ADVERTISEMENT

‘ಶಿಕ್ಷಕರ ನೇಮಕಾತಿ ಸಮಸ್ಯೆಗೆ ಎರಡು ದಿನಗಳಲ್ಲಿ ಪರಿಹಾರ’

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 19:56 IST
Last Updated 25 ಜೂನ್ 2018, 19:56 IST

ಧಾರವಾಡ: ‘ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪಟ್ಟಿಯಲ್ಲಿ ತಾಂತ್ರಿಕ ಕಾರಣದಿಂದಾಗಿ ಸಮಸ್ಯೆಗಳು ಎದುರಾಗಿದ್ದವು. ಅವುಗಳನ್ನು ಇನ್ನೆರಡು ದಿನಗಳಲ್ಲಿ ಬಗೆಹರಿಸಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಆಯೋಜಿಸಿದ್ದ ಶಿಕ್ಷಣ ಕಾರ್ಯಾಗಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಟಿಇಟಿ ಫಲಿತಾಂಶ ಬಿಡುಗಡೆ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ತಾಂತ್ರಿಕ ದೋಷಗಳು ಎದುರಾಗಿದ್ದರಿಂದ ಕೆಲ ಸಮಸ್ಯೆಗಳಾಗಿವೆ. ಅವುಗಳನ್ನು ಪರಿಹರಿಸಿ, ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಕಿರು ಪರೀಕ್ಷೆಗಷ್ಟೆ ‘ಓಪನ್‌ ಬುಕ್‌ ಎಕ್ಸಾಮ್‌’–(ಹುಬ್ಬಳ್ಳಿ ವರದಿ): ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು, ಕಿರು ಪರೀಕ್ಷೆಯಲ್ಲಿ ಮಾತ್ರ ಪಠ್ಯಪುಸ್ತಕ ನೋಡಿ ಬರೆಯುವ (ಓಪನ್‌ ಬುಕ್‌ ಎಕ್ಸಾಮ್‌) ವ್ಯವಸ್ಥೆಯನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ; ವಾರ್ಷಿಕ ಪರೀಕ್ಷೆಗಾಗಿ ಅಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

‘ವಿದ್ಯಾರ್ಥಿಗಳು ಧೈರ್ಯದಿಂದ ವಾರ್ಷಿಕ ಪರೀಕ್ಷೆ ಎದುರಿಸಲು ಹೊಸ ವ್ಯವಸ್ಥೆ ಅಗತ್ಯವಿದೆ. ‍ಈಗ ಪರೀಕ್ಷಾ ಕೊಠಡಿಗಳು ಪೊಲೀಸ್‌ ಠಾಣೆಗಳಂತಾಗಿದ್ದು, ಮಕ್ಕಳಲ್ಲಿ ಭಯ ಹೆಚ್ಚಾಗಿದೆ. ಪಠ್ಯಪುಸ್ತಕ ನೋಡಿ ಕಿರು ಪರೀಕ್ಷೆ ಬರೆಯುವುದರಿಂದ ಭಯ ದೂರವಾಗುತ್ತದೆ. ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಾಗುತ್ತದೆ. ಈ ವ್ಯವಸ್ಥೆ ವಾರ್ಷಿಕ ಪರೀಕ್ಷೆಗೆ ಅಲ್ಲ’ ಎಂದರು.

ಬಜೆಟ್‌ ಮಂಡನೆ ಬಳಿಕ ಶಿಕ್ಷಣ ತಜ್ಞರು, ಅಧಿಕಾರಿಗಳ ಜೊತೆ ಚರ್ಚಿಸಿ ಈ ಬಗ್ಗೆ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.