ADVERTISEMENT

ಮಹದಾಯಿ ಹೋರಾಟದಲ್ಲಿ ಭಾಗಿ: ಜಿ.ಮಾದೇಗೌಡ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಜಿ.ಮಾದೇಗೌಡ
ಜಿ.ಮಾದೇಗೌಡ   

ಮಂಡ್ಯ: ‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಉತ್ತರ ಕರ್ನಾಟಕದ ನರಗುಂದ, ನವಲಗುಂದದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ಹೋರಾಟಗಾರರಿಗೆ ಉತ್ಸಾಹ ತುಂಬುತ್ತೇನೆ’ ಎಂದು ಕಾವೇರಿ ನೀರಾವರಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ.ಮಾದೇಗೌಡ ಹೇಳಿದರು.

ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಬುಧವಾರ ಮಹದಾಯಿ ಹೋರಾಟದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

‘ನಾನು ಹಲವು ಚಳವಳಿಯಲ್ಲಿ ಭಾಗವಹಿಸಿದ್ದೇನೆ. ಸಾತಂತ್ರ್ಯ ಚಳವಳಿಯಿಂದ ಕಾವೇರಿ ಚಳವಳಿ, ರಾಜ್ಯ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ್ದೇನೆ. ಈಗ ಮಹದಾಯಿ ಹೋರಾಟದಲ್ಲೂ ಸಂತೋಷದಿಂದ ಪಾಲ್ಗೊಳ್ಳುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯನಿಂದ ಪ್ರಧಾನಮಂತ್ರಿವರೆಗೂ ಎಲ್ಲರೂ ಜನರಿಗೆ ನ್ಯಾಯ ಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. ಮಹದಾಯಿ ಹೋರಾಟದಲ್ಲಿ ಪಾಲ್ಗೊಳ್ಳಲು ಶೀಘ್ರ ದಿನಾಂಕ ನಿಗದಿ ಮಾಡುತ್ತೇನೆ’ ಎಂದು ಹೇಳಿದರು.

ADVERTISEMENT

‘ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಪ್ರಧಾನಿ ಕಚೇರಿ ಎದುರು ಹೋರಾಟ ನಡೆಸಬೇಕು. ನವಲಗುಂದ, ನರಗುಂದದಲ್ಲಿ ಚಳವಳಿ ಮಾಡಿದರೆ ಏನೂ ಪ್ರಯೋಜನವಾಗದು. ಎಲ್ಲರೂ ದೆಹಲಿಯಲ್ಲಿ ಕಚೇರಿಗಳಿಗೆ ಘೇರಾವ್‌ ಹಾಕಬೇಕು, ನಾನೂ ಬರುತ್ತೇನೆ. ಪ್ರಧಾನಮಂತ್ರಿ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ. ಅವರಿಗೆ ಅಧಿಕಾರ ಇದೆ. ಮೂರು ರಾಜ್ಯದ ಮುಖ್ಯಮಂತ್ರಿಗಳನ್ನು ಕೂರಿಸಿ ಮಾತನಾಡಿ ನ್ಯಾಯ ಒದಗಿಸಬೇಕು. ಕೇಂದ್ರ ಸರ್ಕಾರದಲ್ಲಿರುವ ನಮ್ಮ ರಾಜ್ಯದ ಮಂತ್ರಿಗಳು, ಸಂಸದರು ಮಹದಾಯಿ ವಿಚಾರವಾಗಿ ಧ್ವನಿ ಎತ್ತಬೇಕು. ಇದು ಬರೀ ಜನರ ಸಮಸ್ಯೆಯಾಗಿಲ್ಲ. ನಮ್ಮ ರಾಜ್ಯದ ಸಮಸ್ಯೆಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.