ADVERTISEMENT

ಇಮ್ರಾನ್ ಖಾನ್ ಮದುವೆ ಸುದ್ದಿ ವಾಹಿನಿಗಳಿಗೆ ₹ 5 ಲಕ್ಷ ದಂಡ

ಪಿಟಿಐ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST

ಇಸ್ಲಾಮಾಬಾದ್ : ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ 3ನೇ ಮದುವೆಯಾದ ಬಗ್ಗೆ ಸುಳ್ಳು ವರದಿ ಪ್ರಸಾರ ಮಾಡಿದ್ದ 13 ಟಿವಿ ವಾಹಿನಿಗಳಿಗೆ ದಂಡ ವಿಧಿಸಲಾಗಿದೆ.

ಸುಳ್ಳು ಸುದ್ದಿ ಪ್ರಸಾರ ಮಾಡಿದ ಬಗ್ಗೆ ಪಾಕಿಸ್ತಾನ್ ತೆಹ್ರಿಕ್ ಎ ಇನ್ಸಾಫ್ (ಪಿಟಿಐ) ಪಕ್ಷ, ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರಕ್ಕೆ  (ಪಿಇಎಂಆರ್ಎ) ದೂರು ಸಲ್ಲಿಸಿತ್ತು. 

ಈ ಬಗ್ಗೆ ವಿಚಾರಣೆ ನಡೆಸಿದ ಪಿಇಎಂಆರ್ಎ, ಸುಳ್ಳು ಸುದ್ದಿ ವರದಿ ಮಾಡಿರುವುದು ಸಾಬೀತಾದ ಕಾರಣ 13 ಟಿವಿ ವಾಹಿನಿಗಳಿಗೆ ₹5 ಲಕ್ಷ ರೂಪಾಯಿ ದಂಡವನ್ನು ಹೇರಿದೆ.
ಆದರೆ ತಾವು ನೀಡಿದ್ದ ದೂರನ್ನು ಇಮ್ರಾನ್ ಖಾನ್ ಅವರು  ವಾಪಸ್ ಪಡೆದಿದ್ದರು. ಆದರೂ ಮಾಧ್ಯಮಗಳು ಸುಳ್ಳು ಸುದ್ದಿ ಪ್ರಸಾರ ಮಾಡಿರುವುದನ್ನು ಪರಿಗಣಿಸಿದ ಪಿಇಎಂಆರ್ಎ ದಂಡ ವಿಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರು ಲಂಡನ್‌ ನಲ್ಲಿ ಮೂರನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ಜುಲೈ 12ರಂದು ಪದೇ ಪದೇ ಪ್ರಸಾರ ಮಾಡಿದ್ದವು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಿಟಿಐ,   ಮಾಧ್ಯಮಗಳ ವಿರುದ್ಧ  ಜುಲೈ 13ರಂದು ದೂರನ್ನು ನೀಡಿತ್ತು. ದುನ್ಯಾ ಟಿವಿ ಬಿಟ್ಟು ಉಳಿದ ಎಲ್ಲ ಸುದ್ದಿ ವಾಹಿನಿಗಳು ಷರತ್ತುಗಳಿಲ್ಲದೆ ಕ್ಷಮೆ ಕೇಳಿದ ಬಳಿಕ ದೂರನ್ನು ವಾಪಸ್ ಪಡೆದಿತ್ತು.

ಒಂದು ವೇಳೆ ದಂಡ ಪಾವತಿಸಲು ವಿಫಲವಾದ ಟಿವಿ ವಾಹಿನಿಗಳ ಪರವಾನಗಿ ರದ್ದು ಮಾಡಬೇಕಾಗುತ್ತದೆ ಎಂದು ಪಿಇಎಂಆರ್ಎ ಎಚ್ಚರಿಕೆ ನೀಡಿದೆ.
ಇಮ್ರಾನ್ ಖಾನ್ ಅವರು ಹಿರಿಯ  ಪತ್ರಕರ್ತೆ ರೆಹಮ್ ಖಾನ್‌ರೊಂದಿಗೆ  ಕಳೆದ ವರ್ಷ ಎರಡನೇ ಮದುವೆಯಾಗಿ ಸುದ್ದಿಯಾಗಿದ್ದರು. ಆದರೆ ಈ ವಿವಾಹ ವರ್ಷ ಕಳೆಯುವುದರ ಒಳಗೆ ಮುರಿದು ಬಿದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.