ADVERTISEMENT

11 ಜಿಲ್ಲೆಗಳಲ್ಲಿ ಮಳೆ: ಸಿಡಿಲಿಗೆ 9 ಬಲಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸವದತ್ತಿ ತಾಲ್ಲೂಕಿನ ಯರಗಟ್ಟಿಯಲ್ಲಿ ಗುರುವಾರ ಮಧ್ಯಾಹ್ನ ಭಾರಿ ಪ್ರಮಾಣದಲ್ಲಿ ಗಾಳಿ–ಮಳೆ ಸುರಿದಿದ್ದರಿಂದ ಕೆಲ ಕಾಲ ಮತದಾನ ಪ್ರಕ್ರಿಯೆಗೆ ಹಿನ್ನಡೆಯಾಯಿತು
ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸವದತ್ತಿ ತಾಲ್ಲೂಕಿನ ಯರಗಟ್ಟಿಯಲ್ಲಿ ಗುರುವಾರ ಮಧ್ಯಾಹ್ನ ಭಾರಿ ಪ್ರಮಾಣದಲ್ಲಿ ಗಾಳಿ–ಮಳೆ ಸುರಿದಿದ್ದರಿಂದ ಕೆಲ ಕಾಲ ಮತದಾನ ಪ್ರಕ್ರಿಯೆಗೆ ಹಿನ್ನಡೆಯಾಯಿತು   

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆ ಹಾವಳಿ ಮುಂದು­ವರಿ­ದಿದೆ. ಹಾಸನ,  ಚಿಕ್ಕಮಗಳೂರು, ಧಾರ­ವಾಡ, ಬಳ್ಳಾರಿ, ಬಾಗಲ­ಕೋಟೆ, ವಿಜಾಪುರ, ಬೆಳಗಾವಿ, ಹಾವೇರಿ, ಕೊಪ್ಪಳ, ಗದಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಬುಧವಾರ ರಾತ್ರಿ, ಗುರುವಾರ ಮಳೆಯಾಗಿ ಆಸ್ತಿಪಾಸ್ತಿ, ಜೀವಹಾನಿ ಸಂಭವಿಸಿದೆ.

ಸಿಡಿಲಿಗೆ ಗದಗ ಜಿಲ್ಲೆಯಲ್ಲಿ ಐವರು, ಬೆಳಗಾವಿ, ಕೊಪ್ಪಳ, ಹಾಸನ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಸೇರಿ ಒಟ್ಟು ಒಂಬತ್ತು ಜನ ಬಲಿಯಾಗಿದ್ದಾರೆ.

ಹುಬ್ಬಳ್ಳಿ ವರದಿ: ಗದಗ ಜಿಲ್ಲೆಯಲ್ಲಿ ಮೂರು ಕಡೆ ಸಿಡಿಲು ಬಡಿದು ಮೂವರು ಕುರಿಗಾಹಿ­ಗಳು, ಇಬ್ಬರು ಮಹಿಳೆಯರು  ಸೇರಿ ಐವರು  ಸಾವಿಗೀಡಾದ ಘಟನೆ ಗುರು­ವಾರ ಸಂಭವಿಸಿದೆ.

ಗದಗ ತಾಲ್ಲೂಕಿನ ಮುಳಗುಂದ ಮತ್ತು ಕಣವಿ ರಸ್ತೆಯಲ್ಲಿ ಮರದ ಕೆಳಗೆ ನಿಂತಿದ್ದ  ಕುರಿಗಾಹಿಗಳಾದ ಮುಂಡರಗಿ ತಾಲ್ಲೂಕಿನ ಹಾರೋಗೇರಿಯ ಮಲ್ಲಪ್ಪ ಸಿದ್ಧಪ್ಪ ಸೊರಟೂರ (20), ಮಲ್ಲಪ್ಪ ಕರಿಯಪ್ಪ ನೆಲ್ಲಣ್ಣವರ (16) ಮತ್ತು ಮಹಾಂತೇಶ ಸುರೇಶ ಸೋಮಣ್ಣವರ (18) ಮೃತ­ಪಟ್ಟಿದ್ದಾರೆ. 18 ಕುರಿಗಳು ಸಹ ಮೃತಪಟ್ಟಿವೆ.

ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಮಳೆ ಆರಂಭ­ವಾದಾಗ ಈ ಮೂವರು ಯುವಕರು ಮರದ ಕೆಳಗೆ ನಿಂತಿದ್ದರು. ಆಗ ಸಿಡಿಲು ಬಡಿದು ಸಾವನ್ನಪ್ಪಿದರು. ಗದಗ ನಗರದ ರಾಜೀವ್‌­ಗಾಂಧಿ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಸೋಮಶೇಖರ ನಗರದಲ್ಲಿ ಸಿಡಿಲು ಬಡಿದು ಹೊನ್ನಮ್ಮ ರಾಮಪ್ಪ ಜಗ್ಗಳ (42) ಎಂಬುವವರು ಮೃತಪಟ್ಟಿದ್ದಾರೆ. ರೋಣ ತಾಲ್ಲೂಕಿನ ಅಮರಗೋಳ ಗ್ರಾಮದ ಯಲ್ಲವ್ವ ಶಿರಗುಂಪಿ (55) ಮರದ ಕೆಳಗಡೆ ನಿಂತಿದ್ದಾಗ ಸಿಡಿಲು ಬಡಿದು ಮೃತರಾದರು.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಪಾಲಬಾವಿ ಗ್ರಾಮದಲ್ಲಿ ಗುರುವಾರ ಸಂಜೆ ಸಿಡಿಲು ಬಡಿದು ಶಂಕರ ದುಂಡಪ್ಪ ಸೊನ್ನದ (38) ಮೃತಪಟ್ಟಿದ್ದಾರೆ. ಸಂಜೆ ಹೊಲದಿಂದ ಮನೆಗೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಬೇಲೂರು (ಹಾಸನ ಜಿಲ್ಲೆ) ವರದಿ: ಪಟ್ಟಣ ಮತ್ತು ತಾಲ್ಲೂಕಿ­ನಾ­ದ್ಯಂತ ಗುರುವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿಯಿತು. ಪಟ್ಟಣ ಸಮೀಪದ ಕೋನೇರಲು ಗ್ರಾಮದ ಕಾಲೇಜು ವಿದ್ಯಾರ್ಥಿ ಜೀವನ್‌ (17) ಸಿಡಿಲಿಗೆ ಬಲಿಯಾದ.

ಸಂಜೆ 5.15ರ ಸಮಯದಲ್ಲಿ ಕೋನೇರಲು ಗ್ರಾಮ ಸಮೀಪದ ಮೈದಾನದಲ್ಲಿ ಆಟವಾಡುತ್ತಿದ್ದ ವೇಳೆ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಸುರಿದಾಗ ಜೀವನ್‌ ಮಳೆಯಿಂದ ರಕ್ಷಣೆ ಪಡೆಯಲು ಮಾವಿನ ಮರದ ಕೆಳಗೆ ನಿಂತಿದ್ದ. ಆಗ ಸಿಡಿಲು ಬಡಿದು ತೀವ್ರವಾಗಿ ಗಾಯಗೊಂಡ ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸುವ ವೇಳೆ ಮೃತಪಟ್ಟಿದ್ದಾನೆ. ಬೇಲೂರು ಪೊಲೀಸರು ಪ್ರಕರಣ ದಾಖಲಿಸಿ­ಕೊಂಡಿದ್ದಾರೆ.

ಹಳೇಬೀಡು ವರದಿ: ಪಟ್ಟಣ ಮತ್ತು  ಸುತ್ತಮುತ್ತಲಿನ ಭಾಗದಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಸುರಿಯಿತು.

ಯಲಬುರ್ಗಾ (ಕೊಪ್ಪಳ ಜಿಲ್ಲೆ): ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಗುರು­ವಾರ ಸಂಜೆ ಭಾರೀ ಮಳೆ ಸುರಿದಿದ್ದು, ಸಿಡಿಲಿಗೆ ಒಬ್ಬರು ಮೃತಪಟ್ಟಿದ್ದು ಹಲವರಿಗೆ ಗಾಯಗಳಾಗಿದೆ. ತಾಳಕೇರಿ ಗ್ರಾಮದ ಹೊರ­ವಲಯದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಶಂಕ್ರಪ್ಪ ಏಳಗುಡ್ಡದ್‌(40) ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲಿ ಮೃತಪಟ್ಟಿದ್ದಾರೆ.

ಚಿಕ್ಕಮನ್ನಾಪುರ, ಗುಳೆ, ವನಜಬಾವಿ, ಚೌಡಾಪುರ, ಮರ­ಕಟ್ಟು ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬೀಸಿದ ಗಾಳಿ, ಸಿಡಿಲು ಹಾಗೂ ಮಳೆಗೆ ಸಾಕಷ್ಟು ಮನೆಗಳ ಛಾವಣಿ ಕುಸಿದು ಅನೇ­ಕರಿಗೆ ಗಾಯಗಳಾಗಿವೆ. ಗಾಯಾಳು­ಗಳು ಹತ್ತಿರದ ಹಿರೇ­ವಂಕಲ­ಕುಂಟಾ ಗ್ರಾಮದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ­­ಯುತ್ತಿ­ದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

  ಚಿಕ್ಕ­ಮನ್ನಾ­ಪೂರ ಗ್ರಾಮದ ಹನಮಂತಪ್ಪ ಹರಿ­ಜನ ಅವರಿಗೆ ಸೇರಿದ್ದ ರೇಷ್ಮೆ ಹುಳು ಸಾಕಾ­ಣಿಕಾ ಕೇಂದ್ರದ ಕಟ್ಟಡದ ಬಹು ಭಾಗ ಕಿತ್ತು ಹೋಗಿದ್ದು ಅಪಾರ ನಷ್ಟ­ವುಂಟಾಗಿದೆ. ಅದೇ ರೀತಿ ಗುಳೆ ಗ್ರಾಮ­­ದಲ್ಲಿಯೂ ಕೂಡ ಸಾಕಷ್ಟು ಸಂಖ್ಯೆಯ ಗುಡಿಸಲು, ಆಶ್ರಯ ಮನೆಗಳ ಛಾವ­ಣಿಯ ತಗಡುಗಳು ಹಾರಿ ಹೋಗಿವೆ.

ಕುಣಿಗಲ್‌ (ತುಮಕೂರು ಜಿಲ್ಲೆ) ವರದಿ: ಸಿಡಿಲು ಬಡಿದು ವ್ಯಕ್ತಿ ಮೃತಪಟ್ಟ ಘಟನೆ ತಾಲ್ಲೂಕಿನ ಎಡೆಯೂರು ಹೋಬಳಿಯ ಮನವಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಮೃತನನ್ನು ಸಿದ್ದಲಿಂಗಪ್ಪ (50) ಎಂದು ಗುರುತಿಸಲಾಗಿದೆ. ಸಂಜೆ ಕುರಿ ಕಾಯುತ್ತಿದ್ದ ಸಮಯದಲ್ಲಿ ಸಿಡಿಲು ಬಡಿದಿದೆ. ಅಮೃತೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.