ADVERTISEMENT

ಇದು ಮೊಗೆದಷ್ಟೂ ಮುಗಿಯದ ರೋಚಕ ಕಥನ

ಸುಧೀಂದ್ರ ಬುಧ್ಯ
Published 31 ಅಕ್ಟೋಬರ್ 2016, 19:30 IST
Last Updated 31 ಅಕ್ಟೋಬರ್ 2016, 19:30 IST
ಇದು ಮೊಗೆದಷ್ಟೂ ಮುಗಿಯದ ರೋಚಕ ಕಥನ
ಇದು ಮೊಗೆದಷ್ಟೂ ಮುಗಿಯದ ರೋಚಕ ಕಥನ   

ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕೊನೆಯ ಆಟಕ್ಕೆ ವಾರವಷ್ಟೇ ಬಾಕಿ ಉಳಿದಿದೆ. ಸಾಮಾನ್ಯವಾಗಿ ಮತದಾನಕ್ಕೆ ಕೆಲವು ದಿನಗಳಿರುವಾಗ, ಭಾವನಾತ್ಮಕ ಸಂಗತಿಗಳನ್ನು ಮುಂದೆ ತರಲಾಗುತ್ತದೆ. ದೇಶಪ್ರೇಮದ ದಾಳ ಉರುಳಿಸಲಾಗುತ್ತದೆ. ಮೊದಲಿನಿಂದಲೂ ಅಮೆರಿಕ, ಜಾಗತಿಕವಾಗಿ ತಾನು ಹಿರಿಯಣ್ಣನ ಕುರ್ಚಿಯಲ್ಲಿ ಭದ್ರವಾಗಿ ಕುಳಿತಿರಬೇಕು ಎಂದು ಬಯಸುವ ರಾಷ್ಟ್ರ. ಇತ್ತೀಚೆಗೆ ರಷ್ಯಾ ಮತ್ತು ಚೀನಾ, ತನ್ನನ್ನು ಆ ಕುರ್ಚಿಯಿಂದ ಕೆಳಗೆ ದಬ್ಬಿದಂತೆ ಅಮೆರಿಕಕ್ಕೆ ಕನಸು ಬೀಳುತ್ತಿದೆ. ಹಾಗಾಗಿ ಅದನ್ನೇ ಅಭ್ಯರ್ಥಿಗಳು ಚುನಾವಣಾ ವಿಷಯವಾಗಿಸಿಕೊಂಡಿದ್ದಾರೆ. ರಷ್ಯಾ ಎಂಬ ಗುಮ್ಮ, ಚೀನಾ ಎಂಬ ಬೆದರು ಬೊಂಬೆಯನ್ನು ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರ ಭಾಷಣಗಳಲ್ಲಿ ಸಾಕಷ್ಟು ಬಳಸಿದ್ದಾರೆ.

2008ರಲ್ಲಿ ರಿಪಬ್ಲಿಕನ್ ಅಭ್ಯರ್ಥಿ, ಜಾನ್ ಮೆಕೇನ್ ಇದೇ ತಂತ್ರವನ್ನು ಅನುಸರಿಸಿದ್ದರು. ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಅವರು ಹೇಳುತ್ತಿದ್ದ ಕತೆ ಬಹಳ ಪ್ರಸಿದ್ಧವಾಗಿತ್ತು. ತಾವು ವಿಯೆಟ್ನಾಂ ಯುದ್ಧದಲ್ಲಿ ಯುದ್ಧ ಕೈದಿಯಾಗಿದ್ದಾಗ, ಮೈಕ್ ಕ್ರಿಸ್ಟಿಯನ್ ಎಂಬ ಅಮೆರಿಕದ ಸೈನಿಕ ಕೂಡ ಬಂಧನದಲ್ಲಿದ್ದ, ಆತನ ದೇಶಪ್ರೇಮ ಎಂತಹದು ಎಂಬುದನ್ನು ಮೆಕೇನ್ ವಿವರಿಸುತ್ತಿದ್ದರು. ‘ಮೈಕ್ ತನ್ನ ಬಿಡುವಿನ ಸಮಯದಲ್ಲಿ ಅಧಿಕಾರಿಗಳಿಗೆ ತಿಳಿಯದಂತೆ ಕಸೂತಿ ಹಾಕುತ್ತಿದ್ದ. ನಮಗೂ ಅದು ಸೋಜಿಗ ಎನಿಸುತ್ತಿತ್ತು. ಒಂದು ದಿನ ಅಧಿಕಾರಿಯೊಬ್ಬರು ಆತನನ್ನು ಹೊರಕ್ಕೆ ಎಳೆದುತಂದು ಥಳಿಸಿದರು.

ಅಂಗಿ ತೆಗೆಯುವಂತೆ ಹೇಳಿದರು. ಆಗ ನಮಗೆಲ್ಲಾ ಮೈಕ್ ಇಷ್ಟು ದಿನ ಮಾಡುತ್ತಿದ್ದದ್ದು ಏನೆಂಬುದು ತಿಳಿಯಿತು. ಆತ ಅಮೆರಿಕದ ಧ್ವಜವನ್ನು ತನ್ನ ಅಂಗಿಯ ಒಳಭಾಗದಲ್ಲಿ ಕಸೂತಿ ಮಾಡಿದ್ದ. ನಮಗೆಲ್ಲಾ ರೋಮಾಂಚನವಾಯಿತು. ಅಧಿಕಾರಿಗಳ ಹೊಡೆತಕ್ಕೆ ತತ್ತರಿಸಿ ಹೋಗಿದ್ದ ಆತನನ್ನು, ಸೆಲ್ ಒಳಗೆ ಕರೆದುಕೊಂಡು ಬಂದು ಮಲಗಿಸಿ, ನಾನು ನಿದ್ದೆ ಹೋದೆ. ಕೊಂಚ ಹೊತ್ತಿನಲ್ಲಿ ಎಚ್ಚರವಾದಾಗ ತಿರುಗಿ ನೋಡಿದರೆ, ಮಂದ ಬೆಳಕಿನಲ್ಲೇ ಮತ್ತೊಂದು ಅಂಗಿ ಹಿಡಿದು ಮೈಕ್ ತಲ್ಲೀನನಾಗಿದ್ದ. ಕಾರಾಗೃಹದಲ್ಲಿದ್ದ ಪ್ರತೀ ಸೈನಿಕನಲ್ಲೂ ಅಂತಹದೇ ಉತ್ಸಾಹವಿತ್ತು’ ಎಂದು ಮೆಕೇನ್ ಗದ್ಗದಿತ ಧ್ವನಿಯಲ್ಲಿ ವಿವರಿಸುತ್ತಿದ್ದರು.

ಇಂತಹ ಭಾವನಾತ್ಮಕ ಮಾತುಗಳ ಜೊತೆ, ಹಲವು ತುಚ್ಛ ತಂತ್ರಗಳನ್ನು ಕೊನೆಯ ಹಂತದಲ್ಲಿ ಬಳಸಲಾಗುತ್ತದೆ. ಆ ಪದ್ಧತಿಗೆ ಚಾಲನೆ ಕೊಟ್ಟಿದ್ದು ರಿಚರ್ಡ್ ನಿಕ್ಸನ್. ಆ ಕಾರಣದಿಂದಲೇ, ‘ನಿಕ್ಸನ್ ಡರ್ಟಿ ಟ್ರಿಕ್ಸ್’ ಅಮೆರಿಕದ ಚುನಾವಣಾ ಇತಿಹಾಸದಲ್ಲಿ ದಪ್ಪ ಅಕ್ಷರದಲ್ಲಿ ದಾಖಲಾಗಿದೆ. ಆ ಬಗ್ಗೆ ನಿಮಗೆ ಹೇಳಬೇಕು. ಎಡ್ಮಂಡ್ ಮಸ್ಕಿ 1972ರಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದರು. ಮಸ್ಕಿ ಬಗ್ಗೆ ವೈಯಕ್ತಿಕ ದ್ವೇಷ ಬೆಳೆಸಿಕೊಂಡಿದ್ದ, ‘ಯೂನಿಯನ್ ಲೀಡರ್’ ಪತ್ರಿಕೆಯ ಸಂಪಾದಕ ವಿಲಿಯಂ ಲೋಬ್, ‘ಮಾಸ್ಕೊ ಮಸ್ಕಿ’ ಎಂಬ ಹೊಸ ಸರಣಿಯನ್ನೇ ತಮ್ಮ ಪತ್ರಿಕೆಯಲ್ಲಿ ಆರಂಭಿಸಿದ್ದರು. ಮಸ್ಕಿ ಮತ್ತು ಲೋಬ್ ಅವರ ನಡುವಿನ ಹಗೆ ಎಷ್ಟಿತ್ತೆಂದರೆ, ‘ಯೂನಿಯನ್ ಲೀಡರ್ ಪತ್ರಿಕೆ, ಮಸ್ಕಿ ಅವರನ್ನಷ್ಟೇ ಅಲ್ಲ, ಅವರ ಹೆಂಡತಿ, ಮಕ್ಕಳು, ಮೊಮ್ಮಕ್ಕಳನ್ನೂ ದ್ವೇಷಿಸುತ್ತದೆ’ ಎಂಬ ಮಾತು ಚಾಲ್ತಿಯಲ್ಲಿತ್ತು.

ಚುನಾವಣೆ ಸನಿಹದಲ್ಲಿರುವಾಗ ‘ಯೂನಿಯನ್ ಲೀಡರ್’ ಪತ್ರಿಕೆಯಲ್ಲಿ ಒಂದು ಪತ್ರ ಪ್ರಕಟವಾಯಿತು. ಮಕ್ಕಳ ಕೈಬರಹದಂತೆ ಕಾಣುತ್ತಿದ್ದ ಪತ್ರದಲ್ಲಿ ಫ್ಲಾರಿಡಾ ಮೂಲದ ವ್ಯಕ್ತಿಯೊಬ್ಬ ‘ಮಾನ್ಯ ಸಂಪಾದಕರೇ, ನಾನೊಮ್ಮೆ ಮಸ್ಕಿ ಅವರನ್ನು ಭೇಟಿಯಾಗಿದ್ದೆ. ಆಗ ಅಲ್ಲಿದ್ದ ಪೈಕಿ ಒಬ್ಬರು, ನಿಮಗೆ ಕಪ್ಪು ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿದಿದೆಯೇ ಎಂದು ಮಸ್ಕಿ ಅವರನ್ನು ಕೇಳಿದರು. ತಕ್ಷಣವೇ ಮಸ್ಕಿ ಪಕ್ಕದಲ್ಲಿದ್ದ ಅವರ ಆಪ್ತರು ‘No, not blacks but we have CANNOCKS’ ಎಂದರು. ಆಗ ಮಸ್ಕಿ ನಕ್ಕರು’ ಎಂಬುದಾಗಿ ಆ ಪತ್ರದಲ್ಲಿ ಬರೆಯಲಾಗಿತ್ತು. ಆ ಪತ್ರ ‘ಕೆನಾಕ್ಸ್ ಲೆಟರ್’ ಎಂದೇ ಪ್ರಸಿದ್ಧವಾಯಿತು.

ಕೆನಾಕ್ಸ್ (Canucks) ಎನ್ನುವುದು ಫ್ರೆಂಚ್ ಮತ್ತು ಕೆನಡಾ ಮೂಲದ ಅಮೆರಿಕನ್ನರನ್ನು ಹೀಯಾಳಿಸಲು ಬಳಸುವ ಪದ. ಈ ಪತ್ರ ಪ್ರಕಟವಾದೊಡನೆ, ಮಸ್ಕಿ ಅವರ ತಂಡ ಕುಸಿದುಹೋಯಿತು. ತಕ್ಷಣಕ್ಕೆ ನಡೆಸಿದ ಸಮೀಕ್ಷೆಯಲ್ಲಿ ಮಸ್ಕಿ ಅವರಿಗೆ ಶೇಕಡ 10ರಷ್ಟು ಹಿನ್ನಡೆ ಆಗಿತ್ತು. ಮಸ್ಕಿ, ತಡ ಮಾಡದೇ ‘ಯೂನಿಯನ್ ಲೀಡರ್’ ಪತ್ರಿಕೆಯ ವಿರುದ್ಧ ಪ್ರತಿಭಟಿಸಲು ಮುಂದಾದರು. ‘ಯೂನಿಯನ್ ಲೀಡರ್’ ಪತ್ರಿಕೆಯ ಕಚೇರಿ ಬಳಿ ತೆರಳಿ, ಮೈಕು ಹಿಡಿದು ಭಾಷಣ ಆರಂಭಿಸಿದರು. ‘ಸುಳ್ಳು ಪತ್ರ ಪ್ರಕಟಿಸಿದ್ದಾರೆ’ ಎಂದು ಹರಿಹಾಯ್ದರು. ‘ನನ್ನನ್ನು ಸೋಲಿಸಲು ಮಾಡಿದ ಹುನ್ನಾರ ಇದು’ ಎಂದು ಭಾವುಕರಾದರು.

ಆಗ ಚಳಿಗಾಲ ಆರಂಭವಾಗಿ ಹಿಮಧಾರೆಯಾಗುತ್ತಿತ್ತು. ಮಸ್ಕಿ ಕೆನ್ನೆಗಿಳಿದದ್ದು ಅವರ ಕಣ್ಣೀರೋ, ಬೀಳುತ್ತಿದ್ದ ಹಿಮವೋ ಎಂಬುದು ಅಲ್ಲಿದ್ದ ಪತ್ರಕರ್ತರಿಗೆ ತಿಳಿಯಲಿಲ್ಲ. ಒಬ್ಬೊಬ್ಬರು ಒಂದೊಂದು ರೀತಿ ವರದಿ ಮಾಡಿದರು. ಆ ಭಾಷಣ ‘Crying Speech' ಎಂದು ಇತಿಹಾಸದ ಪುಟ ಸೇರಿತು.

ನಂತರ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ವರದಿಗಾರರು, ಪತ್ರದ ಬೆನ್ನುಹತ್ತಿ ಹೊರಟಾಗ ಆ ಪತ್ರ ನಿಕ್ಸನ್ ಕ್ಯಾಂಪಿನಿಂದ, ‘ಯೂನಿಯನ್ ಲೀಡರ್’ ತಲುಪಿತ್ತು ಎಂಬುದು ಬೆಳಕಿಗೆ ಬಂತು. ನಿಕ್ಸನ್ ಅವರ ‘ಡರ್ಟಿ ಟ್ರಿಕ್ಸ್’ಗಳಲ್ಲಿ ಅದೂ ಒಂದಾಗಿತ್ತು. ಹೀಗೆ ಹಲವು ಅನಾಮಧೇಯ ಪತ್ರಗಳು ನಿಕ್ಸನ್ ಕ್ಯಾಂಪಿನಿಂದ ಹೊರಬೀಳುತ್ತಿದ್ದವು. ವಾಷಿಂಗ್ಟನ್ ಡಿ.ಸಿಯ ವಾಟರ್ ಗೇಟ್ ಕಟ್ಟಡದಲ್ಲಿದ್ದ ಡೆಮಾಕ್ರಟಿಕ್ ಪಕ್ಷದ ಮುಖ್ಯ ಕಚೇರಿಗೆ ನುಗ್ಗಿ, ರಹಸ್ಯ ಮೈಕ್ರೋ ಪೋನ್ ಅಳವಡಿಸಿ, ಎದುರಾಳಿ ರೂಪಿಸುವ ತಂತ್ರಗಳನ್ನು ಕದ್ದಾಲಿಸುವ ಕೆಲಸವನ್ನೂ ನಿಕ್ಸನ್ ತಂಡ ಮಾಡಿತ್ತು!

ಇಂತಹ ಕ್ಷುಲ್ಲಕ ತಂತ್ರಗಳನ್ನು ಅನುಸರಿಸುವುದು ನಂತರ ಸಾಮಾನ್ಯವಾಯಿತು. 2000ರಲ್ಲಿ ಬುಷ್ ಮತ್ತು ಅಲ್ ಗೋರ್ ಅವರ ನಡುವೆ ಸ್ಪರ್ಧೆ ಇದ್ದಾಗ, ಚುನಾವಣೆಗೆ ಕೆಲವು ದಿನಗಳ ಮುಂಚೆ, 24 ವರ್ಷಗಳ ಹಿಂದೆ, 1976ರಲ್ಲಿ ಯುವಕ ಬುಷ್ ಮದ್ಯ ಸೇವಿಸಿ ವಾಹನ ಚಲಿಸಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು ಎಂಬ ಸುದ್ದಿಯನ್ನು ಮುನ್ನೆಲೆಗೆ ಬಿಡಲಾಗಿತ್ತು. ಬುಷ್ ತಂಡ, ಇದು ಅಲ್ ಗೋರ್ ಕ್ಯಾಂಪಿನ ಪಿತೂರಿ ಎಂದು ಆರೋಪಿಸಿತ್ತು. ಈ ಬಾರಿ, ಟ್ರಂಪ್ ತೆರಿಗೆ ಕಳ್ಳತನ ಕುರಿತಂತೆ, ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಗೆ ಬಂದ ಅನಾಮಿಕ ಪತ್ರ ಸಾಕಷ್ಟು ಸುದ್ದಿ ಮಾಡಿತು. ಇದೀಗ ವಿಕಿಲೀಕ್ಸ್, ಹಿಲರಿ ಅವರ ಇ-ಮೇಲ್‌ಗಳನ್ನು ಸರತಿಯಲ್ಲಿ ಬಿಡುಗಡೆ ಮಾಡುತ್ತಿದೆ. ಇವುಗಳ ಹಿಂದೆ ಯಾರಿದ್ದಾರೆ ಎಂಬುದು ಚುನಾವಣೆಯ ಬಳಿಕವಷ್ಟೇ ತಿಳಿಯಬಹುದು.

ಅದಿರಲಿ, ಮುಂದಿನ ಮಂಗಳವಾರದ ಸಂಜೆಯ ಹೊತ್ತಿಗೆ, ವರ್ಷಕ್ಕೂ ಮೊದಲೇ ಆರಂಭವಾದ ಚರ್ಚೆ, ವಾದ ಪ್ರತಿವಾದ ಎಲ್ಲಕ್ಕೂ ತೆರೆಬೀಳುತ್ತದೆ. ಅಮೆರಿಕ ನಕ್ಷೆಯಲ್ಲಿ ಕೆಂಪು, ನೀಲಿ ಬಣ್ಣಗಳು ಹೊಮ್ಮುತ್ತವೆ. ಡೆಮಾಕ್ರಟಿಕ್ ಪಕ್ಷ ಗೆದ್ದ ರಾಜ್ಯಗಳು ನೀಲಿ ಬಣ್ಣ ಮತ್ತು ರಿಪಬ್ಲಿಕನ್ನರು ಗೆದ್ದ ರಾಜ್ಯಗಳು ಕೆಂಪು ಬಣ್ಣದಲ್ಲಿ ಕಂಗೊಳಿಸುತ್ತವೆ. ಮರುದಿನ ನಸುಕಿನ ಹೊತ್ತಿಗೆ ಮುಂದಿನ ಅಧ್ಯಕ್ಷರಾರು ಎಂಬುದು ಘೋಷಣೆಯಾಗುತ್ತದೆ. ಅಮೆರಿಕ ಚುನಾವಣೆಯ ವಿಶೇಷ ಎಂದರೆ, ಇಲ್ಲಿ ಚುನಾವಣಾ ಪ್ರಕ್ರಿಯೆ ಅಂತ್ಯಗೊಳ್ಳುವುದು, ಸೋತ ಅಭ್ಯರ್ಥಿ ತನ್ನ ಸೋಲನ್ನು ಒಪ್ಪಿಕೊಂಡಾಗ, ಗೆದ್ದ ಅಭ್ಯರ್ಥಿಯನ್ನು ಸಂಪರ್ಕಿಸಿ ಅಭಿನಂದಿಸಿದಾಗ.

ಕಾಲ ಬದಲಾದಂತೆ ಈ ಪ್ರಕ್ರಿಯೆಯಲ್ಲೂ ಸಾಕಷ್ಟು ಬದಲಾವಣೆ ಆಗಿದೆ. ಮೊದಮೊದಲು, ಸೋತ ಅಭ್ಯರ್ಥಿ ಪತ್ರ ಬರೆದು ಗೆದ್ದ ಅಭ್ಯರ್ಥಿಯನ್ನು ಅಭಿನಂದಿಸುವುದು ರೂಢಿಯಲ್ಲಿತ್ತು. ನಂತರ ಟೆಲಿಗ್ರಾಂ ಮೂಲಕ ಸೋಲೊಪ್ಪಿಕೊಳ್ಳುವ ವ್ಯವಸ್ಥೆ ಬಂತು. ಇದೀಗ ದೂರವಾಣಿ ಮೂಲಕ ಅಭಿನಂದಿಸುವ ಪದ್ಧತಿ ಚಾಲ್ತಿಯಲ್ಲಿದೆ. ಕೆಲವೊಮ್ಮೆ ಸೋತ ಅಭ್ಯರ್ಥಿ ಸೋಲೊಪ್ಪಿಕೊಳ್ಳಲು ಹಿಂಜರಿಯುವುದೂ ಇದೆ. ಥಾಮಸ್ ಡ್ಯೂವಿ, 1944ರಲ್ಲಿ ರೂಸ್ವೆಲ್ಟ್ ಅವರ ಎದುರು ಸೋಲು ಅನುಭವಿಸಿದ್ದರು.

ಮರುದಿನ, ರೇಡಿಯೊ ಮೂಲಕ ‘ಜನರ ತೀರ್ಪನ್ನು ಗೌರವಿಸುತ್ತೇನೆ’ ಎಂಬ ಹೇಳಿಕೆ ನೀಡಿದ್ದರು. ಆದರೆ ಅಧಿಕೃತವಾಗಿ ರೂಸ್ವೆಲ್ಟ್ ಅವರಿಗೆ ಸಂದೇಶ ರವಾನಿಸಿರಲಿಲ್ಲ. ಡ್ಯೂವಿ ಸಂಪರ್ಕಿಸದಿದ್ದಾಗ ಕುಪಿತಗೊಂಡ ರೂಸ್ವೆಲ್ಟ್ ‘ನಿಮ್ಮ ರೇಡಿಯೊ ಭಾಷಣ ಕೇಳಿದೆ. ಜನರ ತೀರ್ಪನ್ನು ಒಪ್ಪಿಕೊಂಡಿದ್ದಕ್ಕೆ ಧನ್ಯವಾದ’ ಎಂದು ತಾವೇ ಟೆಲಿಗ್ರಾಂ ಕಳುಹಿಸಿದ್ದರು. ನಂತರ ತಮ್ಮ ಗೆಲುವನ್ನು ಘೋಷಿಸಿಕೊಂಡರು.

ಸಾಮಾನ್ಯವಾಗಿ, ಚುನಾವಣೆಯ ಫಲಿತಾಂಶ ನವೆಂಬರ್ ಎರಡನೇ ಮಂಗಳವಾರ ಪ್ರಕಟವಾದರೂ, ಹೊಸ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವುದು ಎರಡು ತಿಂಗಳ ನಂತರ, ಹೊಸವರ್ಷದ ಜನವರಿ 20ರಂದು. ಈ ಎರಡು ತಿಂಗಳ ಅವಧಿಯಲ್ಲಿ, ಅಧಿಕಾರ ಹಸ್ತಾಂತರಿಸುವ ಪ್ರಕ್ರಿಯೆ ನಡೆಯುತ್ತದೆ.

ಕೆಲವೊಮ್ಮೆ ಈ ಅಧಿಕಾರ ಹಸ್ತಾಂತರ ಜಟಿಲವಾಗುವುದೂ ಇದೆ. ಚುನಾಯಿತ ಅಧ್ಯಕ್ಷರು ಮತ್ತು ಹಾಲಿ ಅಧ್ಯಕ್ಷರು ಈ ಪ್ರಕ್ರಿಯೆಯಲ್ಲಿ ಒಮ್ಮತದಿಂದ ಭಾಗವಹಿಸದಿದ್ದ ಉದಾಹರಣೆಗಳು ಇವೆ. 1933ರಲ್ಲಿ ಚುನಾಯಿತರಾಗಿದ್ದ ಫ್ರಾಂಕ್ಲಿನ್ ರೂಸ್ವೆಲ್ಟ್, ಹಿಂದಿನ ಅಧ್ಯಕ್ಷ ಹಾರ್ಬರ್ಟ್ ಹೂವರ್ ಜೊತೆಗೂಡಿ ಕೆಲಸ ಮಾಡಲು ನಿರಾಕರಿಸಿದ್ದರು.

2000ರಲ್ಲಿ ಕ್ಲಿಂಟನ್ ಮತ್ತು ಬುಷ್ ನಡುವೆ ಅಧಿಕಾರ ಹಸ್ತಾಂತರ ನಡೆಯಬೇಕಿತ್ತು. ಕ್ಲಿಂಟನ್ ಅವಧಿಯಲ್ಲಿ ಶ್ವೇತಭವನದ ಸಿಬ್ಬಂದಿ, ಅಲ್ಲಿನ ವಸ್ತುಗಳನ್ನು ಸಾಕಷ್ಟು ಹಾಳುಗೆಡವಿ ಹೊರನಡೆದಿದ್ದರು. ಎಷ್ಟರ ಮಟ್ಟಿಗೆ ಎಂದರೆ, ಶ್ವೇತಭವನದಲ್ಲಿದ್ದ ಅಷ್ಟೂ ಕಂಪ್ಯೂಟರ್ ಕೀ ಬೋರ್ಡ್ ಗಳಲ್ಲಿ W ಎಂಬ ಅಕ್ಷರವನ್ನೇ ಕಿತ್ತು ಒಗೆಯಲಾಗಿತ್ತು. ಇನ್ನು, ಈ ಬಾರಿ ಯಾರು ಗೆಲ್ಲುತ್ತಾರೆ, ನಂತರ ಏನೆಲ್ಲಾ ಬೆಳವಣಿಗೆ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕು.

ಒಂದಂತೂ ನಿಜ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಒಟ್ಟಾರೆಯಾಗಿ ಗಮನಿಸಿದರೆ, ಎರಡು ಶತಮಾನದ ಬಳಿಕವೂ, ಮುಂದುವರೆದ ರಾಷ್ಟ್ರ ಎಂಬ ಹಣೆಪಟ್ಟಿ ಇದ್ದರೂ, ಇಲ್ಲಿನ ಪ್ರಜಾತಂತ್ರ ವ್ಯವಸ್ಥೆ ಅರೆಬೆಂದ ಸ್ಥಿತಿಯಲ್ಲಿಯೇ ಇದೆ ಎನ್ನುವುದು ಮನವರಿಕೆ ಆಗುತ್ತದೆ. ಅಂದಹಾಗೆ, ಈ ಲೇಖನದೊಂದಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಕುರಿತ ಈ ಸರಣಿ ಮುಗಿಯುತ್ತಿದೆ. ಹಲವು ವಿಷಯಗಳನ್ನು ಇದುವರೆಗೆ ಚರ್ಚಿಸಿದ್ದರೂ, ಹೇಳದೇ ಉಳಿದದ್ದು ಸಾಕಷ್ಟಿದೆ. ಬಿಡಿ, ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂಬುದು, ಮೊಗೆದಷ್ಟೂ ಮುಗಿಯದ ರೋಚಕ ಕಥನ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.