ADVERTISEMENT

ಸಿ.ಎಂ. ಸಿದ್ದರಾಮಯ್ಯ ಹಾವಭಾವ ದುರ್ಯೋಧನ ಪಾತ್ರಕ್ಕೆ ಹೋಲುತ್ತವೆ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2018, 10:57 IST
Last Updated 22 ಜನವರಿ 2018, 10:57 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾವಭಾವಗಳು ದುರ್ಯೋಧನನ ಪಾತ್ರ ಹೋಲುತ್ತವೆ. ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿಶ್ವಿತವಾಗಿಯೂ ಕೌರವರ ಸರ್ಕಾರ, ಸಿದ್ದರಾಮಯ್ಯ ಅದರ ನೇತೃತ್ವ ವಹಿಸಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಟಕಿಯಾಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಜಿಲ್ಲಾ ವಿಶೇಷ ಸಭೆಯಲ್ಲಿ ಅವರು ಮಾತನಾಡಿದರು.

‘ವಿಧಾನಸಭೆ ಚುನಾವಣೆಯೆಂಬ ಕುರುಕ್ಷೇತ್ರ ಯುದ್ಧದಲ್ಲಿ ಕಾಂಗ್ರೆಸ್‌ನವರು ಪಾಂಡವರ ಪಕ್ಷ, ಬಿಜೆಪಿಯವರು ಕೌರವರ ಪಕ್ಷ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿನ ಕಾಂಗ್ರೆಸ್‌ ಸರ್ಕಾರದ ಆಡಳಿತದಲ್ಲಿ ಅತಿಹೆಚ್ಚು ಭ್ರಷ್ಟಾಚಾರ, ಅತ್ಯಾಚಾರ, ಹತ್ಯೆಗಳು, ಕೋಮುಗಲಭೆಗಳು ನಡೆದಿವೆ. ಹೀಗಿರುವಾಗ, ಕಾಂಗ್ರೆಸ್‌ ಪಾಂಡವರ ಪಕ್ಷವಾಗಲು ಹೇಗೆ ಸಾಧ್ಯ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು’ ಎಂದು ಸವಾಲು ಹಾಕಿದರು.

ADVERTISEMENT

‘ಪಾಂಡವರು ಇದ್ದ ಕಡೆ ಶ್ರೀಕೃಷ್ಣ ಇರುತ್ತಾನೆ. ಉಡುಪಿಯ ಶ್ರೀಕೃಷ್ಣನ ದರ್ಶನ ಮಾಡಲು ನಿಮಗೆ ಮನಸ್ಸಿಲ್ಲ. ಶ್ರೀಕೃಷ್ಣ ವಿರೋಧಿಯಂತೆ ವರ್ತನೆ ಮಾಡಿದ ನೀವು ಪಾಂಡವರಾಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.

‘ಕೃಷ್ಣ ಗೋವು ರಕ್ಷಕ. ರಾಜ್ಯದಲ್ಲಿ ಗೋವು ಹಂತಕರಿಗೆ, ಭಕ್ಷಕರಿಗೆ ರಕ್ಷಣೆ ಸಿಕ್ಕಿದೆ. ಸಾರ್ವಜನಿಕವಾಗಿ ಗೋಮಾಂಸ ಭಕ್ಷಣೆ ಮಾಡುವವರು ನಿಮ್ಮ ಖಾಸಗಿ ಒಡ್ಡೋಲಗದಲ್ಲಿ ಇದ್ದಾರೆ’ ಎಂದರು.

‘ಸರ್ಕಾರದ ಕೊನೆಗಾಲದಲ್ಲಿ ಸಿದ್ದರಾಮಯ್ಯ ಅವರ ಮನ ಪರಿವರ್ತನೆಯಾದರೆ ಸದ್ಗತಿ ದೊರಕುತ್ತದೆ. ಮತ ಪರಿವರ್ತನೆಗೆ ನಾಟಕವಾಡಿದರೆ ದುರ್ಗತಿ ತಪ್ಪಿದ್ದಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.