ADVERTISEMENT

ಲೋಕಾಯುಕ್ತ ಕಚೇರಿ ಪ್ರವೇಶಕ್ಕೆ ಪಾಸ್‌ ಕಡ್ಡಾಯ

ಕಚೇರಿ ಮುಖ್ಯದ್ವಾರದಲ್ಲಿ ಲೋಹಶೋಧಕ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:44 IST
Last Updated 6 ಜುಲೈ 2018, 19:44 IST
   

ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಸಾರ್ವಜನಿಕರ ಪ್ರವೇಶಕ್ಕೆ ಶುಕ್ರವಾರದಿಂದ ಕಡ್ಡಾಯವಾಗಿ ಪಾಸ್‌ ವ್ಯವಸ್ಥೆ ಜಾರಿಗೆ ತರಲಾಗಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ನಡೆಸಿದ ಬಳಿಕ ಲೋಕಾಯುಕ್ತ ಸಂಸ್ಥೆಯ ಭದ್ರತೆಯನ್ನು ಹಂತಹಂತವಾಗಿ ಬಿಗಿಗೊಳಿಸ ಲಾಗುತ್ತಿದೆ. ಮೊದಲು ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸಿ, ತಮ್ಮ ದೂರುದುಮ್ಮಾನಗಳನ್ನು ಸಲ್ಲಿಸಬಹುದಿತ್ತು.

ಆದರೆ, ಈ ಘಟನೆ ಬಳಿಕ ಮುಖ್ಯದ್ವಾರದಲ್ಲಿ ಲೋಹಶೋಧಕ ಗಳನ್ನು ಅಳವಡಿಸಲಾಗಿದೆ. ಕಚೇರಿಗೆ ಬರುವ ವ್ಯಕ್ತಿಗಳನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಇಡೀ ಕಚೇರಿಗೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಮೊದಲ ಮಹಡಿಯಲ್ಲಿರುವ ಲೋಕಾಯುಕ್ತರ ಕಚೇರಿ ದ್ವಾರದಲ್ಲೂ ಲೋಹ ಶೋಧಕ ಚೌಕಟ್ಟನ್ನು ಅಳವಡಿಸಲಾಗಿದೆ.

ADVERTISEMENT

ಇದುವರೆಗೆ ಲೋಕಾಯುಕ್ತ ಸಂಸ್ಥೆಗೆ ಬರುವವರ ಹೆಸರು, ವಿಳಾಸ, ಮೊಬೈಲ್‌ ನಂಬರ್‌, ಯಾರನ್ನು ನೋಡಬೇಕು, ಉದ್ದೇಶ ಹಾಗೂ ಸಮಯವನ್ನು ಸಂದರ್ಶಕರ ಪುಸ್ತಕದಲ್ಲಿ ಬರೆದುಕೊಂಡು, ಸಹಿ ಪಡೆದು ಒಳಗೆ ಬಿಡಲಾಗುತ್ತಿತ್ತು.

ಈಗ ಸ್ಥಳದಲ್ಲೇ ಪಾಸ್‌ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಸಂದರ್ಶಕರ ಭಾವಚಿತ್ರ ಇರುವ ಪಾಸ್‌ಗಳನ್ನು ಕಂಪ್ಯೂಟರ್‌ನಲ್ಲಿ ತೆಗೆದು ಕೊಡಲಾಗುತ್ತಿದೆ.

ಅಧಿಕಾರಿಗಳನ್ನು ಭೇಟಿ ಮಾಡಿ ಹಿಂತಿರುಗುವಾಗ ಪಾಸ್‌ಗಳನ್ನು ಮತ್ತೆ ಸ್ವಾಗತಕಾರರಿಗೆ ಹಿಂತಿರುಗಿಸಬೇಕು. ಮಾನ್ಯತೆ ಪಡೆದ ಪತ್ರಕರ್ತರೂ ಪಾಸ್‌ ಪಡೆದೇ ಹೋಗಬೇಕು ಎಂದು ಕಡ್ಡಾಯ ಮಾಡಲಾಗಿದೆ.

ನ್ಯಾಯಮೂರ್ತಿ ಶೆಟ್ಟಿ ಅವರನ್ನು ಕಳೆದ ಮಾರ್ಚ್‌ನಲ್ಲಿ ತುಮಕೂರಿನ ಗುತ್ತಿಗೆದಾರ ತೇಜ್‌ರಾಜ್‌ ಮೂರು ಸಲ ಚಾಕುವಿನಿಂದ ಇರಿದಿದ್ದ.

ಹಲವು ದಿನಗಳ ವಿಶ್ರಾಂತಿ ಬಳಿಕ ಲೋಕಾಯುಕ್ತರು ಕರ್ತವ್ಯಕ್ಕೆ ಮರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.