ADVERTISEMENT

₹1.58 ಕೋಟಿ ಮೌಲ್ಯದ ಅಕ್ರಮ ಆಸ್ತಿಗಳು ಪತ್ತೆ

ಲೋಕಾಯುಕ್ತ ದಾಳಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2015, 20:19 IST
Last Updated 30 ಡಿಸೆಂಬರ್ 2015, 20:19 IST

ತುಮಕೂರು: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಆಡಳಿತಾಧಿಕಾರಿ ವಿ.ವೆಂಕಟೇಶ್‌ ಅವರ ಬೆಂಗಳೂರು, ತುಮಕೂರು, ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ₹ 1.58 ಕೋಟಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದಾರೆ.

ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿರುವ ಕುರಿತು ವಿ.ವೆಂಕಟೇಶ್‌ ವಿರುದ್ಧ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಎಂ.ಶಿವಕುಮಾರ್ ದೂರು ದಾಖಲಿಸಿಕೊಂಡಿದ್ದರು. ಜಿಲ್ಲಾ ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದು ಡಿ. 29ರಂದು ಬೆಂಗಳೂರು, ತುಮಕೂರು ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.

ನಗರದ ಮರಳೂರು ಗ್ರಾಮದ ಡಾ.ರಾಜ್‌ಕುಮಾರ್ ಉದ್ಯಾನ ಬಳಿ ಪತ್ನಿ ವಿಜಯಾ ಹೆಸರಲ್ಲಿ 40X40 ಅಡಿ ನಿವೇಶನದಲ್ಲಿ 4 ಅಂತಸ್ತಿನ 7 ಮನೆಗಳು, 41X 40 ಅಡಿ ನಿವೇಶನದಲ್ಲಿ ನಾಲ್ಕು ಮನೆಗಳು, ಪಾವಗಡ ತಾಲ್ಲೂಕು ನಾಗಲಮಡಿಕೆ ಹೋಬಳಿ ಕ್ಯಾತಗಾನಚೆರ್ಲು ಗ್ರಾಮದ ಸರ್ವೇ ನಂ. 30/1ರಲ್ಲಿ ಪುತ್ರ ವಿನಯ್‌ ಹೆಸರಲ್ಲಿ 8 ಎಕರೆ ಜಮೀನು, ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಸೋಂಪುರ ಕಾವಲ್‌ ಗ್ರಾಮದ ಸರ್ವೇ ನಂ. 40/1ರಲ್ಲಿ 2.33 ಎಕರೆ ಜಮೀನು, ಸರ್ವೇ ನಂ. 42ರಲ್ಲಿ 1.28 ಎಕರೆ ಜಮೀನು ಹೊಂದಿರುವುದು ಪತ್ತೆಯಾಗಿದೆ.
ಕುಟುಂಬ ಸದಸ್ಯರ ವಿವಿಧ ಬ್ಯಾಂಕ್‌ಗಳ 17 ಖಾತೆಗಳಲ್ಲಿ ₹ 1.66 ಲಕ್ಷ ನಗದು, 133 ಗ್ರಾಂ ಚಿನ್ನ, 1.3 ಕೆ.ಜಿ ಬೆಳ್ಳಿ ಸಾಮಗ್ರಿ, ಮಾರುತಿ ಸುಜುಕಿ ಕಂಪೆನಿಯ ಸಿಯಾಜ್ ಯುಡಿಐ ಕಾರು, 2 ದ್ವಿಚಕ್ರ ವಾಹನ ಇದೆ.

ಆರೋಪಿ ವೆಂಕಟೇಶ್‌ ಒಟ್ಟು ಆಸ್ತಿಯ ಮೌಲ್ಯ ₹ 2.69 ಕೋಟಿ. ಇದರಲ್ಲಿ ₹ 1.58 ಕೋಟಿ ಮೌಲ್ಯದ ಆಸ್ತಿ ಆದಾಯ ಮೀರಿದ್ದಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ವೆಂಕಟೇಶ್‌ ಹಾಗೂ ಪತ್ನಿ ವಿಜಯಾ ಹೆಸರಿನಲ್ಲಿರುವ ಬೆಂಗಳೂರು, ಶಿವಮೊಗ್ಗ, ನೆಲಮಂಗಲದ ನಿವಾಸಗಳ ಮೇಲೂ ದಾಳಿ ನಡೆದಿದೆ.ಲೋಕಾಯುಕ್ತ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಚ್.ಜಗದೀಶ್, ಡಿವೈಎಸ್‌ಪಿ ಎಸ್.ಎಂ.ಶಿವಕುಮಾರ್, ಇನ್‌ಸ್ಪೆಕ್ಟರ್‌ಗಳಾದ ರಂಗಸ್ವಾಮಿ, ಟಿ.ವಿ.ಮಂಜುನಾಥ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ಮತ್ತೊಂದು ದಾಳಿ
ಕನಕಪುರ: ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ನಗರ ಎ.ವಿ.ಆರ್.ರಸ್ತೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿರೂಪಾಕ್ಷ  ಅವರ ಮನೆ ಮೇಲೆ ಬುಧವಾರ ದಾಳಿ ನಡೆಸಿದ್ದಾರೆ. ವಿರೂಪಾಕ್ಷ ಅವರ 3ಮನೆ, 2 ಬೈಕ್, 2 ಕಾರು ಸೇರಿದಂತೆ ₹ 50 ಲಕ್ಷ ಮೌಲ್ಯದ ಆಸ್ತಿಯ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.