ADVERTISEMENT

19 ಪದವಿಪೂರ್ವ ಕಾಲೇಜು ಪ್ರಾಂಶುಪಾಲರಿಗೆ ಹಿಂಬಡ್ತಿ?

ಪಟ್ಟಿಯಿಂದ 125 ಮಂದಿಯ ಹೆಸರು ಕೈಬಿಟ್ಟ ಶಿಕ್ಷಣ ಇಲಾಖೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:35 IST
Last Updated 17 ಏಪ್ರಿಲ್ 2018, 19:35 IST

ಬೆಂಗಳೂರು: ಪದವಿಪೂರ್ವ ಕಾಲೇಜು ಪ್ರಾಂಶುಪಾಲರ ವೃಂದದ ಪರಿಷ್ಕೃತ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸುವಾಗ ಹೆಚ್ಚುವರಿ ಎಂದು ಪರಿಗಣಿಸಿದ್ದವರ ಪೈಕಿ 125 ಮಂದಿಗೆ ಹಿಂಬಡ್ತಿ ನೀಡದಿರಲು ಶಿಕ್ಷಣ ಇಲಾಖೆ ಮುಂದಾಗಿದೆ.

‘ಬಿ.ಕೆ.ಪವಿತ್ರ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ತಯಾರಿಸಿದ್ದ ಜ್ಯೇಷ್ಠತಾ ಪಟ್ಟಿಯನ್ನು ಇಲಾಖೆಯು ಇದೇ ಮಾರ್ಚ್‌ 7ರಂದು ಪ್ರಕಟಿಸಿತ್ತು. ಹೆಚ್ಚುವರಿ ಬಡ್ತಿ ಪಡೆದ 144 ಪ್ರಾಂಶುಪಾಲರ ಹೆಸರುಗಳು ಆ ಪಟ್ಟಿಯಲ್ಲಿದ್ದವು. ಆ ಪಟ್ಟಿಯನ್ನೇ ಸುಪ್ರೀಂ ಕೋರ್ಟ್‌ಗೂ ಸಲ್ಲಿಸಲಾಗಿತ್ತು. ಅದರಲ್ಲಿ 19 ಮಂದಿಯ ಹೆಸರುಗಳನ್ನು ಮಾತ್ರ ಉಳಿಸಿಕೊಂಡು, ಉಳಿದವರಿಗೆ ಹಿಂಬಡ್ತಿ ನೀಡದಿರಲು ಇಲಾಖೆ ಸಿದ್ಧತೆ ನಡೆಸಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಉಪನ್ಯಾಸಕ ರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಡ್ತಿ ವಿಚಾರದಲ್ಲಿ ಅನೇಕ ಉಪನ್ಯಾಸಕರಿಗೆ ಅನ್ಯಾಯ ಆಗಿತ್ತು. ಪ್ರಾಂಶುಪಾಲರ ವೃಂದದವರಿಗೆ ₹ 30,400– ₹ 51,100 ವೇತನಾ ಶ್ರೇಣಿ ಇದೆ. ಈ ಶ್ರೇಣಿಗೆ ಬಡ್ತಿ ಮೀಸಲಾತಿ ಅನ್ವಯ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಸ್ಪಷ್ಟಪಡಿಸಿತ್ತು. ಈ ತೀರ್ಪಿನ ಬಳಿಕವಾದರೂ ನಮಗೆ ನ್ಯಾಯ ಸಿಗಬಹುದು ಎಂದು ಆಶಿಸಿದ್ದೆವು. ಆದರೆ, ಇಲಾಖೆಯ ಈ ಕ್ರಮದಿಂದ ನ್ಯಾಯ ಮರೀಚಿಕೆ ಆಗಲಿದೆ. ಅನೇಕ ಉಪನ್ಯಾಸಕರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರು ಪ್ರಾಂಶುಪಾಲರಾಗಿ ಬಡ್ತಿ ಹೊಂದುವ ಅವಕಾಶದಿಂದ ವಂಚಿತರಾಗಲಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಈ ಕುರಿತು ಪ್ರತಿಕ್ರಿಯಿಸಲು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ ನಿರಾಕರಿಸಿದರು.

‘ಹಿಂಬಡ್ತಿ ಪಡೆಯಲಿರುವ ಪ್ರಾಂಶುಪಾಲರ ಅಂತಿಮ ಪಟ್ಟಿ ಸಿದ್ಧವಾಗುತ್ತಿದೆ. ಈ ಕುರಿತು ಈಗ ಪ್ರತಿಕ್ರಿಯಿಸುವುದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.