ADVERTISEMENT

2018ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ: ಹೊರಟ್ಟಿ

ಆರ್‌ಟಿಇ, ಡೊನೇಷನ್‌ ಹಾವಳಿ ಸಾರ್ವಜನಿಕ ಚರ್ಚೆಯಾಗಲಿ

​ಪ್ರಜಾವಾಣಿ ವಾರ್ತೆ
Published 25 ಜೂನ್ 2016, 11:44 IST
Last Updated 25 ಜೂನ್ 2016, 11:44 IST
2018ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ: ಹೊರಟ್ಟಿ
2018ಕ್ಕೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ: ಹೊರಟ್ಟಿ   

ಹಾವೇರಿ: 2018ರಲ್ಲಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬರಲಿದೆ ಎಂದು ಭವಿಷ್ಯ ನುಡಿದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರು, ಮುಂದಿನ ಚುನಾವಣೆಯಲ್ಲಿ ಪೂರ್ಣ ಬೆಂಬಲದೊಂದಿಗೆ ಅಧಿಕಾರ ಹಿಡಿಯುತ್ತೇವೆಂದು ಹೇಳುತ್ತಿರುವ ಬಿಜೆಪಿಯವರದ್ದು ಬರೀ ‘ಕನಸು’ ಎಂದರು.

ಪ್ರಸ್ತುತ ಸಂಪುಟದಲ್ಲಿ ಜನತಾ ಪರಿವಾರದವರೇ ಹೆಚ್ಚಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು‌ ವರ್ಷ ಪೂರೈಸುತ್ತಾರೆ ಎಂದು ಹೇಳಿದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರ ರಾಜಕೀಯ ನಡೆ- ಅವರಿಗೆ ಮತ್ತು ದೇವರಿಗೆ ಗೊತ್ತು ಎಂದರು.

ADVERTISEMENT

ವೈಯಕ್ತಿಕವಾಗಿ ನನಗೆ ವಿರೋಧ ಪಕ್ಷದ ಸದಸ್ಯನಾಗಿ ಇರಲು ಇಷ್ಟ. ಆದರೆ, ಹಿರಿಯ ಮುಖಂಡರು ಸೂಚಿಸಿದ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ವಿಧಾನ ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ ಅವರು ಆರು ವರ್ಷ ಪೂರೈಸುತ್ತಿದ್ದಾರೆ. ಹೀಗಾಗಿ, ತಾವೇ ಸ್ವತ್ಹ ಒಮ್ಮತದ ಅಭ್ಯರ್ಥಿಗೆ ಅವಕಾಶ ಮಾಡಿಕೊಡಲಿ ಎಂದು ಹೊರಟ್ಟಿ ಅವರು ಸಲಹೆ ನೀಡಿದರು.

ಆರ್‌ಟಿಇಗೆ ವಿರೋಧ
ಆರ್‌ಟಿಇ ಹೀಗೆ ಮುಂದುವರಿದರೆ 2020ರ ವೇಳೆಗೆ ಕೇವಲ ಶೇ 20ರಷ್ಟು ಕನ್ನಡ ಮಾಧ್ಯಮ ಶಾಲೆಗಳು ಉಳಿಯುತ್ತವೆ. ಹೀಗಾಗಿ, ಆರ್‌ಟಿಇ ಮತ್ತು ಡೊನೇಷನ್‌ ಹಾವಳಿ ಬಗ್ಗೆ ಸಮಗ್ರ ಸಾರ್ವಜನಿಕ ಚರ್ಚೆಯಾಗಬೇಕಿದೆ. ಈ ಕುರಿತು ಅಧಿವೇಶನದಲ್ಲೂ ಪ್ರಸ್ತಾಪಿಸುತ್ತೇನೆ ಎಂದರು.

ಪ್ರಥಮ ಸುತ್ತಿನಲ್ಲಿ ಆಯ್ಕೆ; ದೇಶದ ಮೊದಲ ಸದಸ್ಯ
ಸತತ ಏಳು ಚುನಾವಣೆಯಲ್ಲಿ ಆಯ್ಕೆಯಾದ ಹಾಗೂ ಈ ಪೈಕಿ ಐದರಲ್ಲಿ ಪ್ರಥಮ ಸುತ್ತಿನಲ್ಲೇ ಆಯ್ಕೆಯಾದ ದೇಶದ ಮೊದಲ ವಿಧಾನ ಪರಿಷತ್ ಸದಸ್ಯ ತಾವು ಎಂದು ಹೊರಟ್ಟಿ ಹೆಮ್ಮೆಯಿಂದ ಹೇಳಿಕೋಂಡರು.

ಈ ಬಗ್ಗೆ ಎಲ್ಲಾ ರಾಜ್ಯಗಳಿಂದ ದಾಖಲೆ ತರಿಸಿಕೊಂಡು ಪರಿಶೀಲಿಸಿದ ಬಳಿಕವಷ್ಟೇ ಹೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.