ADVERTISEMENT

5673 ಗ್ರಾಮಗಳಲ್ಲಿ ವ್ಯಕ್ತಿಗೆ 12 ಲೀಟರ್‌ ನೀರು!

ವಿಧಾನ ಮಂಡಲದಲ್ಲಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ಬೆಂಗಳೂರು: ‘ರಾಜ್ಯದ 5,673 ಗ್ರಾಮಗಳಲ್ಲಿ ಪ್ರತಿ ವ್ಯಕ್ತಿಗೆ ಪ್ರತಿದಿನ 12 ಲೀಟರ್ ನೀರು ಒದಗಿಸಲಾಗುತ್ತಿದೆ’ ಎಂದು ಪಂಚಾಯತ್‌ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್‌ ಬಹಿರಂಗಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಗುರುವಾರ ನಡೆದ ಪಂಚಾಯತ್‌ರಾಜ್‌ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಕುರಿತ ಚರ್ಚೆಗೆ ಉತ್ತರ ನೀಡಿ, ‘ಗ್ರಾಮೀಣ ಜನರಿಗೆ ಸಾಕಷ್ಟು ನೀರು ಸಿಗುತ್ತಿಲ್ಲ. ಇದು ರಾಜ್ಯದ ನೈಜ ಸ್ಥಿತಿ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಷ್ಟ್ರೀಯ ಮಾನದಂಡದ ಪ್ರಕಾರ ನಗರ ಪ್ರದೇಶದ ಪ್ರತಿ ವ್ಯಕ್ತಿಗೆ ಪ್ರತಿದಿನ135 ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಜನರಿಗೆ ಈ ಹಿಂದೆ 40 ಲೀಟರ್‌ ನೀರು ಒದಗಿಸಲು ತೀರ್ಮಾನಿಸಲಾಗಿತ್ತು. ಕಳೆದ ವರ್ಷ ಅದನ್ನು 55 ಲೀಟರ್‌ಗೆ ಏರಿಸಲಾಗಿತ್ತು. ಪ್ರತಿ ವ್ಯಕ್ತಿಗೆ ದಿನಕ್ಕೆ 85ಲೀಟರ್‌ ಸಿಗಬೇಕು ಎಂಬುದು ನಮ್ಮ ಉದ್ದೇಶ’ ಎಂದು ಹೇಳಿದರು. ‘ರಾಜ್ಯದ ಎಲ್ಲ ಗ್ರಾಮಗಳ ಜನರಿಗೆ ನದಿ ನೀರು ಒದಗಿಸಲು ರೂ45 ಸಾವಿರ ಕೋಟಿ ಅಗತ್ಯ ಇದೆ. ಇದಕ್ಕೆ ರೂ15 ಸಾವಿರ ಕೋಟಿ ಅನುದಾನ ನೀಡುವಂತೆ ಪ್ರಧಾನಿ ಅವರಿಗೆ ಮುಖ್ಯಮಂತ್ರಿ ಪತ್ರ ಬರೆದಿದ್ದಾರೆ’ ಎಂದರು.

ರೂ360 ಕೋಟಿ ಖಾತೆಯಲ್ಲಿ ಇಲ್ಲ: ‘ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ರೂ132 ಕೋಟಿ ನಾಪತ್ತೆಯಾಗಿರುವ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಶ್ರೀಧರ್‌ ನೇತೃತ್ವದ ನಾಲ್ವರ ಸಮಿತಿ ಮೂರು ಮಧ್ಯಂತರ ವರದಿಗಳನ್ನು ನೀಡಿದೆ. ರೂ362 ಕೋಟಿ ಬ್ಯಾಂಕ್‌ ಖಾತೆಯಲ್ಲೇ ಇಲ್ಲ ಎಂಬುದನ್ನು ಪತ್ತೆ ಹಚ್ಚಿದೆ. ರೂ1,104 ಕೋಟಿ ಮುಖ್ಯ ವಾಹಿನಿಯಿಂದ ಬ್ಯಾಂಕ್‌ ಖಾತೆಗಳಿಗೆ ಹೋಗಿದೆ’ ಎಂದರು. 30 ಸಾವಿರ ಸಿಬ್ಬಂದಿ ಕಾಯಂ: ‘ಇಲಾಖೆಯಲ್ಲಿ 600 ಎಂಜಿನಿಯರ್‌ಗಳ ನೇಮಕ ಮಾಡಲಾಗಿದೆ. 30 ಸಾವಿರ ಸಿಬ್ಬಂದಿಯ ಕಾಯಂ ಮಾಡಲಾಗಿದೆ. ಇನ್ನೂ 15 ಸಾವಿರ ಸಿಬ್ಬಂದಿಯ ಕಾಯಂ ಆಗಬೇಕಿದೆ.  ಏಳೆಂಟು ವರ್ಷ ಸೇವೆ ಸಲ್ಲಿಸಿದ ಅರ್ಹರ ಸೇವೆ ಕಾಯಂಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

‘ಸಾವಿರ ಗ್ರಾಮಗಳಲ್ಲಿ ಗ್ರಾಮ ವಿಕಾಸ ಯೋಜನೆ ಆರಂಭಿಸಲಾಗುವುದು. ಪ್ರತಿ ಶಾಸಕರು ಐದು ಗ್ರಾಮಗಳ ಆಯ್ಕೆ ಮಾಡಬಹುದು. ಇದಕ್ಕೆ ರೂ75 ಲಕ್ಷ ಅನುದಾನ ನೀಡಲಾಗುವುದು’ ಎಂದರು. ‘ವಿಧಾನ ಪರಿಷತ್‌ ಸದಸ್ಯರಿಗೂ ಕನಿಷ್ಠ 2 ಗ್ರಾಮಗಳ ಆಯ್ಕೆ ಅಧಿಕಾರ ನೀಡಬೇಕು’ ಎಂದು ಸದಸ್ಯರಾದ ಕೆ.ಎಸ್‌. ಈಶ್ವರಪ್ಪ, ಮರಿತಿಬ್ಬೇಗೌಡ, ವಿ.ಎಸ್‌. ಉಗ್ರಪ್ಪ ಮತ್ತಿತರರು ಮನವಿ ಮಾಡಿದರು. ‘ಈ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.