ADVERTISEMENT

₹ 15 ಸಾವಿರ ಕಳೆದುಕೊಂಡ ಮಹಿಳೆ ಹೃದಯಾಘಾತದಿಂದ ಸಾವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2016, 20:19 IST
Last Updated 14 ನವೆಂಬರ್ 2016, 20:19 IST
₹ 15 ಸಾವಿರ ಕಳೆದುಕೊಂಡ ಮಹಿಳೆ ಹೃದಯಾಘಾತದಿಂದ  ಸಾವು
₹ 15 ಸಾವಿರ ಕಳೆದುಕೊಂಡ ಮಹಿಳೆ ಹೃದಯಾಘಾತದಿಂದ ಸಾವು   

ಗುಡಿಬಂಡೆ:  ₹ 500 ಮತ್ತು ₹ 1 ಸಾವಿರ ಮುಖಬೆಲೆಯ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಬಂದು   ಹಣ ಕಳೆದುಕೊಂಡಿದ್ದ ಚೆಂಡೂರು ಗ್ರಾಮದ ಮಹಿಳೆ ಜಂಗಾಲಪಲ್ಲಿ ಈಶ್ವರಮ್ಮ (43) ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಣ ಕಳೆದುಕೊಂಡ ಮಾನಸಿಕ ವೇದನೆಯೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಘಟನೆ ವಿವರ: ಈಶ್ವರಮ್ಮ ಅವರು ಆಶ್ರಯ ಯೋಜನೆಯ ಫಲಾನುಭವಿ. ಇತ್ತೀಚೆಗೆ ಯೋಜನೆಯ ಮೊದಲ ಕಂತಾಗಿ ₹ 15 ಸಾವಿರದ ಚೆಕ್ ನೀಡಲಾಗಿತ್ತು. ಚೆಕ್ ಡ್ರಾ ಮಾಡಿದ್ದ ಅವರು ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು.  ₹ 500 ಮತ್ತು ₹ 1 ಸಾವಿರ ಮುಖ ಬೆಲೆಯ ನೋಟುಗಳು ಸ್ಥಗಿತವಾದ ಕಾರಣ ಅವುಗಳನ್ನು ಖಾತೆಗೆ ಜಮಾ ಮಾಡಲು ಶುಕ್ರವಾರ (ನ.11) ಪಟ್ಟಣದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ಗೆ ಬಂದಿದ್ದರು.

ಹಣ ಜಮೆಗೆ ಚಲನ್ ಬರೆದುಕೊಡುವಂತೆ ಅಲ್ಲಿದ್ದವರಲ್ಲಿ ಒಬ್ಬರನ್ನು ಕೇಳಿದ್ದಾರೆ. ಈ ನಡುವೆಯೇ ಅವರು ಟೇಬಲ್ ಮೇಲೆ ಇಟ್ಟಿದ್ದ ಹಣದ ಗಂಟು ಕಾಣೆಯಾಗಿದೆ. ಇದರಿಂದ ನೊಂದ ಈಶ್ವರಮ್ಮ ತಮ್ಮ ಸ್ವಗ್ರಾಮಕ್ಕೆ  ಮರಳಿದ್ದರು.

‘ಹಣವನ್ನು ಕಳೆದುಕೊಂಡಿದ್ದರಿಂದ ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿದ್ದರು. 6 ತಿಂಗಳ ಹಿಂದೆ ಅವರ ಗುಡಿಸಲು ಬೆಂಕಿಗೆ ಆಹುತಿಯಾಗಿತ್ತು. ಈ ಎರಡೂ ಘಟನೆಗಳಿಂದ ನೊಂದಿದ್ದರು. ಇದರಿಂದ ಹೃದಯಾಘಾತವಾಗಿದೆ’ ಎನ್ನುವರು ಗ್ರಾಮಸ್ಥರು.

‘ಹಣ ಕಳೆದುಕೊಂಡಿರುವ ಬಗ್ಗೆ ಲಿಖಿತ ಹಾಗೂ ಮೌಖಿಕ ದೂರು ಬಂದಿಲ್ಲ. ಬ್ಯಾಂಕಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲ’ ಎಂದು ಬ್ಯಾಂಕಿನ ಅಧಿಕಾರಿಗಳು ಉತ್ತರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.