ADVERTISEMENT

ವೇಶ್ಯಾವಾಟಿಕೆಗೆ ಮಹಿಳೆಯರ ಸಾಗಾಟ; ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 20:30 IST
Last Updated 16 ಜನವರಿ 2018, 20:30 IST

ತುಮಕೂರು: ದೆಹಲಿ ಪೊಲೀಸರು ನೀಡಿದ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಜಿಲ್ಲಾ ಪೊಲೀಸರು ವೇಶ್ಯಾವಾಟಿಕೆ ದಂಧೆಗೆ ಮಹಿಳೆಯರನ್ನು ಸಾಗಿಸುತ್ತಿದ್ದ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.

2017ರ ಡಿ.17ರಂದು ದೆಹಲಿಯ ವೇಶ್ಯಾವಾಟಿಕೆ ಗೃಹದಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿಯು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಳು. ನಂತರ ಆಕೆಯನ್ನು ರಕ್ಷಿಸಿದ ದೆಹಲಿ ಪೊಲೀಸರು ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದರು. ಆಕೆ ತನ್ನ ವಿಳಾಸ ತಿಳಿಸಿ ಊರಿಗೆ ಕಳುಹಿಸುವಂತೆ ಕೋರಿಕೊಂಡಾಗ, ದೆಹಲಿ ಪೊಲೀಸರು ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಮಾಹಿತಿ ನೀಡಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಾರ್ಗದರ್ಶನದಂತೆ ತುಮಕೂರು ಗ್ರಾಮಾಂತರ ವೃತ್ತದ ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವು ದೆಹಲಿಗೆ ತೆರಳಿ ಆ ಯುವತಿಯನ್ನು ತುಮಕೂರಿಗೆ ಕರೆತಂದು ವಿಚಾರಣೆ ಮಾಡಿದಾಗ, ಭ್ಯಾಗ್ಯಮ್ಮ ಮತ್ತು ಭಾಗ್ಯ ಎಂಬುವರು ಮಹಿಳೆಯರನ್ನು ವೇಶ್ಯಾವಾಟಿಕೆಗೆ ಸಾಗಿಸುತ್ತಿರುವ ಸಂಗತಿ ಬೆಳಕಿಗೆ ಬಂದಿತ್ತು.

ADVERTISEMENT

‘ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ತುಂಬಾಡಿ ಗ್ರಾಮದ ಭಾಗ್ಯಮ್ಮ ಕೆಲಸ ಕೊಡಿಸುವ ಆಮಿಷವೊಡ್ಡಿ, ಮತ್ತೊಬ್ಬ ಯುವತಿಯೊಂದಿಗೆ ನನ್ನನ್ನು ಆಂಧ್ರಪ್ರದೇಶದ ಹಿಂದೂಪುರಕ್ಕೆ ಕರೆದೊಯ್ದಿದ್ದರು. ಅಲ್ಲಿ ನೂರ್‌ಜಾನ್‌ ಎಂಬಾತನನ್ನು ಪರಿಚಯ ಮಾಡಿಸಿದ್ದರು. ಆತ ದೆಹಲಿಯಲ್ಲಿನ ವೇಶ್ಯಾವಾಟಿಕೆ ದಂಧೆಕೋರರನ್ನು ಸಂಪರ್ಕಿಸಿ ಅಲ್ಲಿಗೆ ನಮ್ಮನ್ನು ಭಾಗ್ಯಮ್ಮ ಜತೆ ಕಳುಹಿಸಿಕೊಟ್ಟಿದ್ದ. ಭಾಗ್ಯಮ್ಮ ದೆಹಲಿ ರೈಲು ನಿಲ್ದಾಣದ ಬಳಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹೆಂಗಸಿಗೆ ನಮ್ಮನ್ನು ಮಾರಾಟ ಮಾಡಿದ್ದರು’ ಎಂದು ಯುವತಿಯು ಪೊಲೀಸರಿಗೆ ಮಾಹಿತಿ ನೀಡಿದ್ದಳು.

ಈ ಮಾಹಿತಿ ಆಧರಿಸಿ ಪೊಲೀಸರು ಕಲಬುರ್ಗಿ ಜಿಲ್ಲೆಯ ಅರಸೂರು ಗ್ರಾಮದಲ್ಲಿ 2017ರ ಡಿ.29ರಂದು ಭಾಗ್ಯಮ್ಮ, ಕೊರಟಗೆರೆಯಲ್ಲಿ ಭಾಗ್ಯ ಹಾಗೂ ಆಂಧ್ರಪ್ರದೇಶದ ಕದಿರಿ ಗ್ರಾಮದಲ್ಲಿ ನೂರ್‌ಜಾನ್‌ನನ್ನು ಬಂಧಿಸಿದ್ದಾರೆ. ಆರೋಪಿಗಳ ಜಾಲದಲ್ಲಿ ಸಿಲುಕಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಮತ್ತೊಬ್ಬ ಯುವತಿಯನ್ನು ಪೊಲೀಸರು ರಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.