ADVERTISEMENT

‘ಅವರವರ ಭಾವಕ್ಕೆ’ ಪುಸ್ತಕ ಬಿಡುಗಡೆ

ಪ್ರಕಾಶ್‌ ರೈ ಅವರ ಅಂಕಣ ಬರಹಗಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 19:50 IST
Last Updated 7 ಅಕ್ಟೋಬರ್ 2018, 19:50 IST
ಕಾರ್ಯಕ್ರಮದಲ್ಲಿ ಪುಸ್ತಕದ ಪ್ರತಿಯನ್ನು ಸಾಹಿತಿ ದೇವನೂರ ಮಹಾದೇವ ಅವರಿಗೆ ನೀಡಲಾಯಿತು. (ಎಡದಿಂದ) ಕೆ.ಆರ್‌.ಸುಮತಿ, ಮಂಡ್ಯ ರಮೇಶ್, ಓ.ಎಲ್.ನಾಗಭೂಷಣ ಸ್ವಾಮಿ, ಪ್ರಕಾಶ್‌ ರೈ, ರವೀಂದ್ರ ಭಟ್ಟ, ಸಿ.ನಾಗಣ್ಣ ಇದ್ದಾರೆ
ಕಾರ್ಯಕ್ರಮದಲ್ಲಿ ಪುಸ್ತಕದ ಪ್ರತಿಯನ್ನು ಸಾಹಿತಿ ದೇವನೂರ ಮಹಾದೇವ ಅವರಿಗೆ ನೀಡಲಾಯಿತು. (ಎಡದಿಂದ) ಕೆ.ಆರ್‌.ಸುಮತಿ, ಮಂಡ್ಯ ರಮೇಶ್, ಓ.ಎಲ್.ನಾಗಭೂಷಣ ಸ್ವಾಮಿ, ಪ್ರಕಾಶ್‌ ರೈ, ರವೀಂದ್ರ ಭಟ್ಟ, ಸಿ.ನಾಗಣ್ಣ ಇದ್ದಾರೆ   

ಮೈಸೂರು: ನಟ ಪ್ರಕಾಶ್ ರೈ ಅವರು ‘ಪ್ರಜಾವಾಣಿ’ಯಲ್ಲಿ ಬರೆಯುವ ಅಂಕಣ ಬರಹಗಳ ಸಂಗ್ರಹ ‘ಅವರವರ ಭಾವಕ್ಕೆ’ ಪುಸ್ತಕವನ್ನು ಜನಮನ ಮತ್ತು ನೆಲೆಹಿನ್ನೆಲೆ ಸಂಸ್ಥೆ ವತಿಯಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಅವರು ಪುಸ್ತಕದ ಮೊದಲ ಪ್ರತಿಯನ್ನು ಸಾಹಿತಿ ದೇವನೂರ ಮಹಾದೇವ ಅವರಿಗೆ ಹಸ್ತಾಂತರಿಸಿದರು.

ಪ್ರಕಾಶ್‌ ರೈ ಮಾತನಾಡಿ, ‘ನಾನು ಬರೆಯಬಲ್ಲೆ ಎಂಬ ಭ್ರಮೆ ಇರಲಿಲ್ಲ. ನಿಷ್ಠುರವಾಗಿ ಬದುಕುವುದು ನನಗೆ ಇಷ್ಟ. ಒಲ್ಲದ ಮನಸ್ಸಿನಿಂದಲೇ ಬರೆಯಲು ಶುರು ಮಾಡಿದೆ. ಅಂಕಣಗಳು ಎಷ್ಟರಮಟ್ಟಿಗೆ ಓದುಗರನ್ನು ತಲುಪಿದೆ ಎಂಬುದಕ್ಕಿಂತ ಮುಖ್ಯವಾಗಿ ಈ ಬರವಣಿಗೆಯ ಕೆಲಸ ನನ್ನೊಳಗೆ ಮಾಡಿರುವ ಬದಲಾವಣೆ ತುಂಬಾ ಅದ್ಭುತವಾದುದು’ ಎಂದರು.

ADVERTISEMENT

‘ಬರವಣಿಯಿಂದಾಗಿ ನನಗೆ ಯಾವುದೋ ಸಂಕೋಲೆಯಿಂದ ಹೊರಬಂದ ಅನುಭವ ಉಂಟಾಗುತ್ತಿದೆ. ಇದು ನನ್ನ ಏಕಾಂತದ ಬರವಣೆಗೆಯಾದರೂ ಸ್ವಾರ್ಥಿಯಾಗಿಯೇ ಬರೆದಿದ್ದೇನೆ. ನಾನು ನನ್ನೊಡನೆ ಆಡುತ್ತಿದ್ದ ಮಾತುಗಳನ್ನು ಈ ಅಂಕಣಗಳ ಮೂಲಕ ಸ್ವಲ್ಪ ಗಟ್ಟಿಯಾಗಿ ಆಡಿದ್ದೇನೆ ಅಷ್ಟೆ’ ಎಂದು ಹೇಳಿದರು.

ಓ.ಎಲ್‌.ನಾಗಭೂಷಣ ಸ್ವಾಮಿ ಮಾತನಾಡಿ, ‘ಪ್ರಕಾಶ್‌ ರೈ ಅವರು ಬದುಕಿನ ಬೇರೆ ಬೇರೆ ಮುಖಗಳನ್ನು ಯಾವ ರೀತಿಯಲ್ಲಿ ನೋಡಿದ್ದಾರೆ ಎಂಬ ಕುತೂಹಲವು ಪುಸ್ತಕವನ್ನು ಓದುವಂತೆ ಪ್ರೇರೇಪಿಸುತ್ತದೆ’ ಎಂದು ಹೇಳಿದರು.

‘ನಾವು ಪ್ರಕಾಶ್‌ ಬಗ್ಗೆ ಕಟ್ಟಿಕೊಂಡಿರುವ ಕಲ್ಪನೆ ಏನಿದೆಯೋ ಅದಕ್ಕಿಂತ ಭಿನ್ನವಾದ ಪ್ರಕಾಶ್‌ ಈ ಪುಸ್ತಕದಲ್ಲಿ ಕಾಣಿಸುತ್ತಾರೆ. ಇದರಲ್ಲಿ ಸ್ವಲ್ಪ ಆತ್ಮಕತೆ, ಸಾಮಾಜಿಕ ಚಿಂತನೆ, ನೆನಪುಗಳು ಇವೆ. ಅಂಕಣಗಳ ಸಂಗ್ರಹ ಇದಾಗಿರುವುದರಿಂದ ಮಿಶ್ರ ಜಾತಿಯ ಬರಹವನ್ನು ಕಾಣಬಹುದು. ಒಬ್ಬ ಕವಿಯ ಹಾಗೆ ಲೋಕವನ್ನು ಕಾಣುವ ಕಣ್ಣು ಅವರಲ್ಲಿದೆ’ ಎಂದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮಾತನಾಡಿ, ‘ಪ್ರಕಾಶ್‌ ಅವರ ಎಲ್ಲ ಅಂಕಣಗಳು ನಾವು ಮನುಷ್ಯರಾಗುವುದು ಹೇಗೆ ಎಂಬುದನ್ನು ಕಲಿಸಿಕೊಡುತ್ತದೆ’ ಎಂದು ಹೇಳಿದರು. ರಂಗಕರ್ಮಿಗಳಾದ ಮಂಡ್ಯ ರಮೇಶ್, ಕೆ.ಆರ್‌.ಸುಮತಿ, ಲೇಖಕ ಸಿ. ನಾಗಣ್ಣ, ಸಾವಣ್ಣ ಪ್ರಕಾಶನದ ಜಮೀಲ್‌ ಪಾಲ್ಗೊಂಡಿದ್ದರು.

* ಪ್ರಕಾಶ್‌ ರೈ ಅವರು ಆಲೋಚನೆಯಿಂದ ಬದುಕನ್ನು ನೋಡುವುದಿಲ್ಲ. ಹೃದಯದಾಳದಿಂದ ನೋಡುತ್ತಾರೆ. ಅದು ಬಲುದೊಡ್ಡ ಗುಣ.

-ದೇವನೂರ ಮಹಾದೇವ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.