ADVERTISEMENT

2 ಕುಟುಂಬಗಳಿಗೆ ಶೌಚಾಲಯವೇ ಮನೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2014, 20:09 IST
Last Updated 20 ಡಿಸೆಂಬರ್ 2014, 20:09 IST

ಮಧುಗಿರಿ (ತುಮಕೂರು ಜಿಲ್ಲೆ): ‘ವಾಸಕ್ಕೆ ಮನೆ ಇಲ್ಲ, ಬಾಡಿಗೆ ಕಟ್ಟಲು ಹಣ ಇಲ್ಲ. ನಾವು ಇನ್ನೇನು ಮಾಡೋಣ ಸ್ವಾಮಿ...?’
–ಪಟ್ಟಣದ ಕಾರ್ಯಪ್ಪ ಬಡಾವ­ಣೆಯ ಸಾಮೂಹಿಕ ಶೌಚಾಲಯದಲ್ಲಿ ದಿನದೂಡುತ್ತಿರುವ ಅಬ್ದುಲ್ ಅಕ್ರಂ ಹೀಗೆ ಹೇಳುವಾಗ ಅಸಹಾಯಕತೆ­ಯಿಂದ ತಲೆ ತಗ್ಗಿಸಿದರು.

ಶೌಚಾಲಯದಲ್ಲಿ ದೀಪದ ಬೆಳೆಕಿನಲ್ಲೇ ಇವರ ಮಕ್ಕಳಾದ ಬೀಬೀ ಹಾಜಿರಾ ಮತ್ತು ಅಬ್ದುಲ್ ತಬ್ರೇಜ್ ಹೋಂ ವರ್ಕ್ ಮಾಡುತ್ತಾರೆ. ಹೆಂಡತಿ ಲಗೀನ್‌ತಾಜ್ ಹಾಗೂ ಹೀಗೂ ದಿನದೂಡುತ್ತಿದ್ದಾರೆ.

ಇನ್ನು ಅನಸೂಯಮ್ಮ ಅವರದು ಮತ್ತೊಂದು ಕಣ್ಣೀರ ಕಥೆ. ೧೫ ವರ್ಷದ ಹಿಂದೆ ಇವರ ಪತಿ ಮರದಿಂದ ಬಿದ್ದು ಅಂಗವಿಕಲ­ರಾದರು. ಅಂದಿನಿಂದ ಮನೆಕೆಲಸ ಮಾಡಿ ಸಂಸಾರ ನಿಭಾ­ಯಿಸು­ತ್ತಿದ್ದಾರೆ. ೨ನೇ ತರಗತಿ ಓದುತ್ತಿರುವ ಮಗಳು ಸುಜಾತಾ ‘ಇನ್ನೆಷ್ಟು ದಿನ ಇಲ್ಲಿರಬೇಕು?’ ಎಂದು ಪ್ರಶ್ನಿಸಿದಾಗ ಏನು ಉತ್ತರಿಸಬೇಕೆಂದು ತಿಳಿಯದೆ ಗಲಿಬಿಲಿಗೊಳ್ಳುತ್ತಾರೆ.

‘ಈ ಸಾಮೂಹಿಕ ಶೌಚಾಲಯವನ್ನು ಹಲವು ವರ್ಷಗಳಿಂದ ಯಾರೂ ಬಳಸುತ್ತಿರಲಿಲ್ಲ. ಹೀಗಾಗಿ ನಾವು ಇದರಲ್ಲಿ ಆಶ್ರಯ ಪಡೆದುಕೊಂಡಿದ್ದೇವೆ. ಮಕ್ಕಳು ಇಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಪುರಸಭೆ ವತಿಯಿಂದ ನಮಗೆ ಮನೆ ನೀಡಿದರೆ ಅಲ್ಲಿಗೆ ಹೋಗುತ್ತೇವೆ’ ಎಂದು ಅವರು ಪ್ರತಿಕ್ರಿಯಿಸಿದರು.

ಕೊಳಚೆ ನಿರ್ಮೂಲನೆ ಮಂಡಳಿಯು ನಿರ್ಮಲ ಭಾರತ ಅಭಿ­ಯಾನ ಯೋಜನೆಯಡಿ 15 ವರ್ಷದ ಹಿಂದೆ ನಿರ್ಮಿಸಿದ ಸಾಮೂಹಿಕ ಶೌಚಾ­ಲಯ­ದಲ್ಲಿ ೨ ಕುಟುಂಬಗಳು ಕಳೆದ ೨ ತಿಂಗಳಿನಿಂದ ಆಶ್ರಯ ಪಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.