ADVERTISEMENT

ಪ್ರಾಣಿಗಳ ತಡೆಗೆ ಎಲ್‌ಇಡಿ ಬಲ್ಬ್‌!

ಮಲೆಮಹದೇಶ್ವರ ವನ್ಯಧಾಮದಲ್ಲಿ ಪ್ರಯೋಗಕ್ಕೆ ಮುಂದಾದ ಅರಣ್ಯ ಇಲಾಖೆ

ಬಿ.ಬಸವರಾಜು
Published 22 ಆಗಸ್ಟ್ 2018, 19:30 IST
Last Updated 22 ಆಗಸ್ಟ್ 2018, 19:30 IST
ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯದ ವಲಯದಲ್ಲಿ ಎಲ್‌ಇಡಿ ಯೋಜನೆ ಜಾರಿಗೊಳಿಸಲು ಅರಣ್ಯ ಇಲಾಖೆ ಗುರುತಿಸಿರುವ ಸ್ಥಳ
ಮಲೆಮಹದೇಶ್ವರ ವನ್ಯಧಾಮದ ಪಿ.ಜಿ.ಪಾಳ್ಯದ ವಲಯದಲ್ಲಿ ಎಲ್‌ಇಡಿ ಯೋಜನೆ ಜಾರಿಗೊಳಿಸಲು ಅರಣ್ಯ ಇಲಾಖೆ ಗುರುತಿಸಿರುವ ಸ್ಥಳ   

ಹನೂರು: ನೀರು ಆಹಾರ ಅರಸಿ ಮಲೆಮಹದೇಶ್ವರ ವನ್ಯಧಾಮದ ಅಂಚಿನಲ್ಲಿರುವಜಮೀನುಗಳಿಗೆ ನುಗ್ಗುವ ವನ್ಯಪ್ರಾಣಿಗಳನ್ನು ತಡೆಯಲು ಅರಣ್ಯ ಇಲಾಖೆ ವಿಶಿಷ್ಟ ಯೋಜನೆಯನ್ನು ರೂಪಿಸಿದೆ.

ಆನೆಗಳು ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವ ಕಾಡಂಚಿನ ಪ್ರದೇಶಗಳಲ್ಲಿ ವಿವಿಧ ಬಣ್ಣಗಳಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸುವ ಯೋಜನೆ ಇದಾಗಿದ್ದು, ಪ್ರಾಯೋಗಿಕವಾಗಿ ಪಿ.ಜಿ.ಪಾಳ್ಯದ ವನ್ಯಜೀವಿ ವಲಯದಲ್ಲಿ ಜಾರಿಗೆ ತರಲು ಇಲಾಖೆ ಸಿದ್ಧತೆ ನಡೆಸಿದೆ.

ಈ ವನ್ಯಜೀವಿ ವಲಯವು ದಟ್ಟ ಅರಣ್ಯದಿಂದ ಕೂಡಿದ್ದು ಹುಲಿ, ಆನೆಗಳ ಪ್ರಮುಖ ಆವಾಸ ಸ್ಥಾನವಾಗಿದೆ. ಪಶ್ಚಿಮಕ್ಕೆ ಬಿಳಿಗಿರಿರಂಗನಬೆಟ್ಟ ಹುಲಿ ರಕ್ಷಿತಾರಣ್ಯ, ದಕ್ಷಿಣಕ್ಕೆ ತಮಿಳುನಾಡಿನ ಸತ್ಯಮಂಗಲ ಹುಲಿರಕ್ಷಿತಾರಣ್ಯವಿದೆ. ಎರಡು ಹುಲಿ ರಕ್ಷಿತಾರಣ್ಯಗಳ ನಡುವೆ ಇರುವ ಈ ವಲಯ ಆನೆಗಳ ಕಾರಿಡಾರ್ ಎಂದೇ ಖ್ಯಾತಿ ಹೊಂದಿದೆ.

ADVERTISEMENT

ನೀರು ಮತ್ತು ಆಹಾರದ ಕೊರತೆಯಿಂದಾಗಿ ಕಾಡಾನೆಗಳು ಆಗಿಂದಾಗ್ಗೆ ರೈತರ ಜಮೀನುಗಳಿಗೆ ನುಗ್ಗಿ ಬೆಳೆದ ಫಸಲು ತಿಂದು, ತುಳಿದು ನಾಶಮಾಡುತ್ತಿರುತ್ತವೆ. ಅರಣ್ಯದಂಚಿನಲ್ಲಿರುವ ಕಂದಕ ಹಾಗೂ ಸೋಲಾರ್‌ ಬೇಲಿಯನ್ನು ದಾಟಿ ಬರುವ ಕಾಡಾನೆಗಳು, ಜಮೀನಿನಲ್ಲಿ ಕಾವಲು ಕಾಯುತ್ತಿದ್ದ ರೈತರ ಮೇಲೆ ದಾಳಿ ಮಾಡಿರುವ ಪ್ರಕರಣಗಳೂ ಜರುಗಿವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಪ್ರಾಯೋಗಿಕ ಯೋಜನೆಗೆ ಅರಣ್ಯ ಅಧಿಕಾರಿಗಳು ಮುಂದಾಗಿದ್ದಾರೆ.

ಕಡಿಮೆ ವೆಚ್ಚ:ಆನೆ ಕಂದಕ, ಸೋಲಾರ್‌ ಬೇಲಿನಿಮಾರ್ಣಕ್ಕೆ ತಗುಲುವ ವೆಚ್ಚಕ್ಕೆ ಹೋಲಿಸಿದರೆ ಈ ಯೋಜನೆಯನ್ನು ಕಡಿಮೆ ಖರ್ಚಿನಲ್ಲಿ ಅನುಷ್ಠಾನಕ್ಕೆ ತರಬಹುದು. ಅಲ್ಲದೇ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು ಎನ್ನುತ್ತಾರೆ ಅಧಿಕಾರಿಗಳು.

ಅನುಷ್ಠಾನ ಹೇಗೆ?: ಆರಂಭದಲ್ಲಿ ಪಿ.ಜಿ.ಪಾಳ್ಯ ವನ್ಯಜೀವಿ ವಲಯದಲ್ಲಿ ಕಲ್ಲಿನ ಕ್ವಾರಿಯಲ್ಲಿ ಸೋಲಾರ್‌ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗುತ್ತದೆ. ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಿ ಒಂದು ತಿಂಗಳ ಕಾಲ ಪ್ರಾಣಿಗಳ ಚಲನವಲನಗಳನ್ನು ಪರಿಶೀಲಿಸಲಾಗುತ್ತದೆ.

‌ಎಲ್‌ಇಡಿ ಬಲ್ಬ್‌ ಬೆಳಕಿನಿಂದ ವನ್ಯಪ್ರಾಣಿಗಳ ವರ್ತನೆಯಲ್ಲಿ ಬದಲಾವಣೆ ಕಂಡು ಬಂದರೆ, ಅದರಲ್ಲೂ ಅವು ಬೆಳಕಿನತ್ತ ಬರಲು ಹಿಂದೇಟು ಹಾಕುವುದು ಖಚಿತವಾದರೆ ಈ ಯೋಜನೆಯನ್ನು ಹನೂರು, ರಾಮಾಪುರ ಹಾಗೂ ಹೂಗ್ಯಂ ವಲಯಗಳಿಗೂ ವಿಸ್ತರಿಸಲು ಇಲಾಖೆ ಚಿಂತನೆ ನಡೆಸಿದೆ.

ಇದೊಂದು ವಿನೂತನ ಪ್ರಯೋಗ. ಯಶಸ್ವಿಯಾದರೆಅರಣ್ಯ ಇಲಾಖೆ ಹಾಗೂ ರೈತರ ನಡುವಣ ಸಂಘರ್ಷ ಗಣನೀಯವಾಗಿ ಕಡಿಮೆಯಾಗಲಿದೆ ಎಂಬ ವಿಶ್ವಾಸವನ್ನು ಅರಣ್ಯ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಏನಿದು ಯೋಜನೆ?

ವನ್ಯಪ್ರಾಣಿಗಳು ನುಗ್ಗುವ ಸ್ಥಳವನ್ನು ಗುರುತಿಸಿ ಅಲ್ಲಿ ಸೋಲಾರ್‌ ಸಹಾಯದಿಂದ 8 ವಿವಿಧ ಬಣ್ಣದ ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸ ಲಾಗುತ್ತದೆ. ಇವುಗಳನ್ನು ರಾತ್ರಿ ಹೊತ್ತಿನಲ್ಲಿ ಉರಿಸಲಾಗುತ್ತದೆ. ಬಲ್ಬ್‌ಗಳು ಕ್ಷಣ ಕ್ಷಣಕ್ಕೂ ಬಣ್ಣ ಬದಲಾಯಿಸುವುದರಿಂದ ಪ್ರಾಣಿಗಳು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತವೆ. ಪ್ರಕಾಶಮಾನ ಬೆಳಕನ್ನು ಕಂಡುಅಲ್ಲಿ ಮನುಷ್ಯರಿರಬಹುದು ಅಥವಾ ಬೆಂಕಿಯಿರಬಹುದು ಎಂಬ ಭಾವನೆ ಪ್ರಾಣಿಗಳಲ್ಲಿ ಮೂಡುತ್ತದೆ. ಹಾಗಾಗಿ, ಎಲ್‌ಇಡಿ ಬಲ್ಬ್‌ ಇರುವ ಕಡೆ ಅವುಗಳು ಬರುವುದಿಲ್ಲ ಎಂಬುದು ಅರಣ್ಯಾಧಿಕಾರಿಗಳ ಅಭಿಪ್ರಾಯ.

***

ಪ್ರಾಣಿಗಳು ಜಮೀನುಗಳಿಗೆ ನುಗ್ಗುವುದನ್ನು ತಪ್ಪಿಸಲು ಯೋಜನೆ ರೂಪಿಸಲಾಗಿದೆ. ರೈತರು ಇದಕ್ಕೆ ಸಹಕರಿಸಿದರೆ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.
ಏಡುಕುಂಡಲ, ಉಪ ಅರಣ್ಯ ಸಂರಕ್ಷಣಾ ಧಿಕಾರಿ, ಮಲೆಮಹದೇಶ್ವರ ವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.