ADVERTISEMENT

ಉಗ್ರರಿಗೆ ಆಶ್ರಯ: ಪಾಕ್‌ ವಿರುದ್ಧ ಟ್ರಂಪ್‌ ಕಿಡಿ

ನಿಲುವು ಬದಲಿಸಿಕೊಳ್ಳದಿದ್ದರೆ ಕಠಿಣ ಕ್ರಮ

ಪಿಟಿಐ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಉಗ್ರರಿಗೆ ಆಶ್ರಯ: ಪಾಕ್‌ ವಿರುದ್ಧ ಟ್ರಂಪ್‌ ಕಿಡಿ
ಉಗ್ರರಿಗೆ ಆಶ್ರಯ: ಪಾಕ್‌ ವಿರುದ್ಧ ಟ್ರಂಪ್‌ ಕಿಡಿ   

ವಾಷಿಂಗ್ಟನ್‌: ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಿಡಿ ಕಾರಿದ್ದಾರೆ.

ಸೇನೆಯ ಮುಖ್ಯಸ್ಥರಾಗಿ ರಾಷ್ಟ್ರವನ್ನು ಉದ್ದೇಶಿಸಿ ಮೊದಲ ಬಾರಿ ಭಾಷಣ ಮಾಡಿದ ಟ್ರಂಪ್‌ ಅವರು, ‘ಹಿಂಸಾಚಾರ, ಭೀತಿ ಮತ್ತು ಗೊಂದಲಗಳನ್ನು ಸೃಷ್ಟಿಸುತ್ತಿರುವ ಉಗ್ರರಿಗೆ ಬೆಂಬಲ ಮತ್ತು ಸುರಕ್ಷಿತ ನೆಲೆಗಳನ್ನು ಒದಗಿಸುವುದನ್ನು ಮುಂದುವರಿಸಿದರೆ ಪಾಕಿಸ್ತಾನ ಕಠಿಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಪಾಕಿಸ್ತಾನವು ಅಮೆರಿಕದಿಂದ ಕೋಟ್ಯಂತರ ರೂಪಾಯಿ ಆರ್ಥಿಕ ನೆರವು ಪಡೆಯುತ್ತಿದೆ. ಆದರೆ, ಅಮೆರಿಕ ಯಾರ ವಿರುದ್ಧ ಹೋರಾಟ ನಡೆಸುತ್ತಿದೆಯೋ ಅವರಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ. ಉಗ್ರರು ಅಫ್ಗಾನಿಸ್ತಾನದಲ್ಲಿ ಅಮೆರಿಕದವರನ್ನು ಹತ್ಯೆಗೈಯುತ್ತಿದ್ದಾರೆ.  ಅಫ್ಗಾನಿಸ್ತಾನದಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಸಹಭಾಗಿಯಾಗುವ ಮೂಲಕ ಪಾಕಿಸ್ತಾನ ಹೆಚ್ಚಿನ ನೆರವು ಪಡೆದುಕೊಳ್ಳಬಹುದು. ಆದರೆ, ಉಗ್ರರಿಗೆ ಆಶ್ರಯ ನೀಡುವ ಮೂಲಕ ಪಾಕಿಸ್ತಾನವೇ ಹೆಚ್ಚು ಹಾನಿ ಅನುಭವಿಸುತ್ತಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಅಮೆರಿಕದ ಸೈನಿಕರು ಮತ್ತು ಅಧಿಕಾರಿಗಳನ್ನು ಗುರಿಯಾಗಿಸಿಕೊಳ್ಳುವ ಉಗ್ರರಿಗೆ ಆಶ್ರಯ ನೀಡುವ ರಾಷ್ಟ್ರದೊಂದಿಗೆ ಸ್ನೇಹ ಉಳಿಯುವುದಿಲ್ಲ. ನಾಗರಿಕತೆ ಮತ್ತು ಶಾಂತಿಗಾಗಿ ಪಾಕಿಸ್ತಾನ ತನ್ನ ಬದ್ಧತೆಯನ್ನು ಪ್ರದರ್ಶಿಸಲು ಈಗ ಕಾಲ ಪಕ್ವವಾಗಿದೆ’ ಎಂದು ಟ್ರಂಪ್‌ ಕಟು ಮಾತುಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.

‘ಪಾಕಿಸ್ತಾನದ ನಾಗರಿಕರು ಸಹ ಭಯೋತ್ಪಾದನೆಯಿಂದ ಅಪಾರ ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಈ ಬಗ್ಗೆ ನಮಗೂ ನೋವಿದೆ. ಆದರೆ, ಪ್ರತಿದಿನ ಜನಸಾಮಾನ್ಯರ ಹತ್ಯೆಗೆ ಕಾರಣವಾಗಿರುವವರಿಗೆ ಆಶ್ರಯ ನೀಡುತ್ತಿರುವುದು ವಿಪರ್ಯಾಸ’ ಎಂದರು.

‘ಸಮಗ್ರ ಪರಾಮರ್ಶೆ ಬಳಿಕ ಅಫ್ಗಾನಿಸ್ತಾನ ಮತ್ತು ದಕ್ಷಿಣ ಏಷ್ಯಾಗೆ ಸಂಬಂಧಿಸಿದಂತೆ ಅಮೆರಿಕದ ಕಾರ್ಯತಂತ್ರಗಳು ಬದಲಾಗುತ್ತಿವೆ. ಹೀಗಾಗಿಯೇ ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕ ತಳೆದಿರುವ ಧೋರಣೆಯೂ ಪ್ರಮುಖವಾಗಿ ಬದಲಾಗಲಿದೆ’ ಎಂದರು.

ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಲು ಭಾರತ ಕೈಗೊಂಡಿರುವ ಕ್ರಮಗಳ ಬಗ್ಗೆ ಟ್ರಂಪ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಅಫ್ಗಾನಿಸ್ತಾನದಲ್ಲಿನ ಸ್ಥಿರತೆಗಾಗಿ ಭಾರತ ನೀಡಿರುವ ಕೊಡುಗೆ ಶ್ಲಾಘನೀಯ. ಆದರೆ, ಅಮೆರಿಕದ ಜತೆ ಕೋಟ್ಯಂತರ ಡಾಲರ್‌ ವಹಿವಾಟು ನಡೆಸುವ ಭಾರತ ಸಹ ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗೆ ಇನ್ನೂ ಹೆಚ್ಚಿನ ನೆರವು ನೀಡಬೇಕು’ ಎಂದು ಸಲಹೆ ನೀಡಿದ್ದಾರೆ.

ಪಾಕ್‌ಗೆ ಚೀನಾ ಬೆಂಬಲ

ಬೀಜಿಂಗ್‌ (ಪಿಟಿಐ): ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಕೆ ನೀಡಿದ ಮರುಕ್ಷಣವೇ ಆ ದೇಶಕ್ಕೆ ಚೀನಾ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.

ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಪಾಕಿಸ್ತಾನ ಮುಂಚೂಣಿಯಲ್ಲಿದೆ ಎಂದು ಚೀನಾ ಸಮರ್ಥಿಸಿಕೊಂಡಿದೆ.

‘ಭಯೋತ್ಪಾದನೆಯನ್ನು ನಿಗ್ರಹಿಸುವ ಹೋರಾಟದಲ್ಲಿ ಪಾಕಿಸ್ತಾನ ಸಾಕಷ್ಟು ಕಳೆದುಕೊಂಡಿದೆ. ಶಾಂತಿ ಮತ್ತು ಸ್ಥಿರತೆಗಾಗಿ ಅಪಾರ ಶ್ರಮಿಸಿದೆ. ಅಂತರರಾಷ್ಟ್ರೀಯ ಸಮುದಾಯ ಪಾಕಿಸ್ತಾನದ ಪ್ರಯತ್ನಗಳನ್ನು ಗುರುತಿಸಬೇಕು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್ಯಿಂಗ್‌ ಪ್ರತಿಕ್ರಿಯಿಸಿದ್ದಾರೆ.

ಭಯೋತ್ಪಾದನೆ ನಿರ್ಮೂಲನೆಗೆ ಬದ್ಧ: ಪಾಕ್‌

ಇಸ್ಲಾಮಾಬಾದ್‌ (ಪಿಟಿಐ): ಭಯೋತ್ಪಾದನೆ ನಿರ್ಮೂಲನೆಗೆ ಅಂತರರಾಷ್ಟ್ರೀಯ ಸಮುದಾಯದೊಂದಿಗೆ ಕಾರ್ಯನಿರ್ವಹಿಸಲು ಬದ್ಧ ಎಂದು ಪಾಕಿಸ್ತಾನ ತಿಳಿಸಿದೆ.

ಪಾಕಿಸ್ತಾನದಲ್ಲಿನ ಅಮೆರಿಕದ ರಾಯಭಾರಿ ಡೇವಿಡ್‌ ಹ್ಯಾಲೆ ಅವರು ಪಾಕಿಸ್ತಾನದ ವಿದೇಶಾಂಗ ಸಚಿವ ಖಾವಜಾ ಅಸೀಫ್‌ ಅವರನ್ನು ಭೇಟಿಯಾಗಿ ಉಗ್ರರಿಗೆ ಆಶ್ರಯ ನೀಡುತ್ತಿರುವ ಸಂಬಂಧ ಟ್ರಂಪ್‌ ಅವರು ನೀಡಿರುವ ಹೇಳಿಕೆಯನ್ನು ವಿವರಿಸಿದರು.

ಬಳಿಕ ಹೇಳಿಕೆ ನೀಡಿದ ವಿದೇಶಾಂಗ ಕಚೇರಿ, ‘ಅಫ್ಗಾನಿಸ್ತಾನದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವುದನ್ನು ಪಾಕಿಸ್ತಾನ ಬಯಸುತ್ತದೆ’ ಎಂದು ತಿಳಿಸಿದೆ.

* ತಾಲಿಬಾನ್‌ ಮತ್ತು ಇತರ ಭಯೋತ್ಪಾದನೆ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ ನೀಡುತ್ತಿದೆ. ಈ ವಿಷಯದ ಬಗ್ಗೆ ನಾವು ಮೌನ ವಹಿಸುವುದಿಲ್ಲ
-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.