಜನಾಂಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಮುತ್ತು ಕಟ್ಟಿಸುವ ಮೂಲಕ ದೇವದಾಸಿ ಪದ್ಧತಿಗೆ ತಳ್ಳ­ಲಾ­ಗಿದೆ ಎಂದು ಆರೋಪಿಸಲಾದ ಪ್ರಕರಣ ಇದೀಗ ಹೊಸ ತಿರುವು ಪಡೆದು­ಕೊಂಡಿದೆ.

‘ವಿದ್ಯಾರ್ಥಿನಿಗೆ ಮುತ್ತು ಕಟ್ಟಿಸಿಲ್ಲ; ಆಕೆ ಪ್ರೀತಿಸುತ್ತಿದ್ದ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದೇವೆ ಎಂದು ಪೋಷ­ಕರು ಕಾರ್ಯ­ತಂತ್ರ ರೂಪಿಸಿ­ದ್ದಾರೆ. ಇದಕ್ಕೆ ಪೊಲೀಸ್‌ ಇಲಾಖೆ ಸಹಕಾರ ನೀಡಿದೆ’ ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘ ಆರೋಪಿಸಿದೆ.

ವಿದ್ಯಾರ್ಥಿನಿಯನ್ನು ಏ. 15ರಂದು ‘ದವನದ ಹುಣ್ಣಿಮೆ’ ದಿನ ದೇವದಾಸಿ ಪದ್ಧತಿಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ರಾಜ್ಯ ದೇವದಾಸಿ ಮಹಿಳಾ ಸಂಘಟನೆಗೆ ಬಂದಿತ್ತು. ಮಾರನೇ ದಿನ ಸಂಘದ ಪದಾಧಿಕಾರಿಗಳು ವಿದ್ಯಾರ್ಥಿನಿ­ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ­ದ್ದಾರೆ. ಆ ವೇಳೆಗೆ ಅಂದರೆ, ರಾತ್ರಿಯೇ ಮುತ್ತು ಕಟ್ಟಿಸುವ ಪದ್ಧತಿ ಆಚರಣೆ ಮಾಡಲಾಗಿದೆ. ಅದಕ್ಕೆ ಉಪಯೋಗಿಸಿದ ಆಚರಣೆಗಳ ವಿಧಿ– ವಿಧಾನಗಳ ಪೂಜಾ ಸಾಮಗ್ರಿ ಗೋಚರಿಸಿದೆ.

ಪೋಷಕರನ್ನು ಪ್ರಶ್ನಿಸಿ ದಾಗ, ನಾವು ನಮ್ಮ ಮಗಳನ್ನು ಆಕೆಯ ಮಾವ ಬಸವರಾಜಪ್ಪ ಎಂಬಾತ ನೊಂದಿಗೆ ಮದುವೆ ಮಾಡಿಕೊಟ್ಟಿದ್ದೇವೆ ಎಂದು ಸಂಘಟಕರ ಬಾಯಿ ಮುಚ್ಚಿಸಲು ಯತ್ನಿಸಿದ್ದಾರೆ. ಮದುವೆ ಮಾಡಿಕೊಡ ಲಾಗಿದೆ ಎಂದು ಹೇಳುತ್ತಿರುವ ವ್ಯಕ್ತಿಗೆ ಈ ಹಿಂದೆಯೇ ಮದುವೆಯಾಗಿದೆ. ಆತನಿಗೆ

ಪ್ರಾಯಕ್ಕೆ ಬಂದಿರುವ ಮಕ್ಕಳು ಇದ್ದಾರೆ ಎನ್ನಲಾಗಿದೆ.

ಪ್ರಕರಣದ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸುವಂತೆ ಸಂಘಟನೆ ಸದಸ್ಯರು ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದಾರೆ.

ಸ್ವಾಮೀಜಿ ಭೇಟಿ: ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಶನಿ­ವಾರ ವಿದ್ಯಾರ್ಥಿನಿಯ ಮನೆಗೆ ಭೇಟಿ ನೀಡಿ­­ದರು. ಆದರೆ, ವಿಮೋಚನಾ ಸಂಘದ ದೂರು ಹಾಗೂ ಪತ್ರಿಕಾ ವರದಿ­ಯಿಂದ ಆಕ್ರೋಶಗೊಂಡ ಪೋಷ ಕರು ಹಾಗೂ ಅವರ ಸಂಬಂಧಿಕರು, ಸ್ವಾಮೀಜಿಗೆ ಮಾತನಾಡಲು ಅವಕಾಶ ಕೊಡಲಿಲ್ಲ.

‘ನಾವು ನಮ್ಮ ಮಗಳನ್ನು ಪ್ರೀತಿಸು­ತ್ತಿದ್ದ ಆಕೆಯ ಮಾವನಿಗೆ ಮದುವೆ ಮಾಡಿ­ಕೊಟ್ಟಿದ್ದೇವೆ. ಇದು ತಪ್ಪೇ?. ನಿಮಗೆ ಮುತ್ತು ಕಟ್ಟಿಸಿದ್ದೇವೆ ಎಂದು ಯಾರು ಹೇಳಿದರು? ದೇವದಾಸಿ ಪಟ್ಟವನ್ನು ನಾವೇ ನಮ್ಮ ಮಗಳಿಗೆ ಕಟ್ಟಲು ಸಾಧ್ಯವೇ ಇಲ್ಲ. ಒಂದೊಮ್ಮೆ ನಾವು ಮುತ್ತು ಕಟ್ಟಿದ್ದೇವೆ ಎಂದು ಸಾಬೀತು ಪಡಿಸಿದರೆ, ನಮ್ಮನ್ನು ಗಲ್ಲು ಶಿಕ್ಷೆಗೆ ಒಳಪಡಿಸಲಿ...’ ಎಂದು ಹೇಳಿ­ದರು. ತಮ್ಮ ಮಾತನ್ನು ಆಲಿಸಲು ಮನೆ­ಯವರು ತಯಾರಿರದ ಸ್ವಾಮೀಜಿ ಅಲ್ಲಿಂದ ನಿರ್ಗಮಿಸಿದರು.

ಈ ಮಧ್ಯೆ ಮಾರ್ಗ ಮಧ್ಯೆ ಹಾದು ಹೋಗುತ್ತಿದ್ದ ವಿಮೋಚನಾ ಸಂಘದ ಪದಾಧಿಕಾರಿಗಳನ್ನು ಪೋಷ­ಕರು ಹಾಗೂ ಸಂಬಂಧಿಕರು ನಿಂದಿಸಿ­ದರು. ಪರಿಸ್ಥಿತಿ ಘರ್ಷಣೆಯ ಹಂತ ತಲುಪಿತ್ತು. ಆದರೂ ಸ್ಥಳದಲ್ಲಿ ಹಾಜ­ರಿದ್ದ ಪಿಎಸ್‌ಐ ನೂರ್‌ ಅಹಮ್ಮದ್‌ ಮೌನವಹಿಸಿದರು ಎಂದು ಸಂಘಟನೆ ಸದಸ್ಯರು ಆರೋಪಿಸಿದ್ದಾರೆ.

‘ದೇವದಾಸಿ ಪದ್ಧತಿಗೆ ಒಳಪಡಿಸ­ಲಾಗಿದೆ ಎನ್ನಲಾದ ಯುವತಿ ಹಾಗೂ ಆಕೆಯ ಪೋಷಕರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗಿದೆ. ಮಗಳಿಗೆ ಮುತ್ತು ಕಟ್ಟಿಸಿಲ್ಲ. ಬಡವರಾದ ಕಾರಣ ಅದ್ದೂರಿಯಾಗಿ ಮದುವೆ ಮಾಡದೆ, ಸಂಪ್ರದಾಯದಂತೆ ಆಕೆ ಪ್ರೀತಿಸುತ್ತಿದ್ದ  ಮಾವನೊಂದಿಗೆ ಮದುವೆ ಮಾಡಿಸಿ­ದ್ದೇವೆ’ ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಯುವತಿಗೆ 18 ವರ್ಷ­ವಾಗಿದೆ. ಮದುವೆ ಆಮಂತ್ರಣ ಪತ್ರಿಕೆ ಹಾಗೂ ಮದುವೆ ಸಂದರ್ಭದಲ್ಲಿ ತೆಗೆದ ಭಾವಚಿತ್ರ ಹಾಜರುಪಡಿಸಿದ್ದಾರೆ. ಎಲ್ಲ ದಾಖಲೆಗಳು ಸರಿ ಇವೆ. ಇದನ್ನು ದೇವ­ದಾಸಿ ಪ್ರಕರಣ ಎಂದು ಪರಿಗಣಿಸ­ಲಾ­ಗದು’ ಎಂದು ಪಿಎಸ್‌ಐ ಅಹಮ್ಮದ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಮಹಿಳಾ ವಿಮೋಚನಾ ಸಂಘದ ಸದಸ್ಯರ ಮೇಲೆ ಹಲ್ಲೆ, ಕೊಲೆ ಯತ್ನದ ಪ್ರಕರಣ ದಾಖಲಾಗಿದೆ.

‘ಮುಚ್ಚಿಹಾಕಲು ಯತ್ನ’
ಮುತ್ತು ಕಟ್ಟಿಸಿದ ಪ್ರಕರಣವನ್ನು ಮುಚ್ಚಿಹಾಕಲು ಮದುವೆ ಮಾಡ ಲಾಗಿದೆ ಎಂದು ಕಟ್ಟುಕಥೆ ಕಟ್ಟಲಾಗಿದೆ. ಇದಕ್ಕೆ ಪೊಲೀಸರು ಸಹಕಾರ ನೀಡಿದ್ದಾರೆ. ಆಮಂತ್ರಣ ಪತ್ರಿಕೆಯನ್ನು ದಿಢೀರ್‌ ಮುದ್ರಿಸುವ ಮೂಲಕ ಪ್ರಕರಣ ಮುಚ್ಚಿಹಾಕುವ ತಂತ್ರಗಾರಿಕೆ ರೂಪಿಸ ಲಾಗಿದೆ. ನಮ್ಮ ಮೇಲೆ ಪೋಷ ಕರು ಹಾಗೂ ಸಂಬಂಧಿಕರು ಹಲ್ಲೆ ನಡೆಸಲು ಮುಂದಾದರೂ ಪಿಎಸ್‌ಐ ನೂರ್‌ ಅಹಮ್ಮದ್‌ ಕೈಚೆಲ್ಲಿ ನಿಂತಿದ್ದರು. ಪೊಲೀಸರೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

– ಬಿ.ಮಾಳಮ್ಮ, ದೇವದಾಸಿ ಮಹಿಳಾ ವಿಮೋಚನಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ

ಮೌಢ್ಯ ನಿರ್ಮೂಲನೆಗೆ ಶಿಕ್ಷಣ ಅಗತ್ಯ: ಸ್ವಾಮೀಜಿ
ಹರಪನಹಳ್ಳಿ: ಮೂಢನಂಬಿಕೆ ಹಾಗೂ ದೈವತ್ವದ ಹೆಸರಿನಲ್ಲಿ ಯುವತಿಯರಿಗೆ ಮುತ್ತು ಕಟ್ಟಿಸುವ ಮೂಲಕ ದೇವದಾಸಿ ಪದ್ಧತಿಗೆ ನೂಕುತ್ತಿರುವ ಪ್ರಕರಣಗಳು ನೋವಿನ ಸಂಗತಿ ಎಂದು ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ADVERTISEMENT

ದೇವದಾಸಿ ಪದ್ಧತಿಗೆ ಒಳಪಡಿಸಲಾಗಿದೆ ಎನ್ನಲಾದ ತಾಲ್ಲೂಕಿನ ಕಂಚೂರು ಗ್ರಾಮದ ಪರಿಶಿಷ್ಟರ ಕಾಲೊನಿಯಲ್ಲಿರುವ ಯುವತಿಯ ಮನೆಗೆ ಶನಿವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.