ADVERTISEMENT

ತಂತ್ರಜ್ಞಾನದಲ್ಲಿ ಸ್ವಾವಲಂಬನೆ: ಕಿರಣ್ ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 19:30 IST
Last Updated 23 ಜನವರಿ 2018, 19:30 IST
ಉದ್ಘಾಟನಾ ಸಮಾರಂಭದಲ್ಲಿ ಇಸ್ರೊ ನಿಕಟಪೂರ್ವ ಅಧ್ಯಕ್ಷ ಎ.ಎಸ್‌.ಕಿರಣ್ ಕುಮಾರ್‌ ಅವರನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರೂ ಇದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಇಸ್ರೊ ನಿಕಟಪೂರ್ವ ಅಧ್ಯಕ್ಷ ಎ.ಎಸ್‌.ಕಿರಣ್ ಕುಮಾರ್‌ ಅವರನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಅವರೂ ಇದ್ದಾರೆ.   

ಜಗಳೂರು (ದಾವಣಗೆರೆ ಜಿಲ್ಲೆ): ‘ಉಪಗ್ರಹ ಉಡಾವಣೆಗೆ ಬೇಕಾದ ರಾಕೆಟ್‌ ನಿರ್ಮಾಣ ತಂತ್ರಜ್ಞಾನದಲ್ಲಿ ಭಾರತ ಸ್ವಾವಲಂಬನೆ ಸಾಧಿಸಿದೆ. ನಮ್ಮ ದೇಶದಲ್ಲಿ 45 ಉಪಗ್ರಹಗಳ ಉಡಾವಣೆ ಮಾಡಲಾಗಿದೆ. ಜೊತೆಗೆ 28 ದೇಶಗಳ 237 ಉಪಗ್ರಹಗಳನ್ನು ಹಾರಿಸಲು ಸಾಧ್ಯವಾಗಿದೆ’ ಎಂದು ಇಸ್ರೊ ನಿಕಟಪೂರ್ವ ಅಧ್ಯಕ್ಷ ಎ.ಎಸ್.ಕಿರಣ್‌ ಕುಮಾರ್‌ ಹೇಳಿದರು.

ಪಟ್ಟಣದ ದಾವಣಗೆರೆ ರಸ್ತೆಯಲ್ಲಿ ಮಂಗಳವಾರ ಆರಂಭವಾದ ತರಳಬಾಳು ಹುಣ್ಣಿಮೆ ಉತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಕಳೆದ ತಿಂಗಳು ನಾಲ್ಕು ಉಪಗ್ರಹಗಳನ್ನು ಒಂದೇ ಬಾರಿಗೆ ಉಡಾವಣೆ ಮಾಡಿದಾಗ ಇಡೀ ಪ್ರಪಂಚವೇ ನಿಬ್ಬೆರಾಗಿ ಭಾರತದ ಕಡೆ ನೋಡಿತು’ ಎಂದು ಅವರು ಇಸ್ರೊ ಸಾಧನೆ ಬಣ್ಣಿಸಿದಾಗ ಸಹಸ್ರಾರು ಸಂಖ್ಯೆಯಲ್ಲಿದ್ದ ಪ್ರೇಕ್ಷಕ ಗಣ ಚಪ್ಪಾಳೆಯ ಮೆಚ್ಚುಗೆ ವ್ಯಕ್ತಪಡಿಸಿತು.

ADVERTISEMENT

‘ಬಾಹ್ಯಾಕಾಶದ ತಂತ್ರಜ್ಞಾನದ ನೆರವಿನಿಂದ ಸಂಪರ್ಕ ಸಾಧನಗಳ ಅಭಿವೃದ್ಧಿಯಾಗಿದೆ. ರೈತರು, ಮೀನುಗಾರರಿಗೆ ಮಾಹಿತಿ ನೀಡಲು ಸಾಧ್ಯವಾಗಿದೆ. ಚಂಡಮಾರುತ ಮುನ್ಸೂಚನೆಯನ್ನು ವಿಪತ್ತು ನಿರ್ವಹಣಾ ಪಡೆಗೆ ನೀಡುವ ಮೂಲಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಜನರ ಪ್ರಾಣ ಉಳಿಸಲೂ ಇಸ್ರೊ ನೆರವಾಗಿದೆ’ ಎಂದು ಅವರು ವಿವರಿಸಿದರು.

‘ಉಪಗ್ರಹ ತಂತ್ರಜ್ಞಾನದಿಂದ ಕೇರಳದ ಸಮುದ್ರ ತೀರದಿಂದ 120 ಮೈಲು ದೂರದಲ್ಲಿ ಮೊಬೈಲ್‌ನಲ್ಲಿ ತಮ್ಮದೇ ಭಾಷೆಯಲ್ಲಿ ಮಾಹಿತಿ ನೀಡಲು ಸಾಧ್ಯವಾಗಿದೆ’ ಎಂದು ಅವರು ಹೇಳಿದರು.

’ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಉಪಗ್ರಹ ಉಡಾವಣೆ ಮಾಡಿದ್ದು, ಭಾರತದ ಸಾಧನೆ’ ಎಂದು ಅವರು ಹೇಳಿದರು.
ಟೆಲಿ ಮೆಡಿಸಿನ್‌, ರೈತರಿಗೆ, ರೈಲ್ವೇಸ್‌ಗೆ ಬೇಕಾದ ಮಾಹಿತಿಯನ್ನು ನಿರಂತರವಾಗಿ ನೀಡಲು ಇಸ್ರೊ ಪ್ರಯತ್ನಿಸುತ್ತಿದೆ’ ಎಂದರು.

ತರಳಬಾಳು ಬ್ರಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಣೇಹಳ್ಳಿ ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ, ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ರಾಜ್ಯಸಭೆ ಮಾಜಿ ಸದಸ್ಯ ಕೆ.ಆರ್‌.ಜಯದೇವಪ್ಪ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.