ADVERTISEMENT

34 ಸಾವಿರಕ್ಕೆ ಏರಿದ ಅರ್ಜಿಗಳ ಸಂಖ್ಯೆ

ಆರ್‌ಟಿಐ: ಮಾಹಿತಿ ಆಯೋಗವೇ ಕಕ್ಕಾಬಿಕ್ಕಿ

ಬಿ.ಎನ್.ಶ್ರೀಧರ
Published 9 ಫೆಬ್ರುವರಿ 2016, 19:38 IST
Last Updated 9 ಫೆಬ್ರುವರಿ 2016, 19:38 IST
34 ಸಾವಿರಕ್ಕೆ ಏರಿದ ಅರ್ಜಿಗಳ ಸಂಖ್ಯೆ
34 ಸಾವಿರಕ್ಕೆ ಏರಿದ ಅರ್ಜಿಗಳ ಸಂಖ್ಯೆ   

ಬೆಂಗಳೂರು: ಮೊದಲನೇ ಮೇಲ್ಮನವಿ ಪ್ರಾಧಿಕಾರಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಮಾಹಿತಿ ಆಯೋಗಕ್ಕೆ ಬರುತ್ತಿರುವ ಮೇಲ್ಮನವಿಗಳ ಸಂಖ್ಯೆ ದಿನೇ ದಿನೇ ಏರುಮುಖದಲ್ಲಿ ಸಾಗುತ್ತಿವೆ. ಅವುಗಳ ಸಂಖ್ಯೆ ನೋಡಿ  ಮಾಹಿತಿ ಆಯೋಗವೇ ಕಕ್ಕಾಬಿಕ್ಕಿಯಾಗಿದೆ!

ಕೆಳಹಂತದ ಅಧಿಕಾರಿಗಳು ಮಾಹಿತಿ ನೀಡದೇ ಇದ್ದ ಪಕ್ಷದಲ್ಲಿ ಅವರ ನಂತರದ ಹಿರಿಯ ಅಧಿಕಾರಿಗಳು (ಮೊದಲನೇ ಮೇಲ್ಮನವಿ ಪ್ರಾಧಿಕಾರ) ಮಾಹಿತಿ ಕೊಡಿಸಬೇಕು ಎಂದು ಮಾಹಿತಿ ಹಕ್ಕು ಕಾಯ್ದೆ ಹೇಳುತ್ತದೆ. ಆದರೆ, ಶೇ 99ರಷ್ಟು ಪ್ರಕರಣಗಳಲ್ಲಿ ಮೊದಲನೇ ಮೇಲ್ಮನವಿ ಪ್ರಾಧಿಕಾರಗಳು ಮಾಹಿತಿಯನ್ನೇ ನೀಡುತ್ತಿಲ್ಲ ಎಂಬುದು ಮಾಹಿತಿ ಆಯೋಗದ ಅಭಿಪ್ರಾಯ.

ಈ ಸಂಬಂಧ ಪ್ರಭಾರ ಮುಖ್ಯ ಮಾಹಿತಿ ಆಯುಕ್ತ ಎಲ್‌.ಕೃಷ್ಣಮೂರ್ತಿ ಅವರು ಇತ್ತೀಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಅವರಿಗೆ ಪತ್ರ ಕೂಡ ಬರೆದಿದ್ದಾರೆ.

‘ಮಾಹಿತಿ ಹಕ್ಕು ಕಾಯ್ದೆ ಕಲಂ 4ರ ಪ್ರಕಾರ ಸರ್ಕಾರದ ವಿವಿಧ ಇಲಾಖೆ ಮತ್ತು ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದಲೇ ಗರಿಷ್ಠ ಮಟ್ಟದ ಮಾಹಿತಿಯನ್ನು ವೈಬ್‌ಸೈಟ್‌ಗಳಲ್ಲಿ ಹಾಕಬೇಕು. ಆದರೆ, ಬಹುತೇಕ ಇಲಾಖೆ/ ಸಂಸ್ಥೆಗಳು ಈ ಕೆಲಸ ಮಾಡುತ್ತಿಲ್ಲ. ಹೀಗಾಗಿ ಅರ್ಜಿದಾರರು ಮಾಹಿತಿ ಆಯೋಗಕ್ಕೆ ಎರಡನೇ ಮೇಲ್ಮನವಿ ಸಲ್ಲಿಸುತ್ತಿದ್ದಾರೆ’ ಎಂದು ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪರಿಣಾಮ ಏನು?: ಕೆಳಹಂತದಲ್ಲಿ ಅಧಿಕಾರಿಗಳು ಮಾಹಿತಿ ನೀಡದ ಕಾರಣ ದಿನಕ್ಕೆ ಸರಾಸರಿ 45ರಿಂದ 50 ಅರ್ಜಿಗಳು ಮಾಹಿತಿ ಆಯೋಗದ ಕದ ತಟ್ಟುತ್ತಿವೆ. ಅಂದರೆ, ತಿಂಗಳಿಗೆ 1,300ರಿಂದ 1,400 ಅರ್ಜಿಗಳು ಬರುತ್ತಿವೆ.

ಇದರಿಂದಾಗಿ ವಿಲೇವಾರಿಗೆ ಬಾಕಿ ಇರುವ ಅರ್ಜಿಗಳ ಸಂಖ್ಯೆ 34 ಸಾವಿರ ದಾಟಿದೆ. ಎಷ್ಟೇ ಪ್ರಯತ್ನಪಟ್ಟರೂ ಅರ್ಜಿಗಳ ವಿಲೇವಾರಿ ತ್ವರಿತವಾಗಿ ಆಗುತ್ತಿಲ್ಲ. ಒಂದೊಂದು ಅರ್ಜಿ ವಿಚಾರಣೆಗೆ ಬರುವುದಕ್ಕೇ ನಾಲ್ಕೈದು ತಿಂಗಳು ಹಿಡಿಯುತ್ತಿದೆ. ಹೀಗಾಗಿ ಮಾಹಿತಿ ಕೊಡಿಸುವುದಕ್ಕಂತೂ ವರ್ಷಗಳೇ ಆಗುತ್ತಿದೆ ಎನ್ನುತ್ತಾರೆ ಕೃಷ್ಣಮೂರ್ತಿ.

ಇದಕ್ಕೇನು ಮಾಡಬೇಕು?: ಮಾಹಿತಿ ಆಯೋಗದವರೆಗೆ ಬರುವ ಬಹುತೇಕ ಅರ್ಜಿಗಳನ್ನು ಮೊದಲನೇ ಮೇಲ್ಮನವಿ ಪ್ರಾಧಿಕಾರದಲ್ಲೇ ಇತ್ಯರ್ಥಪಡಿಸಬಹುದು. ಆದರೆ, ಕೆಳಹಂತದ ಅಧಿಕಾರಿಗಳು ಮಾಹಿತಿ ಕೊಡದ ಕಾರಣ ಅರ್ಜಿದಾರರು ಮಾಹಿತಿ ಆಯೋಗದ ಮೊರೆ ಹೋಗುತ್ತಿದ್ದಾರೆ. ಅದನ್ನು ತಪ್ಪಿಸಬೇಕಾದರೆ ಕಡ್ಡಾಯವಾಗಿ ಮೊದಲನೇ ಮೇಲ್ಮನವಿ ಪ್ರಾಧಿಕಾರ ಮಾಹಿತಿ ಕೊಡಿಸುವ ಕೆಲಸ ಮಾಡಬೇಕು. ಅರ್ಜಿದಾರರಿಗೆ ಸರಿಯಾಗಿ ಮಾಹಿತಿ ಕೊಟ್ಟಿದ್ದೇ ಆದರೆ ಆಯೋಗಕ್ಕೆ ಬರುವ ಅರ್ಜಿಗಳ ಸಂಖ್ಯೆ ಅರ್ಧದಷ್ಟು ಕಡಿಮೆ ಆಗುತ್ತದೆ ಎಂದು ಕೃಷ್ಣಮೂರ್ತಿ ವಿವರಿಸುತ್ತಾರೆ.

ಈ ನಿಟ್ಟಿನಲ್ಲಿ ಮುಖ್ಯ ಕಾರ್ಯದರ್ಶಿ ಗಮನಹರಿಸಿ, ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸ್ಪಷ್ಟ ಸೂಚನೆ ನೀಡಬೇಕು.  ಕೆಳಹಂತದಲ್ಲಿ ಮಾಹಿತಿ ಕೊಡಿಸುವ ಕೆಲಸ ಮಾಡಬೇಕು. ಮಾಹಿತಿ ಆಯುಕ್ತರು ಕರೆಯುವ ಸಭೆಗಳಲ್ಲಿ ಹಾಜರಾಗುವಂತೆ ಇಲಾಖೆ ಮುಖ್ಯಸ್ಥರಿಗೆ ಸೂಚಿಸಬೇಕೆಂದು ಕೃಷ್ಣಮೂರ್ತಿಯವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೇಂದ್ರ ಮಾಹಿತಿ ಆಯೋಗದಲ್ಲಿ ಇರುವ ಹಾಗೆ ರಾಜ್ಯದ ಆಯೋಗದಲ್ಲೂ ಅರ್ಜಿಗಳನ್ನು ಮೊದಲ ವಿಚಾರಣೆಯಲ್ಲೇ ವಿಲೇವಾರಿ ಮಾಡುವ ಪ್ರಕ್ರಿಯೆ ಜಾರಿಗೆ ಬರಬೇಕು. ಆ ಮೂಲಕವೇ ತ್ವರಿತ ಮಾಹಿತಿ ಕೊಡಿಸುವ ಕೆಲಸ ಮಾಡಬಹುದು. ಪ್ರಕರಣಗಳ ವಿಚಾರಣೆಯನ್ನು ಮುಂದೂಡುವ ಪ್ರವೃತ್ತಿ ಕೈಬಿಡಬೇಕು ಎನ್ನುತ್ತವೆ ಮೂಲಗಳು.

ಎಲ್ಲಿಂದ ಬರುತ್ತೆ ಹೆಚ್ಚು ಅರ್ಜಿ?: ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃಧ್ಧಿ ಇಲಾಖೆಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿ ಹೆಚ್ಚು ಅರ್ಜಿಗಳು ಬರುತ್ತವೆ. ಈ ಇಲಾಖೆಗಳಲ್ಲಿ ಟೆಂಡರ್‌, ಕಾಮಗಾರಿಯ ಮೊತ್ತ ಇತ್ಯಾದಿ ಎಲ್ಲ ವಿಷಯಗಳನ್ನೂ ವೆಬ್‌ಸೈಟ್‌ನಲ್ಲಿ ಹಾಕಲು ಹೇಳಿದ್ದರೂ ಯಾರೂ ಆ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಅರ್ಧ ಮಾಹಿತಿ ಕೊಟ್ಟು, ಇನ್ನರ್ಧ ಕೊಡುವುದಿಲ್ಲ. ಹೀಗಾಗಿ ಸಾರ್ವಜನಿಕರು ಹೆಚ್ಚು ಅರ್ಜಿಗಳನ್ನು ಸಲ್ಲಿಸುತ್ತಾರೆ ಎನ್ನುತ್ತವೆ ಮೂಲಗಳು.

10 ವರ್ಷದಲ್ಲಿ ಕೇವಲ 6 ಸಭೆ!
ಮಾಹಿತಿ ಹಕ್ಕು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ನೆರವಾಗುವ ಸಲುವಾಗಿಯೇ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ನಿಯಮ ಪ್ರಕಾರ ಈ ಸಮಿತಿ ವರ್ಷಕ್ಕೆ ಕನಿಷ್ಠ ನಾಲ್ಕು ಸಲ ಸಭೆ ಸೇರಿ, ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಕೆಲಸದ ಪ್ರಗತಿಯನ್ನು ಪರಿಶೀಲಿಸಬೇಕು. ಆದರೆ, ಕಾಯ್ದೆ ಜಾರಿಯಾಗಿ ಹತ್ತು ವರ್ಷ ಆಗಿದ್ದು, ಈ ಅವಧಿಯಲ್ಲಿ ಕೇವಲ ಆರು ಬಾರಿ ಸಮಿತಿ ಸಭೆ ಸೇರಿದೆ. ಹೀಗಾಗಿಯೇ ಸರ್ಕಾರದ ಯಾವ ಇಲಾಖೆಗೂ ಸಾರ್ವಜನಿಕರಿಗೆ ಮಾಹಿತಿ ಕೊಡಬೇಕೆನ್ನುವ ಭಯ ಇಲ್ಲ ಎನ್ನುತ್ತಾರೆ ಪ್ರಭಾರ ಮಾಹಿತಿ ಆಯುಕ್ತ ಕೃಷ್ಣಮೂರ್ತಿ.
*****
ಕಾರಣಾಂತರಗಳಿಂದ ಕಾಲಕಾಲಕ್ಕೆ ಸಭೆ ನಡೆಸಲು ಆಗಿಲ್ಲ. ಇನ್ನು ಮುಂದೆ ಆ ರೀತಿ ಆಗುವುದಿಲ್ಲ. ವೆಬ್‌ಸೈಟ್‌ನಲ್ಲಿ ಮಾಹಿತಿ ಹಾಕುವ ಕೆಲಸ ನಡೆಯುತ್ತಿದೆ
ವಿ. ಉಮೇಶ್‌, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.