ADVERTISEMENT

ಉತ್ತರ, ಮಧ್ಯ ಭಾರತದಲ್ಲಿ ಮುಂಗಾರು ಪ್ರಬಲ

ಅಮೆರಿಕದ ಮೆಸಾಚುಸೆಟ್ಸ್ ತಂತ್ರಜ್ಞಾನ ಸಂಶೋಧಕರ ಅಧ್ಯಯನ ವರದಿ ಪ್ರತಿಪಾದನೆ

ಪಿಟಿಐ
Published 27 ಜುಲೈ 2017, 19:30 IST
Last Updated 27 ಜುಲೈ 2017, 19:30 IST
ಉತ್ತರ, ಮಧ್ಯ ಭಾರತದಲ್ಲಿ ಮುಂಗಾರು ಪ್ರಬಲ
ಉತ್ತರ, ಮಧ್ಯ ಭಾರತದಲ್ಲಿ ಮುಂಗಾರು ಪ್ರಬಲ   

ವಾಷಿಂಗ್ಟನ್ : ಉತ್ತರ ಮತ್ತು ಮಧ್ಯ ಭಾರತದ ಭಾಗಗಳಲ್ಲಿ ಹದಿನೈದು ವರ್ಷಗಳಲ್ಲಿ ಮುಂಗಾರು ಹೆಚ್ಚು ಪ್ರಬಲವಾಗಿದೆ ಎಂದು ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸಂಶೋಧಕರು ಹೇಳಿದ್ದಾರೆ.

ಕಳೆದ ದಶಕದಲ್ಲಿ ಈ ಭಾಗದಲ್ಲಿ ಉಷ್ಣಾಂಶ ಹೆಚ್ಚುತ್ತಿದೆ ಎಂಬ ಗ್ರಹಿಕೆಗೆ ತದ್ವಿರುದ್ಧವಾಗಿ ಈ ಹೇಳಿಕೆ ಬಂದಿದೆ.

‘ಭಾರತದ ಮುಂಗಾರು’ ವಿಷಯದ ಮೇಲೆ ಎಂಐಟಿಯ ಹಿರಿಯ ಸಂಶೋಧನಾ ವಿಜ್ಞಾನಿ ಚಿಯೆನ್ ವಾಂಗ್ ಮತ್ತು ಸಂಶೋಧಕ ಕ್ವಿನ್‌ಜಿಯಾನ್ ಜಿನ್ ಅವರು ನಡೆಸಿದ ಜಂಟಿ ಅಧ್ಯಯನದ ವರದಿಯು ‘ನೇಚರ್ ಕ್ಲೈಮೇಟ್ ಚೇಂಜ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ADVERTISEMENT

‘ಭಾರತದ ಮುಂಗಾರಿನ ಕುರಿತು ಎಲ್ಲವನ್ನೂ ತಿಳಿದಿದ್ದೇವೆ ಎಂದು ಭಾವಿಸಿದ್ದೇವೆ. ಆದರೆ, ಮುಂಗಾರಿನ ಕುರಿತು ಹೆಚ್ಚೇನೂ ತಿಳಿದುಕೊಂಡಿಲ್ಲ ಎಂಬುದನ್ನು ನಮ್ಮ ಅಧ್ಯಯನದಿಂದ ಕಂಡುಕೊಂಡಿದ್ದೇವೆ. 2002ರ ನಂತರ ಈ ಪ್ರದೇಶಗಳಲ್ಲಿ ಮುಂಗಾರು ಮಳೆ ಹೆಚ್ಚಾಗಿದೆ’ ಎಂದು ವಾಂಗ್ ಹೇಳಿದ್ದಾರೆ.

‘ಈ ಅವಧಿಯಲ್ಲಿ ಭಾರತವು ಪ್ರತಿ ವರ್ಷ 0.1ರಿಂದ 1 ಡಿಗ್ರಿ ಸೆಲ್ಸಿಯಸ್ ವರೆಗೆ ಉಷ್ಣಾಂಶ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಮಳೆ ಹೆಚ್ಚುವಲ್ಲಿ ಇದರ ಪ್ರಭಾವವೂ ಇರಬಹುದು’ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

ಅಲ್ಲದೆ, ‘ಹಿಂದೂ ಮಹಾಸಾಗರದಲ್ಲಿ ಉಷ್ಣಾಂಶ ಹೆಚ್ಚಳವು ಗಮನಾರ್ಹವಾಗಿ ಇಳಿದಿದೆ. ಇಂತಹ ನೈಸರ್ಗಿಕ ಅಸ್ಥಿರತೆ ಮತ್ತು ಮಾನವನಿಂದ ಉಂಟಾದ ಪರಿಣಾಮದಿಂದಾಗಿ ಈ ರೀತಿ ಆಗಿರುವ ಸಾಧ್ಯತೆ ಇದೆ. ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ನಡೆಯುತ್ತಿದೆ’ ಎನ್ನಲಾಗಿದೆ.

1950ರಿಂದ ಈಗಿನವರೆಗಿನ ನಿತ್ಯದ ಮಳೆ ಪ್ರಮಾಣವನ್ನು ಸಂಶೋಧಕರು ವಿಶ್ಲೇಷಿಸಿದ್ದಾರೆ. 1950ರಿಂದ 2002ರ ವರೆಗೆ ಪ್ರತಿ ವರ್ಷ ಮುಂಗಾರು ಅವಧಿಯಲ್ಲಿ 0.18 ಮಿ.ಮೀ ಮಳೆ ಕಡಿಮೆ ಆಗುತ್ತಾ ಬಂದಿದ್ದನ್ನು ಅವರು ಕಂಡುಕೊಂಡಿದ್ದಾರೆ. ಆದರೆ, 2002ರ ನಂತರ ಪ್ರತಿನಿತ್ಯ ಸರಾಸರಿ 1.34 ಮಿ.ಮೀ ಮಳೆ ಹೆಚ್ಚುತ್ತಿದೆ.

***

ಮೋಡ ಕಡಿಮೆ
ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮೋಡದ ಪ್ರಮಾಣವೂ ಕಡಿಮೆ ಆಗುತ್ತಿರುವುದನ್ನು ಗಮನಿಸಿದ ಸಂಶೋಧಕರು, ಇದರಿಂದಾಗಿ ಸೂರ್ಯನ ಕಿರಣ ನೇರವಾಗಿ ಭೂಮಿಗೆ ಬರುತ್ತದೆ ಮತ್ತು ಅದು ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.