ADVERTISEMENT

2.34 ಲಕ್ಷ ಜನರನ್ನು ಕಚ್ಚಿದ ಬೀದಿ ನಾಯಿಗಳು!

ಒಂದು ವರ್ಷದಿಂದ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಸ್ಥಗಿತ

ವಿಜಯಕುಮಾರ್ ಸಿಗರನಹಳ್ಳಿ
Published 18 ಜನವರಿ 2017, 19:29 IST
Last Updated 18 ಜನವರಿ 2017, 19:29 IST
2.34 ಲಕ್ಷ ಜನರನ್ನು ಕಚ್ಚಿದ ಬೀದಿ ನಾಯಿಗಳು!
2.34 ಲಕ್ಷ ಜನರನ್ನು ಕಚ್ಚಿದ ಬೀದಿ ನಾಯಿಗಳು!   

ಬೆಂಗಳೂರು: ರಾಜ್ಯದಲ್ಲಿ ಬೀದಿನಾಯಿಗಳ ಉಪಟಳ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2016ರಲ್ಲಿ 2.34 ಲಕ್ಷ ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಆರೋಗ್ಯ ಇಲಾಖೆ  ಮಾಹಿತಿ ಪ್ರಕಾರ, ಕಳೆದ ವರ್ಷ ನಾಯಿ ದಾಳಿಗೆ ಒಳಗಾದವರ ಪೈಕಿ  ಒಬ್ಬರು ಮೃತಪಟ್ಟಿದ್ದಾರೆ. ಆರು ವರ್ಷಗಳ ಅಂಕಿ
ಸಂಖ್ಯೆಗೆ ಹೋಲಿಕೆ ಮಾಡಿದರೆ ನಾಯಿ ಕಡಿದು ಸತ್ತವರ ಸಂಖ್ಯೆ ಕ್ರಮೇಣ ಕಡಿಮೆ ಆಗಿದೆ.

ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಸ್ಥಗಿತ: ಬೆಂಗಳೂರು ನಗರವೊಂದರಲ್ಲೇ ಒಂದು ವರ್ಷದ ಅವಧಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ಸುಮಾರು 50 ಸಾವಿರ ಹೆಚ್ಚಿದೆ. ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಮಹಾನಗರಪಾಲಿಕೆ ಒಂದು ವರ್ಷದಿಂದ ಸ್ಥಗಿತಗೊಳಿಸಿರುವುದು ಸಂಖ್ಯೆ ಹೆಚ್ಚಳಕ್ಕೆ ಮುಖ್ಯ ಕಾರಣ.

ಕಳೆದ ವರ್ಷ 3 ಲಕ್ಷಕ್ಕೂ ಕಡಿಮೆ ಇದ್ದ ನಾಯಿಗಳ ಸಂಖ್ಯೆ ಈಗ 3.50 ಲಕ್ಷ ದಾಟಿದೆ. ಉಳಿದ ನಗರಗಳಲ್ಲೂ ನಾಯಿಗಳ ಸಂಖ್ಯೆ ಗಣನೀಯವಾಗಿ ಏರಿದೆ.
ಕೇಂದ್ರ ಸರ್ಕಾರದ ಪ್ರಾಣಿ ಕಲ್ಯಾಣ ಮಂಡಳಿ(ಎ.ಡಬ್ಲ್ಯು.ಬಿ.ಐ) ಪ್ರಾಣಿಗಳ ಸಂತಾನ ಶಕ್ತಿ ಹರಣ ಮಾಡಲು ಅನುಸರಿಸಬೇಕಾದ ಕ್ರಮಗಳ ಕುರಿತು  ಹೊಸ ಮಾರ್ಗಸೂಚಿ ರೂಪಿಸಿ, ಜಾರಿಗೆ ತಂದಿದೆ.

ಹಿಂದೆ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಮಾಡಿ ಅದೇ ದಿನ ಬಿಡಲಾಗುತಿತ್ತು. ಹೊಸ ಮಾರ್ಗಸೂಚಿ ಪ್ರಕಾರ ಹಾಗೆ ಮಾಡುವಂತಿಲ್ಲ.  ನಾಯಿಗಳನ್ನು ಹಿಡಿದು ಆರೋಗ್ಯ ತಪಾಸಣೆ ನಡೆಸಿ ಒಂದು ದಿನ ವಿಶ್ರಾಂತಿಯಲ್ಲಿ ಇರಿಸಬೇಕು. ಮರುದಿನ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕು. ಬಳಿಕ  48 ಗಂಟೆ ಕಾಲ ವೈದ್ಯರು  ಆರೈಕೆ ಮಾಡುವುದು ಕಡ್ಡಾಯ.

ಕೇಂದ್ರ ಸರ್ಕಾರದ ಮಾರ್ಗಸೂಚಿ ಅನುಸರಿಸಲು ಸ್ಥಳೀಯ ಸಂಸ್ಥೆಯಲ್ಲಿ ಮೂಲಸೌಕರ್ಯ ಇಲ್ಲದಿರುವುದರಿಂದ ಒಂದು ವರ್ಷದಿಂದ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ನಿಲ್ಲಿಸಲಾಗಿದೆ. ಇದರಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಹೊಸ ಮಾರ್ಗಸೂಚಿ ಪ್ರಕಾರವೇ ಶಸ್ತ್ರಚಿಕಿತ್ಸೆ ನಡೆಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
*
ಹೊಸ ಮಾರ್ಗಸೂಚಿ ಪ್ರಕಾರ, ಬೀದಿ ನಾಯಿಗಳ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಗೆ ಮೂಲಸೌಕರ್ಯ ಇಲ್ಲದ ಕಾರಣ ಒಂದು ವರ್ಷದಿಂದ ಶಸ್ತ್ರಚಿಕಿತ್ಸೆ ನಡೆದಿಲ್ಲ.
ಡಾ. ಆನಂದ್,
ಜಂಟಿ ನಿರ್ದೇಶಕರು, ಬಿಬಿಎಂಪಿ (ಪಶುಸಂಗೋಪನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.