ADVERTISEMENT

ಅರುಣಾಚಲ ಪ್ರದೇಶ ಭಾರತದ್ದಲ್ಲ, ವಿವಾದಿತ ಪ್ರದೇಶ: ಚೀನಾ

ಏಜೆನ್ಸೀಸ್
Published 12 ಏಪ್ರಿಲ್ 2017, 11:28 IST
Last Updated 12 ಏಪ್ರಿಲ್ 2017, 11:28 IST
ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್
ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್   

ಬೀಜಿಂಗ್: ‘ಅರುಣಾಚಲಪ್ರದೇಶ ಭಾರತದ್ದಲ್ಲ. ಭಾರತ–ಚೀನಾ ಗಡಿಯ ವಿವಾದಿತ ಪ್ರದೇಶ’ ಎಂದು ಚೀನಾ ಹೇಳಿದೆ.

ಟಿಬೆಟನ್ನರ ಧರ್ಮಗುರು ದಲೈಲಾಮಾ ಅವರಿಗೆ ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲು ಅವಕಾಶ ಮಾಡಿಕೊಟ್ಟಿರುವುದು ಟಿಬೆಟ್ ಮತ್ತು ಗಡಿಪ್ರದೇಶಕ್ಕೆ ಸಂಬಂಧಿಸಿ ಭಾರತ ಬದ್ಧತೆ ಪ್ರದರ್ಶಿಸದಿರುವುದನ್ನು ಸೂಚಿಸಿದೆ. ಭಾರತ ಸರ್ಕಾರದ ಅಧಿಕಾರಿಗಳು ಮತ್ತು ದಲೈಲಾಮಾ ನೀಡುತ್ತಿರುವ ಪ್ರಚೋದನಾಕಾರಿ ಹೇಳಿಕೆಗಳು ಗಡಿ ವಿವಾದ ಪರಿಹರಿಸುವ ಪ್ರಕ್ರಿಯೆ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಹೇಳಿದೆ.

ನಾವು ಇತಿಹಾಸದಿಂದ ಪಾಠ ಕಲಿಯಬೇಕಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್ ಹೇಳಿದ್ದಾರೆ.

ADVERTISEMENT

‘ಅರುಣಾಚಲಪ್ರದೇಶದ ಜತೆ ಗುರುತಿಸಿಕೊಳ್ಳುವ ದಕ್ಷಿಣ ಟಿಬೆಟ್‌ನ ಜನ ಭಾರತದ ಅಕ್ರಮ ಆಡಳಿತದಿಂದ ಕಠಿಣ ಜೀವನ ನಡೆಸುತ್ತಿದ್ದಾರೆ’ ಎಂದು ಬುಧವಾರ ಚೀನಾದ ಸರ್ಕಾರಿ ಒಡೆತನದ ಪತ್ರಿಕೆಯೊಂದರ ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

‘ದಕ್ಷಿಣ ಟಿಬೆಟನ್ನರನ್ನು ತಾರತಮ್ಯದಿಂದ ಕಾಣಲಾಗುತ್ತಿದೆ. ಅಲ್ಲಿ ಜೀವಿಸುವುದು ದುಸ್ತರವಾಗಿರುವುದರಿಂದ ಅವರು ಮತ್ತೆ ಚೀನಾದ ಜತೆ ಒಂದಾಗಲು ಬಯಸಿದ್ದಾರೆ’ ಎಂದೂ ಸಂಪಾದಕೀಯದಲ್ಲಿ ಹೇಳಲಾಗಿದೆ.

ಒಂದು ವಾರಕ್ಕೂ ಹೆಚ್ಚು ಅರುಣಾಚಲಪ್ರದೇಶದಲ್ಲಿದ್ದ ದಲೈಲಾಮಾ ಮಂಗಳವಾರ ಅಲ್ಲಿಂದ ತೆರಳಿದ್ದರು. ಇದರ ಬೆನ್ನಲ್ಲೇ ಚೀನಾ ಈ ಹೇಳಿಕೆ ನೀಡಿದೆ. ಅರುಣಾಚಲಪ್ರದೇಶಕ್ಕೆ ಭೇಟಿ ನೀಡಲು ದಲೈಲಾಮಾ ಅವರಿಗೆ ಅವಕಾಶ ನೀಡಬಾರದು ಎಂದು ಈ ಹಿಂದೆಯೇ ಚೀನಾ ಹೇಳಿತ್ತು. ಆದರೆ, ಅರುಣಾಚಲಪ್ರದೇಶ ಭೇಟಿಗೆ ಅವಕಾಶ ನೀಡುವ ಕ್ರಮವನ್ನು ಭಾರತ ಸರ್ಕಾರ ಸಮರ್ಥಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.