ADVERTISEMENT

12ನೇ ಶತಮಾನದ ಕಾಲದ ತುಳು ಶಾಸನ ಪತ್ತೆ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಉಡುಪಿ: ಅಳುಪರ ಕಾಲಕ್ಕೆ ಸೇರಿದ ಕನ್ನಡ ಭಾಷೆಯ ಆದರೆ ತುಳು ಲಿಪಿಯಲ್ಲಿರುವ ಶಾಸನ ಕೋಟದಲ್ಲಿ ಪತ್ತೆಯಾಗಿದೆ. ಕಿ.ಶ. 12ನೇ ಶತಮಾನದಲ್ಲಿಯೇ ತುಳು ಲಿಪಿ ಇತ್ತು ಎಂಬುದನ್ನು ಈ ಶಾಸನ ಸಾಬೀತು ಮಾಡಿದೆ ಎಂದು ಶಿರ್ವದ ಮುಲ್ಕಿ ಸುಂದರ್‌ರಾಮ್‌ ಶೆಟ್ಟಿ ಸ್ಮಾರಕ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಟಿ. ಮುರುಗೇಶಿ ಹೇಳಿದ್ದಾರೆ.

12–13ನೇ ಶತಮಾನಕ್ಕೆ ಸೇರಿದ ಈ ಶಾಸನ ಕೋಟದ ಹಿರೇಮಹಾಲಿಂಗೇಶ್ವರ ದೇವಾಲಯ­ದಲ್ಲಿ ಪತ್ತೆಯಾಗಿದೆ. ಹೊರ ಆವರಣದಲ್ಲಿರುವ ಸ್ತಂಭದ ಎರಡು ಮುಖದಲ್ಲಿ 27 ಸಾಲಿನ ತುಳು ಲಿಪಿಯ ಶಾಸನವು ಅಳುಪ ದೊರೆ ಕುಲಶೇಖರಾಳು ಅವರನ್ನು ಹೆಸರಿಸುತ್ತದೆ. ಕುಲಶೇಖರಾಳು ಕೋಟದ ದೇವಸ್ಥಾನಕ್ಕೆ ದಾನವಾಗಿ ನೀಡಿದ ಕೈಬೆಳಕಿನ (ಕೈವೆಳಕು) ಬಗ್ಗೆ ಶಾಸನದಲ್ಲಿ ಮಾಹಿತಿ ಇದೆ.

ಕಿ.ಶ. 1175–76ನೇ ಸಾಲಿನ ಶಾಸನೋಕ್ತ ಅಳುಪೇಂದ್ರನ ಅತ್ಯಂತ ಪ್ರಾಚೀನ ಶಾಸನ ಬಸ್ತೂರಿನಲ್ಲಿದೆ. ಈ ಶಾಸನ ಆತನನ್ನು ಪರಮೇಶ್ವರ, ಪರಮಭಟ್ಟಾರಕ ಹಾಗೂ ಪಾಂಡ್ಯ ಚಕ್ರವರ್ತಿ ಎಂದು ವರ್ಣಿಸಿದೆ. ಆದರೆ ಈಗ ಸಿಕ್ಕಿರುವ ಶಾಸನದಲ್ಲಿ ಆತನ ಹೆಸರನ್ನು ಮಾತ್ರ ಬರೆಯಲಾಗಿದ್ದು, ಕುಲಶೇಖರ ಅಳುಪೇಂದ್ರನನ್ನು ಯಾವುದೇ ಬಿರುದು ವಿಶೇಷಣಗಳಿಂದ ವರ್ಣಿಸಿಲ್ಲ. ಆದ್ದರಿಂದ ಈ ಶಾಸನವನ್ನು ಅಳುಪರ ಪ್ರಾಚೀನ ಶಾಸನ ಎಂದೇ ಪರಿಗಣಿಸಬೇಕಾಗುತ್ತದೆ. ಅಲ್ಲದೆ ತುಳು ಭಾಷೆಯ ಅತ್ಯಂತ ಪ್ರಾಚೀನ ಶಾಸನ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತುಳುಗೆ ಲಿಪಿ ಇಲ್ಲ ಎಂಬ ಭಾವನೆ ಸಾಮಾನ್ಯ ಜನರಲ್ಲಿದೆ. ಆದರೆ ತುಳು ಭಾಷೆಗೆ ಲಿಪಿ ಇತ್ತು. ತುಳು ಲಿಪಿ ಬಳಸದೆ ಕನ್ನಡ ಲಿಪಿಯನ್ನೇ ಬಳಸಿದ ಕಾರಣ ಕ್ರಮೇಣ ತುಳು ಲಿಪಿ ಕಣ್ಮರೆಯಾಯಿತು. ಅಳುಪರ ಭಾಷೆ ಸಹ ಕನ್ನಡವೇ ಆಗಿತ್ತು. ಆದರೆ ತುಳು ಸ್ಥಳೀಯರ ಭಾಷೆ ಆಗಿತ್ತು. ಈ ಶಾಸನವನ್ನು ಆಧಾರ­ವಾಗಿಟ್ಟುಕೊಂಡು ಇನ್ನಷ್ಟು ಸಂಶೋಧನೆಗಳನ್ನು ನಡೆಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಕೋಟದಲ್ಲಿ ಶಾಸನ ಅಧ್ಯಯನ ಕಮ್ಮಟ ಏರ್ಪಡಿಸಿದ್ದ ಸಂದರ್ಭದಲ್ಲಿ ಶಾಸನ ಬೆಳಕಿಗೆ ಬಂತು. ವಿದ್ಯಾರ್ಥಿಗಳಾದ ಸುಮಾ, ಸಂಗೀತ, ಪ್ರಶಾಂತ್‌, ಶ್ರೀಧರ್‌ ಭಟ್‌ ಶಾಸನ ಪತ್ತೆಗೆ ಸಹಕರಿಸಿದರು. ದೇವಾಲಯದ ಅರ್ಚಕ ಶ್ರೀನಿವಾಸ ಅಡಿಗ, ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್‌ ಭಟ್‌ ಅವರ ಬೆಂಬಲವೂ ಸ್ಮರಣೀಯ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.