ADVERTISEMENT

ಕರಾವಳಿ ಜಿಲ್ಲೆಗಳಲ್ಲೂ ಸನ್ನದ್ಧತೆ ಅಗತ್ಯ: ಹವಾಮಾನ ತಜ್ಞರ ಸಲಹೆ

ಉಡುಪಿ ಜಿಲ್ಲೆಯಲ್ಲಿ ಮಳೆ; ದೇಶದಲ್ಲೇ ನಂ1, ಇಡುಕ್ಕಿ ನಂ2

ಎಸ್.ರವಿಪ್ರಕಾಶ್
Published 22 ಆಗಸ್ಟ್ 2018, 19:36 IST
Last Updated 22 ಆಗಸ್ಟ್ 2018, 19:36 IST
ಕರಾವಳಿ
ಕರಾವಳಿ   

ಬೆಂಗಳೂರು: ಭಾರಿ ಮಳೆ, ಪ್ರವಾಹದಿಂದ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳು, ಕೇರಳದ 13 ಜಿಲ್ಲೆಗಳಲ್ಲಿ ಭೀಕರ ಅನಾಹುತ ಸಂಭವಿಸಿದೆ. ಆದರೆ, ಉಡುಪಿ ಜಿಲ್ಲೆಯಲ್ಲಿ ಈ ಅವಧಿಯಲ್ಲಿ ದೇಶದಲ್ಲೇ ಅತಿ ಹೆಚ್ಚು ಮಳೆ ಆಗಿದ್ದರೂ ಅನಾಹುತಗಳು ಆಗಿಲ್ಲ.

ಆದರೆ, ಈ ಪ್ರಮಾಣದ ಮಳೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿರುವ ನಗರ– ಪಟ್ಟಣಗಳಿಗೆ ಎಚ್ಚರಿಕೆ ಗಂಟೆಯೂ ಹೌದು. ಭವಿಷ್ಯದಲ್ಲಿ ಸಂಭವಿಸಬಹುದಾದ ಗಂಡಾಂತರ ಎದುರಿಸಲು ಈಗಲೇ ಸಜ್ಜಾಗಬೇಕೆಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮೇ ಕೊನೆಯಲ್ಲಿ ಕೇರಳ ಮೂಲಕ ಮುಂಗಾರು ಪ್ರವೇಶಿಸಿತು. ಜೂನ್‌1 ರಿಂದ ಆಗಸ್ಟ್‌ 20 ರವರೆಗೆ ಅಂದರೆ ಸುಮಾರು 81 ದಿನಗಳಲ್ಲಿ ಅತಿ ಹೆಚ್ಚು ಮಳೆ ಸುರಿದಿರುವುದೇ ಉಡುಪಿ ಜಿಲ್ಲೆಯಲ್ಲಿ. ಕೇರಳದ ಇಡುಕ್ಕಿ ಜಿಲ್ಲೆ ಎರಡನೇ ಸ್ಥಾನದಲ್ಲಿದೆ.

ADVERTISEMENT

ಕೇರಳದಲ್ಲಿ ಮಹಾಪ್ರವಾಹದ ಕೇಂದ್ರ ಬಿಂದು ಇಡುಕ್ಕಿ. ಈ ಜಿಲ್ಲೆಯಲ್ಲಿ 81 ದಿನಗಳ ಅವಧಿಯಲ್ಲಿ 3,521 ಮಿ.ಮೀ ಮಳೆಯಾಗಿದೆ. ಇಲ್ಲಿ ವಾಡಿಕೆಗಿಂತ ಶೇ 93 ರಷ್ಟು ಅಧಿಕ ಮಳೆ ಬಿದ್ದಿದೆ. ಪ್ರವಾಹದಿಂದಾಗಿ 51 ಮಂದಿ ಜೀವ ಕಳೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯಲ್ಲಿಇಡುಕ್ಕಿಗಿಂತ ಹೆಚ್ಚು ಮಳೆ (3,663 ಮಿ.ಮೀ) ಸುರಿದರೂ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಉಡುಪಿಯಲ್ಲಿ ವಾಡಿಕೆಗಿಂತ (3,108 ಮಿ.ಮೀ) ಶೇ 18 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ, ಆಗಸ್ಟ್‌ 9 ರಿಂದ 15 ರವರೆಗೆ 640 ಮಿ.ಮೀ ಮಳೆ ಸುರಿದಿದೆ. ವಾಡಿಕೆಗಿಂತ ಶೇ 167 ರಷ್ಟು ಅಧಿಕ.

ಮಳೆ ಮತ್ತು ಭೂಕುಸಿತದಿಂದ ಭಾರಿ ಹಾನಿಗೀಡಾಗಿರುವ ಕೊಡಗು ಜಿಲ್ಲೆಯಲ್ಲಿ ಆ.9 ರಿಂದ 15 ರ ಅವಧಿಯಲ್ಲಿ 508.2 ಮಿ.ಮೀ ಮಳೆಯಾಗಿತ್ತು. ಇದು 64 ವರ್ಷಗಳಲ್ಲೇ ಅಧಿಕ, ವಾಡಿಕೆಗಿಂತ (ಆ.9 ರಿಂದ 15ರವರೆಗೆ) ಶೇ 290 ರಷ್ಟು ಹೆಚ್ಚು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ 465 ಮಿ.ಮೀ ಮಳೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರವಾಹ ಬಂದಿದ್ದರೂ ರಾಜ್ಯದ ಮುಂಗಾರು ಅವಧಿಯಲ್ಲಿ 634 ಮಿ.ಮೀ ಮಳೆಯಾಗಿದೆ. ಇದು ವಾಡಿಕೆಯ 615 ಮಿ.ಮೀ.ಗಿಂತ ಶೇ 3 ರಷ್ಟು ಹೆಚ್ಚು. ಇದು ದೇಶದ ಸರಾಸರಿಗಿಂತ ಶೇ 9 ಹೆಚ್ಚು.

ಮುಂಗಾರು ಮಳೆ ತಾರಕಕ್ಕೇರುವುದು ಜುಲೈ ಮತ್ತು ಆಗಸ್ಟ್‌ನಲ್ಲಿ. ಆದರೆ, 1951 ರ ಬಳಿಕ ಮಳೆಯ ಪ್ರಮಾಣ ಕಡಿಮೆ ಆಗುತ್ತಲೇ ಬಂದಿದೆ. 1951ರ ಬಳಿಕ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ಪ್ರವಾಹವೂ ಅಪರೂಪ ಎನಿಸಿತು. ಈ ವರ್ಷ ಆಗಸ್ಟ್‌ ಮಳೆಯಿಂದಾಗಿ ಅಂತರ್ಜಲ ಮಟ್ಟ 4 ಮೀಟರ್‌ಗಳಿಗೂ ಅಧಿಕವಾಗಿದೆ. ರಾಜ್ಯದ ಉಳಿದ ಭಾಗದಲ್ಲಿ 3 ವರ್ಷ ಬರ ಇದ್ದ ಪರಿಣಾಮ ಅಂತರ್ಜಲ ಹೆಚ್ಚಾಗಿಲ್ಲ ಎಂದೂ ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.