ADVERTISEMENT

ಉಬರ್‌ನಿಂದ ಭಾರತೀಯ ಅಧಿಕಾರಿ ವಜಾ

ಪಿಟಿಐ
Published 28 ಫೆಬ್ರುವರಿ 2017, 19:30 IST
Last Updated 28 ಫೆಬ್ರುವರಿ 2017, 19:30 IST
ನ್ಯೂಯಾರ್ಕ್‌:  ಲೈಂಗಿಕ ಕಿರುಕುಳ ನೀಡಿದ್ದ ಹಳೆಯ ಆರೋಪಕ್ಕೆ ಸಂಬಂಧಿಸಿದಂತೆ ಭಾರತೀಯ ಮೂಲದ ಅಧಿಕಾರಿ ಅಮಿತ್‌್ ಸಿಂಘಾಲ್‌  ಎಂಬುವರನ್ನು ಉಬರ್‌ ಕಂಪೆನಿ ಸೇವೆಯಿಂದ ವಜಾ ಮಾಡಿದೆ. 
 
ಲೈಂಗಿಕ ಕಿರುಕುಳ ದೂರು ಎದುರಿಸಿದ ಕಾರಣ ಅಮಿತ್‌್್ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಗೂಗಲ್‌ ಕಂಪೆನಿ ತೊರೆದಿದ್ದರು. ಆದರೆ ಉಬರ್‌ ಸೇರುವಾಗ ಅವರು ಈ ಮಾಹಿತಿಯನ್ನು ಬಚ್ಚಿಟ್ಟಿದ್ದರು. ಮಾಹಿತಿ ತಿಳಿದ ಬಳಿಕ ಹುದ್ದೆಯನ್ನು ತ್ಯಜಿಸುವಂತೆ ಸಂಸ್ಥೆ ಅಮಿತ್‌ಗೆ ಸೂಚಿಸಿದೆ.
 
ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಉಬರ್‌ ಸಿಇಒ ಟ್ರೆವಿಸ್‌ ಕೆಲಾನಿಕ್‌ ಅವರು ಅಮಿತ್‌ ಅವರಿಗೆ ಸೋಮವಾರ ಸೂಚಿಸಿದ್ದರು ಎಂದು ತಂತ್ರಜ್ಞಾನ ಕುರಿತು ಸುದ್ದಿ ವರದಿ ಮಾಡುವ ರಿಕೋಡ್‌ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿದೆ.
 
ಗೂಗಲ್‌ನಲ್ಲಿ 15 ವರ್ಷ ಕಾಲ ಉದ್ಯೋಗಿಯಾಗಿದ್ದ ಅಮಿತ್‌, ಜನವರಿಯಲ್ಲಿ ಉಬರ್‌ ಕಂಪೆನಿಗೆ ಹಿರಿಯ  ಉಪಾಧ್ಯಕ್ಷರಾಗಿ ಸೇರ್ಪಡೆಯಾಗಿದ್ದರು. 
 
ಉದ್ಯೋಗಿಯೊಬ್ಬರಿಗೆ ಸಿಂಘಾಲ್‌ ಲೈಂಗಿಕ ಕಿರುಕುಳ ನೀಡಿದ್ದರು ಎನ್ನುವ ಆರೋಪ ಸತ್ಯ ಎಂದು ಗೂಗಲ್‌್್ ಕಂಪೆನಿ ತನ್ನ ಆಂತರಿಕ ತನಿಖೆಯಲ್ಲಿ ಉಲ್ಲೇಖಿಸಿತ್ತು ಎಂದು ವೆಬ್‌ಸೈಟ್‌ನಲ್ಲಿ ವರದಿಯಾಗಿದೆ.
 
‘ಸಿಲಿಕಾನ್‌ ವ್ಯಾಲಿಯಲ್ಲಿ ಹೆಸರು ಗಳಿಸಿದ್ದ’ ಎಂಜಿನಿಯರ್‌ ಸಿಂಘಾಲ್‌ ಅವರು ಆ ವೇಳೆ ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದರು ಎಂದೂ ವರದಿ ಹೇಳಿದೆ.
 
ಗೂಗಲ್‌ ಕಂಪೆನಿ ಹಾಗೂ ಅಮಿತ್‌ ಅವರ ನಡುವೆ ನಡೆದ ಹಲವು ಘಟನೆಗಳ ಕುರಿತು ರಿಕೋಡ್‌ ವೆಬ್‌ಸೈಟ್‌  ಉಬರ್‌ ಕಂಪೆನಿಗೆ ಮಾಹಿತಿ ನೀಡಿತ್ತು. ಇದರಿಂದಾಗಿಯೇ ಉಬರ್‌ಗೆ ಅಮಿತ್‌್್ ಮೇಲಿದ್ದ ಹಳೆಯ ಆರೋಪದ ಬಗ್ಗೆ ತಿಳಿದುಬಂದಿದ್ದು ಎಂದು ಕಂಪೆನಿ ಮೂಲಗಳು ತಿಳಿಸಿವೆ. 
 
‘ಲೈಂಗಿಕ ಕಿರುಕುಳ ಹೀನ ಅಪರಾಧ. ನನ್ನ 20ವರ್ಷಗಳ ವೃತ್ತಿ ಜೀವನದಲ್ಲಿ ಎಂದೂ ಅಂಥ ಕೃತ್ಯ ಮಾಡಿಲ್ಲ. ಗೂಗಲ್‌ ತ್ಯಜಿಸುವುದು ನನ್ನದೇ ನಿರ್ಧಾರ ವಾಗಿತ್ತು’ ಎಂದು ಅಮಿತ್‌ ಸಿಂಘಾಲ್ ಅವರು ವೆಬ್‌ಸೈಟ್‌ಗೆ ಬರೆದ ಇ–ಮೇಲ್‌ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.