ADVERTISEMENT

ಸುರಿದ ಮಳೆ; ತಂಪಾದ ಮಂಜಿನ ನಗರಿ

ಮೂರು ತಿಂಗಳ ನಂತರ ವರುಣನ ದರ್ಶನ; ತಂಪಾದ ವಾತಾವರಣ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 3:54 IST
Last Updated 23 ಏಪ್ರಿಲ್ 2024, 3:54 IST
ಮಡಿಕೇರಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ಹರಿಯಿತು
ಮಡಿಕೇರಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಗೆ ರಸ್ತೆಗಳಲ್ಲಿ ನೀರು ಹರಿಯಿತು   

ಮಡಿಕೇರಿ: ಕಳೆದ ಹಲವು ದಿನಗಳಿಂದ ಸುಡು ಬಿಸಿಲಿನಿಂದ ಬಿಸಿಯಾಗಿದ್ದ ಮಂಜಿನ ನಗರಿ ಮಡಿಕೇರಿಯ ನೆಲ ಗುರುವಾರ ಸಂಜೆ ಸುರಿದ ಮಳೆಗೆ ತಂಪಾಯಿತು. ಸುಮಾರು 20 ನಿಮಿಷಗಳಷ್ಟು ಕಾಲ ಬಿರುಸಿನಿಂದ ಸುರಿದ ಮಳೆಯು ಬಿಸಿಲ ಬೇಗೆಯನ್ನು ತಣಿಸಿತು.

ಮಳೆ ಬೀಳುತ್ತಿದ್ದಂತೆ ಕಾದ ನೆಲದಿಂದ ಹೊಮ್ಮಿದ ಘಮ್ಮನೆಯ ವಾಸನೆಗೆ ಜನರು ಪುಳಕಿತಗೊಂಡರು. ಸರಿಸುಮಾರು 3 ತಿಂಗಳ ನಂತರ ಮಳೆಯ ಸೊಬಗನ್ನು ಮಕ್ಕಳಾದಿಯಾಗಿ ಎಲ್ಲರೂ ಕಣ್ತುಂಬಿಕೊಂಡರು. ಕೆಲವರು ಮಳೆಯಲ್ಲಿ ನೆನೆಯುತ್ತ ಸಂಭ್ರಮಿಸಿದರು.

ಈ ಬಾರಿಯ ಬೇಸಿಗೆ ಕಳೆದೆಲ್ಲ ಬೇಸಿಗೆಗಿಂತಲೂ ಹೆಚ್ಚು ಸೆಖೆಯನ್ನು ತರಿಸಿತ್ತು. ತಂಪು ನಗರಿ ಎನಿಸಿದ ಮಡಿಕೇರಿಯಲ್ಲೂ ಗರಿಷ್ಠ ತಾಪಮಾನ 36.2ಕ್ಕೆ ತಲುಪಿ ಜನರು ಬಸವಳಿದಿದ್ದರು. ಸದ್ಯ, ಸುರಿದ ಮಳೆಯು ಸ್ವಲ್ಪಮಟ್ಟಿಗಾದರೂ ತಂಪು ನೀಡಿತು.

ADVERTISEMENT

ಬುಧವಾರವೂ ದಿನವಿಡಿ ಗುಡುಗಿನಿಂದ ಕೂಡಿದ ವಾತಾವರಣ ಇದ್ದರೂ ಮಳೆಯಾಗಿರಲಿಲ್ಲ. ಗುರುವಾರವೂ ದಿನವಿಡಿ ಮೋಡಕವಿದ ವಾತಾವರಣ ಇದ್ದರೂ ಜನರು ಮಳೆ ಬರಬಹುದು ಎಂಬ ನಿರೀಕ್ಷೆಯನ್ನೇ ಕಳೆದುಕೊಂಡಿದ್ದರು. ಆದರೆ, ದಿಢೀರನೆ ಸಂಜೆ ವೇಳೆಗೆ ಸುರಿದ ಮಳೆಯು ಅಚ್ಚರಿಗೆ ಕಾರಣವಾಯಿತು.

ಗಾಳಿ ಇಲ್ಲದೇ ಧಾರಾಕಾರವಾಗಿ ಸುರಿದ ಮಳೆಯಿಂದ ರಸ್ತೆಗಳಲ್ಲಿ ನೀರು ಹರಿಯಿತು. ಚರಂಡಿಗಳಲ್ಲಿ ಕಸ ಕಟ್ಟಿಕೊಂಡು ಕೆಲವೆಡೆ ನೀರು ರಸ್ತೆಯಲ್ಲಿ ರಭಸವಾಗಿಯೇ ಹರಿಯಿತು. ಬತ್ತಿದ್ದ ತೋಡುಗಳಲ್ಲಿ ನೀರು ಬಂದಿತು.

ಸದ್ಯ ಸುರಿದಿರುವ ಮಳೆಯಿಂದ ನಗರಕ್ಕೆ ನೀರು ಪೂರೈಸುವ ಕೂಟುಹೊಳೆಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುವ ಸಂಭವವಿದೆ. ಈ ಹೊಳೆಯ ಆಸುಪಾಸಿನಲ್ಲಿ ಬುಧವಾರವೂ ಮಳೆಯಾಗಿತ್ತು. ಇದರಿಂದ ಬತ್ತುತ್ತಿದ್ದ ಕೂಟುಹೊಳೆ ಮತ್ತೆ ಜೀವಕಳೆಯನ್ನು ತಳೆಯುವಂತಾಗಿದೆ.

ಮಡಿಕೇರಿ ನಗರದ ಆಸುಪಾಸಿನಲ್ಲಿರುವ ಕಾಫಿ ಬೆಳೆಯೂ ಬಿಸಿಲಿಗೆ ಬಾಡುತ್ತಿದ್ದವು. ಈಗ ಬಂದ ಮಳೆ ಗಿಡಗಳಿಗೆ ನವಚೈತನ್ಯ ತರಿಸಿದೆ. ಮುಂದೆಯೂ ನಿರಂತರವಾಗಿ ಮಳೆ ಸುರಿದರೆ ಬತ್ತಿರುವ ಕೊಳವೆಬಾವಿಗಳಲ್ಲಿ ಮತ್ತೆ ನೀರು ಉಕ್ಕುವ ನಿರೀಕ್ಷೆ ಇದೆ.

ಶುಕ್ರವಾರವೂ ಕೊಡಗು ಜಿಲ್ಲೆಯ ಅಲ್ಲಲ್ಲಿ ಗುಡುಗು, ಸಿಡಿಲಿನಿಂದ ಕೂಡಿದ ಮಳೆಯಾಗುವ ನಿರೀಕ್ಷೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮೂಲಗಳು ತಿಳಿಸಿವೆ.

ಮಡಿಕೇರಿಯಲ್ಲಿ ಗುರುವಾರ ಸಂಜೆ ಸುರಿದ ಮಳೆಯಲ್ಲಿ ಆಟೊವೊಂದು ಸಂಚರಿಸಿತು
ಎಂ.ಪಿ.ಅಪ್ಪಚ್ಚುರಂಜನ್
ಎಂ.ಪಿ.ಅಪ್ಪಚ್ಚುರಂಜನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.