ADVERTISEMENT

ಬಿಜೆಪಿ ಕಾರ್ಯಕರ್ತನ ಕೊಲೆ: ಆರೋಪಿಗಳ ಬಂಧನ; ರಾತ್ರಿ ಮತ್ತೆ ಇಬ್ಬರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 20:08 IST
Last Updated 3 ಜನವರಿ 2018, 20:08 IST
ದೀಪಕ್‌ ರಾವ್‌
ದೀಪಕ್‌ ರಾವ್‌   

ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳ ಕೈಕಂಬದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ (24) ಎಂಬುವರನ್ನು ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಬುಧವಾರ ಮಧ್ಯಾಹ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ.

ಈ ಪ್ರಕರಣದ ಬೆನ್ನಲ್ಲೇ ರಾತ್ರಿ ಸುರತ್ಕಲ್‌ನಲ್ಲಿ ಮುಹಮ್ಮದ್‌ ಮುಬಶ್ಶಿರ್‌ (22) ಹಾಗೂ ಕೊಟ್ಟಾರ ಚೌಕಿಯಲ್ಲಿ ಅಬ್ದುಲ್‌ ಬಶೀರ್‌ (47) ಎಂಬುವರ ಮೇಲೆ ದುಷ್ಕರ್ಮಿಗಳ ತಂಡ ತಲವಾರ್‌ನಿಂದ ಹಲ್ಲೆ ನಡೆಸಿದೆ. ಇದರಿಂದಾಗಿ ಸುರತ್ಕಲ್‌ ಮತ್ತು ಮಂಗಳೂರು ಸುತ್ತಮುತ್ತ ಬಿಗುವಿನ ವಾತಾವರಣ ನೆಲೆಸಿದೆ.

ಮೃತ ದೀಪಕ್‌ ಮೊದಲು ಬಜರಂಗದಳದ ಕಾರ್ಯಕರ್ತರಾಗಿದ್ದರು. ಈಗ ಬಿಜೆಪಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಘಟಕದಲ್ಲಿ ಸಕ್ರಿಯರಾಗಿದ್ದರು. ಇವರು ಅಬ್ದುಲ್‌ ಮಜೀದ್‌ ಎಂಬುವವರ ಮೊಬೈಲ್‌ ಮತ್ತು ಸಿಮ್‌ ವ್ಯಾಪಾರ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಬುಧವಾರ ಮಧ್ಯಾಹ್ನ ಮಜೀದ್‌ ಅವರ ಮನೆಗೆ ಹೋಗಿ ಸಿಮ್‌ ವಿತರಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಿಕೊಂಡು ಮರಳುತ್ತಿರುವಾಗ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.‌

ADVERTISEMENT

ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಶವವನ್ನು ನಗರದ ಎ.ಜೆ.ಆಸ್ಪತ್ರೆಗೆ ಸ್ಥಳಾಂತರ ಮಾಡಿದರು. ಮೃತರ ಸಂಬಂಧಿಕರು ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ಗುರುವಾರ ಬೆಳಿಗ್ಗೆ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ನಂತರ ಅಂತ್ಯಸಂಸ್ಕಾರ ನೆರವೇರಲಿದೆ’ ಎಂದು ನಗರ ಪೊಲೀಸ್ ಕಮಿಷನರ್‌ ಟಿ.ಆರ್.ಸುರೇಶ್ ತಿಳಿಸಿದರು.

ಕಟ್ಟೆಚ್ಚರ: ಕೊಲೆಯ ಮಾಹಿತಿ ಕ್ಷಣಾರ್ಧದಲ್ಲಿ ವಾಟ್ಸ್‌ ಆ್ಯಪ್‌, ಫೇಸ್‌ ಬುಕ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಯಿತು. ಶವ ಇರಿಸಿರುವ ಎ.ಜೆ.ಆಸ್ಪತ್ರೆಯತ್ತ ಬರುವಂತೆ ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತ ರಿಗೆ ಸಾಮಾಜಿಕ ಮಾಧ್ಯಮಗಳಲ್ಲೇ ಕರೆ ನೀಡಲಾಯಿತು. ನೂರಾರು ಕಾರ್ಯ
ಕರ್ತರು ಅಲ್ಲಿಗೆ ಧಾವಿಸಿ ಬಂದರು.

ಇಷ್ಟರ ನಡುವೆಯೇ ದೀಪಕ್‌ ಊರಿನ ಸಮೀಪದ ಸೂರಿಂಜೆಯಲ್ಲಿ ದುಷ್ಕರ್ಮಿಗಳು ನಗರ ಸಾರಿಗೆಯ ಖಾಸಗಿ ಬಸ್ಸೊಂದಕ್ಕೆ ಕಲ್ಲೆಸೆದರು. ಈ ಸುದ್ದಿ ಹಬ್ಬುತ್ತಿದ್ದಂತೆ ಕೃಷ್ಣಾಪುರ, ಕಾಟಿಪಳ್ಳ, ಕಾಟಿಪಳ್ಳ ಕೈಕಂಬ ಮತ್ತಿತರ ಪ್ರದೇಶಗಳಲ್ಲಿ ಹಲವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು. ರಾತ್ರಿ ಮತ್ತೆ ಸುರತ್ಕಲ್‌ನಲ್ಲಿ ಒಂದು ಬಸ್‌ಗೆ ಕಲ್ಲು ತೂರಲಾಯಿತು. ನಗರ ಪೊಲೀಸ್ ಕಮಿಷನರೇಟ್‌ನಿಂದ 200 ಪೊಲೀಸರನ್ನು ನಿಯೋಜಿಸಲಾಗಿದೆ. ಮಡಿಕೇರಿ ಜಿಲ್ಲೆ
ಯಿಂದ ಇಬ್ಬರು ಡಿವೈಎಸ್‌ಪಿಗಳು ಮತ್ತು 100 ಪೊಲೀಸರು ಬಂದಿದ್ದಾರೆ. ರಾಜ್ಯ ಮೀಸಲು ಪೊಲೀಸ್‌ ಪಡೆ ಮತ್ತು ನಗರ ಸಶಸ್ತ್ರ ಮೀಸಲು ಪಡೆಯ ತಲಾ ಆರು ತುಕಡಿಗಳನ್ನು ಸುರತ್ಕಲ್‌ನಲ್ಲಿ ಇರಿಸಲಾಗಿದೆ.

ಆಗ ಕಾರನ್ನು ಮಣ್ಣಿನ ರಸ್ತೆಯಲ್ಲಿ ನುಗ್ಗಿಸಿದ ಆರೋಪಿಗಳು ಮುಂದಕ್ಕೆ ಹೋಗಲಾಗದೇ ಸೆರೆ ಸಿಕ್ಕರು. ಒಬ್ಬನ ಕಾಲಿಗೆ ಗುಂಡು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಳೆಯ ದ್ವೇಷ ಕಾರಣವಾಯಿತೇ?: ಡಿಸೆಂಬರ್‌ 1ರಂದು ಕಾಟಿಪಳ್ಳ ಕೈಕಂಬದಲ್ಲಿ ಹಿಂದೂ ಧರ್ಮೀಯರು ಭೂತ ಕೋಲವೊಂದನ್ನು ಆಯೋಜಿಸಿದ್ದರು. ಪ್ರತಿವರ್ಷವೂ ಅವರು ನಿರ್ದಿಷ್ಟ ಸ್ಥಳವೊಂದರಲ್ಲಿ ಫ್ಲೆಕ್ಸ್‌ ಹಾಕುತ್ತಿದ್ದರು. ಈ ವರ್ಷ ಅದೇ ಜಾಗದಲ್ಲಿ ಮುಸ್ಲಿಂ ಯುವಕರು ಈದ್‌ ಮಿಲಾದ್‌ ಕಾರ್ಯಕ್ರಮದ ಫ್ಲೆಕ್ಸ್ ಹಾಕಿದ್ದರು. ಈ ಸಂಬಂಧ ಎರಡೂ ಗುಂಪಿನವರಿಗೆ ಗಲಾಟೆ ನಡೆದಿತ್ತು. ಅದೇ ದ್ವೇಷದಲ್ಲಿ ದೀಪಕ್‌ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಪಿಎಫ್‌ಐ ಕಾರಣ: ಆರೋಪ

ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡರಾದ ಸತ್ಯಜಿತ್‌ ಸುರತ್ಕಲ್, ಜೆ.ಕೃಷ್ಣ ಪಾಲೇಮಾರ್, ಡಾ.ಭರತ್‌ ಶೆಟ್ಟಿ, ಬಜರಂಗದಳದ ಕರ್ನಾಟಕ ದಕ್ಷಿಣ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ‘ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರೇ ಈ ಕೊಲೆ ಮಾಡಿದ್ದಾರೆ. ಅವರನ್ನು ತಕ್ಷಣ ಬಂಧಿಸಬೇಕು. ಪಿಎಫ್‌ಐ ನಿಷೇಧಕ್ಕೆ ಕ್ರಮ ಜರುಗಿಸಬೇಕು’ ಎಂದು ಕಮಿಷನರ್‌ ಅವರನ್ನು ಆಗ್ರಹಿಸಿದರು.

ಮುಖ್ಯಾಂಶಗಳು

* ಮಾಲೀಕರ ಮನೆಯಿಂದ ಮರಳುವಾಗ ಕೊಚ್ಚಿ ಕೊಲೆಮಾಡಿದ ದುಷ್ಕರ್ಮಿಗಳು

* ಸುರತ್ಕಲ್‌ ಸುತ್ತಮುತ್ತ ಬಿಗುವಿನ ಪರಿಸ್ಥಿತಿ– ಪೊಲೀಸರಿಂದ ಕಟ್ಟೆಚ್ಚರ

* ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಬಿಜೆಪಿ, ಬಜರಂಗಳ ಆರೋಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.