ADVERTISEMENT

21ರಿಂದ ಮುಷ್ಟಿ ಧಾನ್ಯ ಅಭಿಯಾನ

ಏಪ್ರಿಲ್‌ನಲ್ಲಿ ಮೂರು ದಿನ ಸಾಮೂಹಿಕ ಭೋಜನ: ಜಾವಡೇಕರ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST

ಬೆಂಗಳೂರು: ಇದೇ 21ರಿಂದ 15 ದಿನ ರಾಜ್ಯದ 224 ಕ್ಷೇತ್ರಗಳಲ್ಲಿ ‘ಮುಷ್ಟಿ ಧಾನ್ಯ ಅಭಿಯಾನ’ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಶನಿವಾರ ಹೇಳಿದರು.

ರಾಜ್ಯದ ಪ್ರತಿ ಮನೆಗೂ ತೆರಳಲಿರುವ ಕಾರ್ಯಕರ್ತರು ಒಂದು ಹಿಡಿ ಅಕ್ಕಿ, ಗೋಧಿ ಅಥವಾ ರಾಗಿಯನ್ನು ಸಂಗ್ರಹಿಸಲಿದ್ದಾರೆ. ಈ ಅಭಿಯಾನ ಏಪ್ರಿಲ್ 4 ರವರೆಗೆ ನಡೆಯಲಿದೆ. ಅದೇ 8, 9 ಮತ್ತು 10ರಂದು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮೂಹಿಕ ಭೋಜನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ರೈತರು ಮತ್ತು ಕಾರ್ಯಕರ್ತರು ಈ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ರೈತರು ಅನ್ನದಾತರಾಗಿದ್ದು, ಅವರ ನೆಮ್ಮದಿ ಹಾಗೂ ಭದ್ರತೆಗೆ ನಾವೆಲ್ಲ ಕಂಕಣ ಬದ್ಧರಾಗಿರುತ್ತೇವೆ. ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಗೆ ಶರಣಾಗಲು ಬಿಡುವುದಿಲ್ಲ’ ಎಂಬ ಪ್ರತಿಜ್ಞಾ ವಿಧಿಯನ್ನು ಈ ವೇಳೆ ಬೋಧಿಸಲಾಗುವುದು ಎಂದರು.‌

ADVERTISEMENT

ಬಿಜೆಪಿ ಮಾತ್ರ ರೈತರ ಪರ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಭಿಯಾನ ಯಶಸ್ವಿಗೊಳಿಸಲು ಈಗಾಗಲೇ 6,000 ಉಸ್ತುವಾರಿಗಳನ್ನು ನೇಮಿಸಲಾಗಿದೆ ಎಂದರು.

**

‘ಸರ್ಕಾರದ ವೈಫಲ್ಯ’
ರಾಜ್ಯದಲ್ಲಿ ಉಂಟಾಗಿರುವ ಅನಿಯಮಿತ ಲೋಡ್ ಶೆಡ್ಡಿಂಗ್‌ಗೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಜಾವಡೇಕರ್‌ ಟೀಕಿಸಿದರು.

‘ಕೇಂದ್ರ ಸರ್ಕಾರ ಸಾಕಷ್ಟು ಪ್ರಮಾಣದ ವಿದ್ಯುತ್ ಪೂರೈಸಲು ಸಿದ್ಧವಿದೆ. ರಾಜ್ಯ ಬೇಡಿಕೆ ಸಲ್ಲಿಸಿದಷ್ಟು ವಿದ್ಯುತ್ತನ್ನು ಒದಗಿಸುತ್ತಿದೆ. ಸಮರ್ಪಕ ನಿರ್ವ
ಹಣೆ ಮಾಡದೇ ಇರುವುದು ಸಮಸ್ಯೆಗೆ ಕಾರಣವಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.