ADVERTISEMENT

10 ವರ್ಷದಲ್ಲಿ 18 ಆಯುಕ್ತರು!

ತಿವಾರಿ ಸಾವಿನ ಸುತ್ತ ಸುಳಿದಾಡುತ್ತಿವೆ ಉತ್ತರ ಸಿಗದ ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 24 ಮೇ 2017, 20:06 IST
Last Updated 24 ಮೇ 2017, 20:06 IST
10 ವರ್ಷದಲ್ಲಿ 18 ಆಯುಕ್ತರು!
10 ವರ್ಷದಲ್ಲಿ 18 ಆಯುಕ್ತರು!   

ಬೆಂಗಳೂರು: ಆಹಾರ ಇಲಾಖೆಯ ಆಯುಕ್ತರಾಗಿದ್ದ ಅನುರಾಗ್‌ ತಿವಾರಿ ಸಂಶಯಾಸ್ಪದ ಸಾವಿನ ಸುತ್ತ ಉತ್ತರ ಸಿಗದ ಹಲವು ಪ್ರಶ್ನೆಗಳು ಸುಳಿದಾಡುತ್ತಿವೆ.

‘₹ 2,000 ಕೋಟಿ ಹಗರಣವನ್ನು ಬಯಲಿಗೆಳೆಯಲು ಮುಂದಾದುದೇ ಅನುರಾಗ್‌ ಸಾವಿಗೆ ಕಾರಣ’ ಎಂದು ಸಹೋದರ ಮಯಾಂಕ್‌ ತಿವಾರಿ ಮಾಡಿದ ಆರೋಪ ಇಲಾಖೆಯ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸಿದೆ.

10 ವರ್ಷದಲ್ಲಿ 18 ಆಯುಕ್ತರು!:
10 ವರ್ಷಗಳ (2007 ಏ. 5ರಿಂದ 2017ರ ಏ. 10) ವರೆಗಿನ ಅವಧಿಯಲ್ಲಿ ಆಹಾರ ಇಲಾಖೆಗೆ ಪ್ರಭಾರ ಸೇರಿ ಒಟ್ಟು ಹದಿನೆಂಟು ಮಂದಿ ಐಎಎಸ್‌ ಅಧಿಕಾರಿಗಳು ಆಯುಕ್ತರಾಗಿ ಬಂದಿದ್ದಾರೆ.

ಈ ಪೈಕಿ ಬಹುತೇಕ ಆಯುಕ್ತರು ಕೆಲವೇ ತಿಂಗಳು ಮಾತ್ರ ಕೆಲಸ ಮಾಡಿದ್ದಾರೆ. ಈ ಪೈಕಿ, ಕೆ.ಎಚ್‌ ಗೋವಿಂದರಾಜ್‌ ಮಾತ್ರ ಹೆಚ್ಚು ಕಾಲ ( 2011ರ ಜು. 5ರಿಂದ 2013ರ ಫೆ. 4ರವರೆಗೆ) ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಅದರಲ್ಲೂ 2015ರ ಡಿ. 31ರಿಂದ 2016ರ ಡಿ. 23 ಮಧ್ಯೆ ಒಂದು ವರ್ಷದ ಅವಧಿಯಲ್ಲಿ ವಿ. ಅನ್ಬುಕುಮಾರ್‌, ಆರ್‌.ಆರ್‌ ಜನ್ನು, ಅಜಯ್‌ ನಾಗಭೂಷಣ್‌, ಶಾಂತಾ ಎಲ್‌. ಹುಲಮನಿ (ಹಿರಿಯ ಕೆಎಎಸ್‌ ಅಧಿಕಾರಿ) ಮತ್ತು ಮನೋಜ್‌ ಕುಮಾರ್‌ ಜೈನ್‌ ಆಯುಕ್ತ ಹುದ್ದೆಯನ್ನು ನಿಭಾಯಿಸಿದ್ದಾರೆ.

‘ಇಷ್ಟೊಂದು ಸಂಖ್ಯೆಯಲ್ಲಿ ಆಯುಕ್ತರನ್ನು ಸರ್ಕಾರ ಬದಲಾಯಿಸಲು ಕಾರಣವೇನು’ ಎಂಬ ಪ್ರಶ್ನೆಯೂ ಈಗ ಉದ್ಬವಿಸಿದೆ.

ಸಾವಿನ ಮನೆಯಲ್ಲಿ ರಾಜಕೀಯ: ಖಾದರ್‌
‘ಆಹಾರ ಇಲಾಖೆಯಲ್ಲಿ ₹ 2,000 ಕೋಟಿ  ಅಲ್ಲ; ₹ 2,000 ಮೊತ್ತದ ಹಗರಣ ನಡೆದಿರುವ ದಾಖಲೆ ಇದ್ದರೂ ಬಿಜೆಪಿ ನಾಯಕರು ನೀಡಲಿ, ಆ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಸಚಿವ ಯು.ಟಿ. ಖಾದರ್‌ ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಲು ರಾಜ್ಯದ ಬಿಜೆಪಿ ನಾಯಕರಿಗೆ ಯಾವ ವಿಷಯವೂ ಇಲ್ಲ. ಹೀಗಾಗಿ ಈ ರೀತಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಸಾವಿನ ಮನೆಯಲ್ಲಿ ಕುಳಿತು ರಾಜಕೀಯ ಮಾಡುವುದು ಸರಿಯಲ್ಲ’ ಎಂದರು.

‘ನನ್ನ ಇಲಾಖೆ ಅಧಿಕಾರಿ ಸಾವು ಆಗಿದೆ. ಸತ್ಯ ಗೊತ್ತಾಗಬೇಕಿದೆ. ಹೀಗಾಗಿ ನಿಷ್ಪಕ್ಷಪಾತ ತನಿಖೆ ಆಗಬೇಕು. ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು’ ಎಂದರು.

‘ಅನುರಾಗ್ ತಿವಾರಿ ಅವರಿಗೆ ಏನಾದರೂ ಸಮಸ್ಯೆ ಇದ್ದರೆ ಕಾರ್ಯದರ್ಶಿ ಅಥವಾ ನನ್ನ ಬಳಿ ಹೇಳಬಹುದಿತ್ತು. ನಾವು ಕೇಳಿಸಿಕೊಳ್ಳದಿದ್ದರೆ ಮುಖ್ಯಮಂತ್ರಿಗೆ ಪತ್ರ ಬರೆಯಬಹುದಿತ್ತು. ಆದರೆ, ಅವರು ಅದ್ಯಾವುದನ್ನೂ ಮಾಡಿಲ್ಲ’ ಎಂದರು.

‘ಕೆಲವೊಂದು ಆರೋಪಗಳು ನಮ್ಮ ತಪ್ಪಿನಿಂದ ಮೈಮೇಲೆ ಬರುತ್ತವೆ. ಕೆಲವೊಂದು ಗ್ರಹಚಾರದಿಂದ ಬರುತ್ತವೆ. ಈಗ ನನಗೆ ಗ್ರಹಚಾರದಿಂದ ಈ ಆರೋಪ ಎದುರಿಸಬೇಕಾಗಿ ಬಂದಿದೆ’ ಎಂದರು.

ಸಾಯುವ ಮೊದಲೇ ಆಗಿತ್ತು ತಿವಾರಿ ಮುಖದ ಗಾಯ
ಲಖನೌ:
ಇತ್ತೀಚೆಗೆ ಮೃತಪಟ್ಟ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಕೆಳತುಟಿ, ಗಲ್ಲ ಮತ್ತು ಮುಖದ ಒಳಭಾಗಗಳಲ್ಲಿ ಸಾಯುವುದಕ್ಕೆ ಮೊದಲು ಕೆಲವು ಗಾಯಗಳಾಗಿದ್ದವು ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಹೇಳಿದ್ದಾರೆ.

ಅನುರಾಗ್‌ ಅವರದ್ದು ಸಹಜ ಸಾವು ಅಲ್ಲ ಎಂಬುದಕ್ಕೆ ಈ ಮಾಹಿತಿ ಪುಷ್ಟಿ ನೀಡಿದೆ ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಮೂಲಗಳು ಹೇಳಿವೆ. 
ಅನುರಾಗ್‌ ಅವರು ಮೃತಪಟ್ಟು ಒಂದು ವಾರವಾದರೂ ಪ್ರಕರಣದ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಆಗಿಲ್ಲ. ಅನುರಾಗ್‌ ಅವರ ಕುಟುಂಬದ ಸದಸ್ಯರ ಹೇಳಿಕೆಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ದಾಖಲಿಸಿ ಕೊಂಡಿದೆ. ಅವರಲ್ಲಿ ಒಬ್ಬರನ್ನು ಬೆಂಗಳೂರಿಗೆ ಕರೆದೊಯ್ಯವ ಸಾಧ್ಯತೆ ಇದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

ಪೊಲೀಸರ ತಂಡ ಒಂದೆರಡು ದಿನದಲ್ಲಿ ಬೆಂಗಳೂರಿಗೆ ಹೊರಡಲಿದೆ. ತಾವು ಕೆಲಸ ಮಾಡುತ್ತಿದ್ದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ದೊಡ್ಡ ಮಟ್ಟದ ಹಗರಣವನ್ನು ಬಯಲಿಗೆಳೆಯಲು  ಪ್ರಯತ್ನಿಸುತ್ತಿದ್ದರೇ ಎಂಬ ಬಗ್ಗೆಯೂ ತನಿಖೆ ನಡೆಯಲಿದೆ.

ಒತ್ತಡ ಇತ್ತು: ಅನುರಾಗ್‌ ಅವರಿಗೆ ಒತ್ತಡ ಇತ್ತು. ಹಾಗಾಗಿ ಅವರು ರಜೆ ವಿಸ್ತರಣೆಗೆ ಬಯಸಿದ್ದರು ಎಂದು ಅವರು ಸಾಯುವುದಕ್ಕೆ ಹಿಂದಿನ ದಿನಗಳಲ್ಲಿ ಅತಿಥಿ ಗೃಹದಲ್ಲಿ ಜತೆಗೆ ತಂಗಿದ್ದ ಐಎಎಸ್‌ ಅಧಿಕಾರಿ ಪಿ.ಎನ್‌. ಸಿಂಗ್‌ ಹೇಳಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಲ್ಲಿ ಆಯುಕ್ತರಾಗಿದ್ದ ಅನುರಾಗ್‌ ಅವರ ಮೃತದೇಹ ಲಖನೌದಲ್ಲಿ ರಸ್ತೆ ಬದಿಯಲ್ಲಿ ಕಳೆದ ಬುಧವಾರ ಬೆಳಿಗ್ಗೆ ಪತ್ತೆಯಾಗಿತ್ತು.

ADVERTISEMENT

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.