ADVERTISEMENT

ಉತ್ತರ ಕೊರಿಯಾ ಪ್ರಪಂಚದ ಪಾಲಿಗೆ ಬಿಸಿತುಪ್ಪ!

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 19:30 IST
Last Updated 4 ಸೆಪ್ಟೆಂಬರ್ 2017, 19:30 IST
ಕಿಮ್‌ ಜಾಂಗ್‌–ಉನ್‌
ಕಿಮ್‌ ಜಾಂಗ್‌–ಉನ್‌   

‌ಸೆಪ್ಟೆಂಬರ್‌ 3ರಂದು ಮತ್ತೆ ಪರಮಾಣು ಬಾಂಬ್‌ ಪರೀಕ್ಷೆ ಮಾಡುವ ಮೂಲಕ ಉತ್ತರ ಕೊರಿಯಾ ಮತ್ತೆ ತನ್ನ ಕಡು ವೈರಿಗಳಾದ ಅಮೆರಿಕ, ಜಪಾನ್‌ ಮತ್ತು ದಕ್ಷಿಣ ಕೊರಿಯಾಗಳನ್ನು ಕೆಣಕಿದೆ. 2006ರಿಂದೀಚೆಗೆ ಅದು ನಡೆಸಿದ ಐದನೇ ಪರಮಾಣು ಪರೀಕ್ಷೆ ಇದು. ಈ ಭಾರಿ ಅದು ಪರೀಕ್ಷೆ ಮಾಡಿದ್ದು ಶಕ್ತಿಶಾಲಿ ಜಲಜನಕ (ಹೈಡ್ರೋಜನ್‌) ಬಾಂಬನ್ನು. ಪುಂಗ್ಯೆ–ರಿ ‍ಪರಮಾಣು ಪರೀಕ್ಷಾ ಸ್ಥಳದ ಬಳಿ 23 ಕಿ.ಮೀ ನೆಲದಾಳದಲ್ಲಿ ಈ ಬಾಂಬ್‌ ಸ್ಫೋಟಿಸಲಾಗಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ, ಆ ಪ್ರದೇಶದಲ್ಲಿ ರಿಕ್ಟರ್‌ ಮಾಪಕದಲ್ಲಿ 6.3ರಷ್ಟು ತೀವ್ರತೆಯ ಭೂಕಂಪನ ಸಂಭವಿಸಿತ್ತು! ಎರಡನೇ ವಿಶ್ವ ಯುದ್ಧದಲ್ಲಿ ಜಪಾನ್‌ ಮೇಲೆ ಅಮೆರಿಕ ಪ್ರಯೋಗಿಸಿದ ಅಣು ಬಾಂಬ್‌ಗಿಂತ ಐದು ಪಟ್ಟು ಹೆಚ್ಚು ಶಕ್ತಿಯನ್ನು ಈ ಬಾಂಬ್‌ ಹೊಂದಿತ್ತು ಎಂದು ಹೇಳಲಾಗಿದೆ.

ಈ ಅಣ್ವಸ್ತ್ರ ಪರೀಕ್ಷೆಯ ಬಗ್ಗೆ ವಿಶ್ವ ಸಂಸ್ಥೆ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ. ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್‌ ಮಾತ್ರ ಅಲ್ಲದೇ, ಉತ್ತರ ಕೊರಿಯಾದ ಆಪ್ತ ಮಿತ್ರ ಚೀನಾ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಯುದ್ಧೋತ್ಸಾಹಿ ಕಿಮ್‌
ಕಿಮ್‌ ಜಾಂಗ್‌–ಉನ್‌ ಅವರು 2011ರ ಡಿಸೆಂಬರ್‌ನಲ್ಲಿ ದೇಶದ ಆಡಳಿತ ಚುಕ್ಕಾಣಿ ಹಿಡಿದ ನಂತರ ಉತ್ತರ ಕೊರಿಯಾ ತನ್ನ ಕ್ಷಿಪಣಿ ಅಭಿವೃದ್ಧಿ ಯೋಜನೆಗೆ ಹೆಚ್ಚಿನ ವೇಗ ನೀಡಿದೆ. ಅವರ ತಂದೆ ಕಿಮ್‌ ಜಾಂಗ್‌–2 ಆಡಳಿತ ಅವಧಿಗೆ ಹೋಲಿಸಿದರೆ, ಈಗ ಕ್ಷಿಪಣಿ ಪರೀಕ್ಷೆಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. 2016ರಲ್ಲಿ ಹಲವು ಕ್ಷಿಪಣಿ ಪರೀಕ್ಷೆಗಳು ವಿಫಲವಾಗಿದ್ದವು. ಆದರೆ, ಈ ವರ್ಷ ಅದು ನಡೆಸಿದ ಕ್ಷಿಪಣಿ ಪರೀಕ್ಷೆಗಳಲ್ಲಿ ಬಹುತೇಕ ಯಶಸ್ವಿಯಾಗಿವೆ.

ADVERTISEMENT

ಕ್ಷಿಪಣಿ ಪರೀಕ್ಷೆಗಳು, ಶಸ್ತ್ರಾಸ್ತ್ರಗಳ ಅಭಿವೃದ್ಧಿಯ ವಿರುದ್ಧ ವಿಶ್ವಸಂಸ್ಥೆ ಹಾಗೂ ಅಮೆರಿಕ ಸೇರಿದಂತೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ನೀಡುತ್ತಿರುವ ಎಚ್ಚರಿಕೆಗೆ ಕಿಮ್‌ ಒಂದಿಷ್ಟೂ ಅಳುಕಿಲ್ಲ. ಉತ್ತರ ಕೊರಿಯಾದ ವಿರುದ್ಧ ವಿಶ್ವಸಂಸ್ಥೆ ಹಲವು ನಿರ್ಬಂಧಗಳನ್ನು ವಿಧಿಸಿದ್ದರೂ, ಅದು ಒಂದು ಹೆಜ್ಜೆಯನ್ನೂ ಹಿಂದಿಟ್ಟಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಕಿಮ್‌ ಜಾಂಗ್‌–ಉನ್‌ ಅವರು ಹಲವು ಬಾರಿ ಪರಸ್ಪರ ಪರಮಾಣು ದಾಳಿ ಮಾಡುವ ಬೆದರಿಕೆ ಒಡ್ಡಿರುವುದು ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.

72 ವರ್ಷಗಳ ಸಂಘರ್ಷ
ಎರಡನೇ ವಿಶ್ವಯುದ್ಧದ ಅಂತ್ಯದವರೆಗೂ ಜಪಾನ್‌ನ ಅಧೀನದಲ್ಲಿ ಕೊರಿಯಾ ಇತ್ತು. 1945ರಲ್ಲಿ ಅಮೆರಿಕಕ್ಕೆ ಜಪಾನ್ ಶರಣಾದ ಬಳಿಕ ಕೊರಿಯಾವನ್ನು ದಕ್ಷಿಣದಿಂದ ಅಮೆರಿಕ, ಉತ್ತರದಿಂದ ಸೋವಿಯತ್ ಆಕ್ರಮಿಸಿಕೊಂಡವು. ಸೋವಿಯತ್ ಅಧೀನದಲ್ಲಿದ್ದ ಪ್ರದೇಶ ಉತ್ತರ ಕೊರಿಯಾ ಎಂದೂ ಅಮೆರಿಕದ ಅಧೀನದ ಪ್ರದೇಶ ದಕ್ಷಿಣ ಕೊರಿಯಾ ಎಂದು ಗುರುತಿಸಿಕೊಂಡವು.

‌1945ರಲ್ಲಿ ಈ ಎರಡೂ ದೇಶಗಳ ಮಧ್ಯೆ ಯುದ್ಧ ನಡೆದಿತ್ತು. ಚೀನಾದ ಬೆಂಬಲ ಪಡೆದು ಉತ್ತರ ಕೊರಿಯಾ ನಡೆಸಿದ್ದ ಆ ಯುದ್ಧದಲ್ಲಿ 25 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಅಂದು ಆರಂಭಗೊಂಡ ಸಂಘರ್ಷ ಈಗಿನವರೆಗೂ ಮುಂದುವರಿದಿದೆ. ದಕ್ಷಿಣ ಕೊರಿಯಾದ ನೆರವಿಗೆ ಅಮೆರಿಕ ಮತ್ತು ಜಪಾನ್‌ಗಳು ನಿಂತಿರುವುದರಿಂದ ಅವುಗಳ ಮೇಲೆ ಉತ್ತರ ಕೊರಿಯಾಕ್ಕೆ ಕೋಪ. ಹಾಗಾಗಿ, ಅದು ನಡೆಸುತ್ತಿರುವ ಕ್ಷಿಪಣಿ ಪರೀಕ್ಷೆಗಳೆಲ್ಲವೂ ದಕ್ಷಿಣ ಕೊರಿಯಾದ ಜೊತೆಗೆ ಅಮೆರಿಕ ಮತ್ತು ಜಪಾನ್‌ಗಳನ್ನೂ ಗುರಿಯಾಗಿಸಿಕೊಂಡಿವೆ. ಇತ್ತೀಚೆಗೆ ಅಮೆರಿಕದ ವಿವಿಧ ನಗರಗಳನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿಗಳ ‍(ಐಸಿಬಿಎಂ) ಪರೀಕ್ಷೆಗೆ ಹೆಚ್ಚು ಒತ್ತು ನೀಡುತ್ತಿದೆ.

ಕ್ಷಿಪಣಿಗಳು, ಅಣ್ವಸ್ತ್ರಗಳು...
ಉತ್ತರ ಕೊರಿಯಾದ ಬಳಿ ಎಷ್ಟು ಕ್ಷಿಪಣಿ, ಲಾಂಚರ್‌, ಅಣ್ವಸ್ತ್ರ ಸಿಡಿತಲೆಗಳಿವೆ ಎಂಬುದರ ಬಗ್ಗೆ ನಿಖರ ಮಾಹಿತಿ ಎಲ್ಲೂ ಇಲ್ಲ. ಅಮೆರಿಕದ ರಕ್ಷಣಾ ಇಲಾಖೆಯ ಅಂದಾಜಿನ ಪ್ರಕಾರ, ಉತ್ತರ ಕೊರಿಯಾ ಬಳಿ 200 ಲಾಂಚರ್‌ಗಳು (ಸಣ್ಣ, ಮಧ್ಯಮ ಕ್ಷಿಪಣಿ ಉಡಾಯಿಸಲು ಬಳಸಲಾಗುತ್ತದೆ), 13ರಿಂದ 21 ಕ್ಷಿಪಣಿಗಳು ಮತ್ತು ಕನಿಷ್ಠ ನಾಲ್ಕು ಅಣ್ವಸ್ತ್ರ ಸಿಡಿತಲೆಗಳಿವೆ. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್‌ ಪೀಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಪ್ರಕಾರ ಉತ್ತರ ಕೊರಿಯಾ ಬಳಿ 20 ಅಣ್ವಸ್ತ್ರ ಸಿಡಿ ತಲೆಗಳಿವೆ.

ಕಿಮ್‌ ಬಳಿ ಇರುವ ಶಸ್ತ್ರಾಸ್ತ್ರಗಳ ಸಾಮರ್ಥ್ಯ ಈ ಹಿಂದೆ ಊಹಿಸಿದ್ದಕ್ಕಿಂತಲೂ ಹೆಚ್ಚಿದೆ ಎಂದು ರಕ್ಷಣಾ ತಜ್ಞರು ಹೇಳಿದ್ದಾರೆ. ಪರಮಾಣು ಅಸ್ತ್ರಗಳ ತಂತ್ರಜ್ಞಾನನ್ನು ಅದು ಸ್ವತಃ ಅಭಿವೃದ್ಧಿ ಪಡಿಸುತ್ತಿದೆ ಎಂದು ಹೇಳಲಾಗುತ್ತಿದೆ. ಉತ್ತರ ಕೊರಿಯಾ ಬಳಿ ಪರಮಾಣು ಬಾಂಬ್‌ಗಳಿರಬಹುದು ಎಂದು ಎಲ್ಲರೂ ಒಪ್ಪುತ್ತಾರೆ. ಆದರೆ, ಕ್ಷಿಪಣಿಗಳ ತುದಿಯಲ್ಲಿ ಅಳವಡಿಸುವಷ್ಟರ ಮಟ್ಟಿಗೆ ಬಾಂಬ್‌ನ ಗಾತ್ರವನ್ನು ಕುಗ್ಗಿಸುವ ತಂತ್ರಜ್ಞಾನ ಅದರ ಬಳಿ ಇರುವುದರ ಬಗ್ಗೆ ತಜ್ಞರಿಗೆ ಸಂಶಯ ಇದೆ.

*
ಗ್ವಾಮ್‌ ಗುರಿ...
ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ಕಿಮ್ ಜಾಂಗ್‌ ನಡುವಣ ವಾಕ್ಸಮರದ ಸಂದರ್ಭದಲ್ಲಿ ‘ಗ್ವಾಮ್‌’ ಎಂಬ ಹೆಸರು ಪದೇ ಪದೇ ಕೇಳಿ ಬಂದಿತ್ತು. ಗ್ವಾಮ್‌ ಎಂಬುದು ಪೆಸಿಫಿಕ್‌ ಸಾಗರದಲ್ಲಿರುವ ಪುಟ್ಟ ದ್ವೀಪ. ಇದು ಅಮೆರಿಕದ ನಿಯಂತ್ರಣದಲ್ಲಿದೆ. ಆಗಸ್ಟ್‌ 29ರಂದು ಉತ್ತರ ಕೊರಿಯಾ ಪರೀಕ್ಷಿಸಿದ್ದ ಕ್ಷಿಪಣಿಯು ಜಪಾನ್‌ ಮೂಲಕ ಹಾದು 2,720 ಕಿ.ಮೀ ದೂರದಲ್ಲಿ ಸಾಗರದಲ್ಲಿ ಬಿತ್ತು. ಅಲ್ಲಿಂದ ಸ್ವಲ್ಪ ದೂರದಲ್ಲೇ ಈ ದ್ವೀಪ ಇದೆ. ಉತ್ತರ ಕೊರಿಯಾ ನಡೆಸಿದ್ದ ಪರೀಕ್ಷೆಯ ಗುರಿ ಗ್ವಾಮ್‌ ಆಗಿತ್ತು ಎಂದು ಹೇಳಲಾಗಿದೆ.

ಏಷ್ಯಾಕ್ಕೆ ಅತ್ಯಂತ ಹತ್ತಿರದಲ್ಲಿರುವ, 336 ಚದರ ಕಿ.ಮೀ ವಿಸ್ತಾರವಾದ ಗ್ವಾಮ್‌ನಲ್ಲಿ ಅಮೆರಿಕದ ಸೇನಾ ನೆಲೆ ಇದೆ. ಹಾಗಾಗಿ, ಅದರ ರಕ್ಷಣಾ ಕಾರ್ಯತಂತ್ರದಲ್ಲಿ ಈ ದ್ವೀಪ ಮಹತ್ವದ ಪಾತ್ರ ವಹಿಸುತ್ತದೆ. ಪಶ್ಚಿಮ ಪೆಸಿಫಿಕ್‌ ಸಾಗರದಲ್ಲಿರುವ ಈ ಪುಟ್ಟ ದ್ವೀಪವು ಉತ್ತರ ಕೊರಿಯಾದ ದಕ್ಷಿಣಕ್ಕೆ ಸುಮಾರು 3,360 ಕಿ.ಮೀ ದೂರದಲ್ಲಿದೆ. ಇಲ್ಲಿನ ಜನ ಸಂಖ್ಯೆ 1.62 ಲಕ್ಷ.

ಅಮೆರಿಕವು 7,000 ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಿದೆ. ದ್ವೀಪದ ದಕ್ಷಿಣ ಭಾಗದಲ್ಲಿ ನೌಕಾ ನೆಲೆ ಮತ್ತು ಕರಾವಳಿ ಕಾವಲು ಪಡೆದ ಪ್ರಮುಖ ಕೇಂದ್ರವಿದೆ. ಉತ್ತರದಲ್ಲಿ ವಾಯುಪಡೆಯ ನೆಲೆ ಇದೆ. ಈಗಾಗಲೇ ದ್ವೀಪದ ಶೇ 30ರಷ್ಟು ಭಾಗವನ್ನು  ಅದು ಸೇನೆಗಾಗಿ ಬಳಸುತ್ತಿದೆ. ಸೇನಾ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಿಸಲು ಅದು ಯತ್ನಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.