ADVERTISEMENT

ಸಹಬಾಳ್ವೆಗೆ ಭಾರತ ಉತ್ತಮ ಉದಾಹರಣೆ

‘ಪ್ರಜಾವಾಣಿ’ ಕಚೇರಿಗೆ ಶ್ರೀಲಂಕಾ ಯುವಜನರ ನಿಯೋಗ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 13:19 IST
Last Updated 7 ಜುಲೈ 2018, 13:19 IST
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಶ್ರೀಲಂಕಾದ ವಿದ್ಯಾರ್ಥಿಗಳು ಶನಿವಾರ ಪ್ರಜಾವಾಣಿ ಕಚೇರಿಗೆ ಭೇಟಿ ನೀಡಿದ್ದರು.
ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಅಂಗವಾಗಿ ಕರ್ನಾಟಕಕ್ಕೆ ಆಗಮಿಸಿದ್ದ ಶ್ರೀಲಂಕಾದ ವಿದ್ಯಾರ್ಥಿಗಳು ಶನಿವಾರ ಪ್ರಜಾವಾಣಿ ಕಚೇರಿಗೆ ಭೇಟಿ ನೀಡಿದ್ದರು.   

ಬೆಂಗಳೂರು: ‘ಮೈಸೂರು ಅರಮನೆ ನೋಡಿ ಖುಷಿಯಾಯಿತು. ಬೃಂದಾವನದ ಸಂಗೀತ ಕಾರಂಜಿ ಕಣ್ಣಿಗೆ ಹಬ್ಬ...’

– ಸಾಂಸ್ಕೃತಿಕ ವಿನಿಮಯ ಯೋಜನೆಯಡಿ ಭಾರತಕ್ಕೆ ಭೇಟಿ ನೀಡಿದ್ದ ಶ್ರೀಲಂಕಾ ನಿಯೋಗದಲ್ಲಿದ್ದ ಯುವಜನರ ಪ್ರತಿಕ್ರಿಯೆ ಇದು.

ಬೆಂಗಳೂರಿನಲ್ಲಿ ವಿವಿಧ ಸ್ಥಳಗಳನ್ನು ನೋಡಿದ ಈ ತಂಡ ‘ಪ್ರಜಾವಾಣಿ’ ಕಚೇರಿಗೂ ಭೇಟಿ ನೀಡಿ ಸಂಪಾದಕೀಯ ಸಿಬ್ಬಂದಿಯೊಂದಿಗೆ ಸ್ಥಳೀಯ ಸಂಸ್ಕೃತಿ, ಬೆಳೆ ಪದ್ಧತಿ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿಚಾರ ವಿನಿಮಯ ನಡೆಸಿತು.

ADVERTISEMENT

ತಂಡದಲ್ಲಿದ್ದ ಸುರೇಶ್ ಮಾತನಾಡಿ, ‘ಬೆಂಗಳೂರಿನಲ್ಲಿ ಲಾಲ್‌ಬಾಗ್, ಕಬ್ಬನ್‌ಪಾರ್ಕ್, ರೆಡ್‌ಕ್ರಾಸ್ ಸೊಸೈಟಿ, ತಾರಾಲಯ, ಗಾಂಧಿಭವನ, ವಿಶ್ವೇಶ್ವರಯ್ಯ ಮ್ಯೂಸಿಯಂ ನೋಡಿದೆವು. ಬೆಳಿಗ್ಗೆ ಶಿಶುವಿಹಾರದಲ್ಲಿ ಕಂಸಾಳೆ, ಡೊಳ್ಳು ಕುಣಿತ ತೋರಿಸಿದರು. ಭಾರತ ಪ್ರವಾಸ ನಮಗೆ ಸದಾ ನೆನಪಿನಲ್ಲಿ ಉಳಿಯುವ ಅನುಭವಗಳನ್ನು ನೀಡಿದೆ’ ಎಂದರು.

ಶ್ರೀಲಂಕಾದ ರಂಗಭೂಮಿ ಕಲಾವಿದೆ ಅನುಷಾ ತಮ್ಮ ದೇಶದ ರಂಗಭೂಮಿ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಮುದ್ರಣ ತಂತ್ರಜ್ಞರು, ಅಂಚೆ ಇಲಾಖೆ ನೌಕರ, ವಿದ್ಯಾರ್ಥಿ, ಶಿಕ್ಷಕ, ಕೃಷಿಕರು, ಬ್ಯಾಂಕ್ ಉದ್ಯೋಗಿ ಸೇರಿದಂತೆ ವೈವಿಧ್ಯಮಯ ಹಿನ್ನೆಲೆಯ ಯುವತಂಡ ಶ್ರೀಲಂಕಾದ ಸಮಕಾಲೀನ ಬೆಳವಣಿಗೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿತು.

ಶ್ರೀಲಂಕಾ ಸರ್ಕಾರ ಯುವಜನ ಸೇವಾ ಇಲಾಖೆಯ ಅಧಿಕಾರಿ ರಾಜಪಕ್ಷ ಮಾತನಾಡಿ, ‘ನಮ್ಮ ದೇಶದಲ್ಲಿ ಈ ಹಿಂದೆ ಅಂತರ್ಯುದ್ಧ ಇತ್ತು. ಈಗ ಶಾಂತಿ ನೆಲೆಸಿದೆ. ಸಿಂಹಳೀಯರು, ತಮಿಳರು ಮತ್ತು ಮುಸ್ಲಿಮರು ಶಾಂತಿಯುತವಾಗಿ ಒಟ್ಟಿಗೆ ಬಾಳುತ್ತಿದ್ದಾರೆ. ಸಹಬಾಳ್ವೆಗೆ ಭಾರತವೂ ಉತ್ತಮ ಉದಾಹರಣೆ’ ಎಂದರು.

‘ಪ್ರಜಾವಾಣಿ’ಯ ವಿದ್ಯಾರ್ಥಿ ಆವೃತ್ತಿ ‘ಸಹಪಾಠಿ’ಯ ಅಂಕಣಕಾರ ಆರ್‌. ಶ್ರೀನಾಗೇಶ್, ಯೂನೈಟೆಡ್ ರಿಲಿಜಿಯಸ್ ಇನ್‌ಶಿಯೇಟಿವ್‌ನ ಟ್ರಸ್ಟಿ ಡಾ.ಸಿ.ಎನ್.ಎನ್. ರಾಜು ತಂಡದೊಂದಿಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.