ADVERTISEMENT

‘ಹೊಲ ಇಲ್ದಿದ್ರೆ ಹೆಣ್ಣು ಕೊಡಲ್ಲ’

​ಪ್ರಜಾವಾಣಿ ವಾರ್ತೆ
Published 16 ಮೇ 2015, 19:30 IST
Last Updated 16 ಮೇ 2015, 19:30 IST

ಮೈಸೂರು: ‘ಕಾನೂನು ಪದವಿ ಪಡೆದಿದ್ದೆ. ಬೆಂಗಳೂರಿನಲ್ಲಿ ವಕೀಲ ಕೂಡ. ಆದರೆ, ನನಗೆ ಮದುವೆ ಮಾಡಲು ಮುಂದಾದಾಗ ಹೊಲ– ಗದ್ದೆ ಇದ್ದರೆ ಮಾತ್ರ ಹೆಣ್ಣು ಕೊಡುತ್ತೇವೆ ಎಂದರು. ಈ ದೇಶದಲ್ಲಿ ಭೂಮಿಗೆ ಎಷ್ಟೊಂದು ಬೆಲೆ ಸ್ವಾಮಿ...!’

– ಹೀಗೆ ನೆನಪಿನ ಬುತ್ತಿ ಬಿಚ್ಚಿಟ್ಟಿದ್ದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌. ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ‘ಭೂ ಸ್ವಾಧೀನ ವಿವಾದ ಮತ್ತು ಸವಾಲುಗಳಿಗೆ ಸಂಬಂಧಿಸಿದ ಕಾನೂನು’ ಕುರಿತು ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಅವರು ಹೇಳಿದರು.

‘ಈ ದೇಶದಲ್ಲಿ ಸಾಲ ಕೊಡಲೂ ಭೂಮಿ ಇರಬೇಕು, ಬೇಲ್‌ ಕೊಡಲೂ ಭೂಮಿ ಇರಬೇಕು. ಹೆಣ್ಣು ಕೊಡುವವರಂತೂ ಏನಿಲ್ಲದಿದ್ದರೂ ಭೂಮಿ ಇರಬೇಕೆಂದು ಕೇಳುತ್ತಾರೆ. ಒಟ್ಟಾರೆ ಭೂಮಿ ಜತೆಗೆ ನಮ್ಮ ಜನರ ಸಾಂಸ್ಕೃತಿಕ, ಸಾಮಾಜಿಕ ಹಾಗೂ ಆರ್ಥಿಕ ಸಂಬಂಧಗಳು ಬೆಸೆದುಕೊಂಡಿವೆ. ಭೂ ಸ್ವಾಧೀನ ಮಾಡಿಕೊಳ್ಳುವ ಮುನ್ನ ಸರ್ಕಾರ ಇದೆಲ್ಲವನ್ನೂ ಗಮನಕ್ಕೆ ತೆಗೆದುಕೊಳ್ಳಬೇಕು’ ಎಂದರು. ನಂತರ ಮಾತನಾಡಿದ ವಿದ್ಯಾವರ್ಧಕ ಸಂಸ್ಥೆಯ ಖಜಾಂಚಿ ಎಸ್‌.ಎನ್‌. ಲಕ್ಷ್ಮೀನಾರಾಯಣ, ‘ನನಗೂ ಎಷ್ಟು ಭೂಮಿ ಇದೆ ಎಂದು ಖಚಿತ ಮಾಡಿಕೊಂಡ ಮೇಲೆಯೇ ಹೆಣ್ಣು ಕೊಟ್ಟರು. ಈಗೆಲ್ಲ ಲವ್‌ ಮ್ಯಾರೇಜ್‌ಗಳು ಹೆಚ್ಚಾಗಿವೆ. ಹಾಗಾಗಿ, ಹೊಲ– ಗದ್ದೆ ಕೇಳೋರು ಕಡಿಮೆ ಆಗಿದ್ದಾರೆ ಅನ್ನಿಸುತ್ತದೆ’ ಎಂದು ಚಟಾಕಿ ಹಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.