ADVERTISEMENT

4 ಸಾವಿರ ಕಿ.ಮೀ ಹೆದ್ದಾರಿ ಕಾಮಗಾರಿಗೆ ವರ್ಷದ ಗಡುವು!

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:30 IST
Last Updated 6 ಜುಲೈ 2018, 19:30 IST

ಬೆಂಗಳೂರು: ರಾಜ್ಯದಲ್ಲಿ ಪ್ರಗತಿಯಲ್ಲಿರುವ ಸುಮಾರು 4 ಸಾವಿರ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ವರ್ಷದ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಎಚ್‌ಎಐ) ರಾಜ್ಯದಲ್ಲಿ ಕೈಗೊಂಡಿರುವ ₹ 37 ಸಾವಿರ ಕೋಟಿ ವೆಚ್ಚದ ಯೋಜನೆಗಳ ಪ್ರಗತಿ ಪರಿಶೀಲಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.

‘ಹೆದ್ದಾರಿಗಳ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಾದರೂ ಕೆಲಸ ಚುರುಕು ಪಡೆಯಬೇಕು. ಪ್ರತಿ ತಿಂಗಳು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಬೇಕು. ಆದಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಎನ್‌ಎಚ್‌ಎಐಗೆ ಭೂಮಿ ಹಸ್ತಾಂತರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

‘ಕಾಮಗಾರಿ ಸಂದರ್ಭದಲ್ಲಿ ಎದುರಾಗುವ ವಿದ್ಯುತ್ ಕಂಬಗಳು ಹಾಗೂ ನೀರಿನ ಪೈಪುಗಳ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಎಲ್ಲರೂ ಸಮನ್ವಯದಿಂದ ಕೆಲಸ ಮಾಡಿ, ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು’ ಎಂದರು.

ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ , ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಸಹಕಾರ ಸಚಿವ ಸಚಿವ ಬಂಡೆಪ್ಪ ಕಾಶೆಂಪುರ, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಸೇರಿದಂತೆ ಎನ್‌ಎಚ್‌ಐಎನ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ವರ್ಷದೊಳಗೆ ಪೂರ್ಣಗೊಳಿಸಲು ನಿರ್ಧರಿಸಿರುವ ಪ್ರಮುಖ ಯೋಜನೆಗಳು

ಎನ್‌ಎಚ್‌–275:ಬೆಂಗಳೂರು–ಮೈಸೂರು (117 ಕಿ.ಮೀ‌)

ಎನ್‌ಎಚ್‌–17:ಗೋವಾ ಗಡಿಯಿಂದ ಕಾರವಾರ ಮೂಲಕ ಕುಂದಾಪುರ (170 ಕಿ.ಮೀ)

ಎನ್‌ಎಚ್‌–206: ತುಮಕೂರು-ಶಿವಮೊಗ್ಗ ನಾಲ್ಕು ಪಥ (205 ಕಿ.ಮೀ)

ಎನ್‌ಎಚ್‌–150:ಬಳ್ಳಾರಿ-ಹಿರಿಯೂರು (160 ಕಿ.ಮೀ)

ಎನ್‌ಎಚ್‌–48:ಬೆಂಗಳೂರು–ಹಾಸನ (180ಕಿ.ಮೀ)

ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‍ಟಿಆರ್‍ಆರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.