ADVERTISEMENT

ಐಎಸ್‌ಐ ನಿಯಂತ್ರಣದಲ್ಲಿ ಲಾಡೆನ್‌ ಅಡಗುತಾಣ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 19:30 IST
Last Updated 28 ಏಪ್ರಿಲ್ 2016, 19:30 IST

ವಾಷಿಂಗ್ಟನ್‌(ಪಿಟಿಐ): ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಅಲ್‌ಕೈದಾ ನಾಯಕ ಒಸಾಮ ಬಿನ್‌  ಲಾಡೆನ್‌ ತಂಗಿದ್ದ ಅಡಗುತಾಣ ಐಎಸ್‌ಐ ನಿಯಂತ್ರಣದಲ್ಲಿತ್ತು ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ಹೊಸ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ತನಿಖಾ ವರದಿಗಾರ ಸಿಮೌರ್‌ ಹೆರ್ಷ್‌ ಅವರ ‘ದಿ ಕಿಲ್ಲಿಂಗ್‌ ಆಫ್‌ ಒಸಾಮ ಬಿನ್‌ ಲಾಡೆನ್‌’ ಕೃತಿಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಲಾಡೆನ್‌ಗೆ ನೆರವು ದೊರೆತ ಅಂಶಗಳನ್ನು ಪ್ರಮುಖವಾಗಿ ತಿಳಿಸಲಾಗಿದೆ.

ಪಾಕಿಸ್ತಾನ ಸೇನೆಯ ವೈದ್ಯ ಹಾಗೂ ಮೇಜರ್‌ ಅಮಿರ್‌ ಅಜೀಜ್‌ ಎನ್ನುವವರು ಆತನಿಗೆ ಚಿಕಿತ್ಸೆ ನೀಡುತ್ತಿದ್ದರು. ಈ ವೈದ್ಯರು ಲಾಡೆನ್‌ನ ಅಡಗುತಾಣದ ಸಮೀಪದಲ್ಲೇ ವಾಸಿಸುತ್ತಿದ್ದರು ಎನ್ನುವುದನ್ನು ಉಲ್ಲೇಖಿಸಲಾಗಿದೆ.

2006ರಲ್ಲಿ ಐಎಸ್‌ಐ ಲಾಡೆನ್‌ನನ್ನು ಬಂಧಿಸಿತ್ತು. ಆ ಸಂದರ್ಭದಲ್ಲಿ ಆತ ಅನಾರೋಗ್ಯದಿಂದ ಬಳಲುತ್ತಿದ್ದರಿಂದ ಚಿಕಿತ್ಸೆ ನೀಡುವಂತೆ ಅಮಿರ್‌ ಅಜೀಜ್‌ ಅವರಿಗೆ ಐಎಸ್‌ಐ ಸೂಚಿಸಿತ್ತು ಎಂದು ತಿಳಿಸಿದ್ದಾರೆ. ಪಾಕಿಸ್ತಾನ ಸೇನೆ ನಿವೃತ್ತ ಅಧಿಕಾರಿಯೊಬ್ಬರ ಜತೆ ನಡೆಸಿದ ಮಾತುಕತೆ ಆಧಾರದ ಮೇಲೆ ಈ ಅಂಶಗಳನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ ಎಂದು ಹೆರ್ಷ್‌ ತಿಳಿಸಿದ್ದಾರೆ.

ಲಾಡೆನ್‌ ಬಗ್ಗೆ ಸಂಪೂರ್ಣ ಮಾಹಿತಿ ಗೊತ್ತಿದ್ದರೂ ಪಾಕಿಸ್ತಾನದ ಸೇನೆ ಹಾಗೂ ಐಎಸ್‌ಐ ಮುಖ್ಯಸ್ಥರು ಮತ್ತು ಇತರ ಎಲ್ಲ  ಮುಖಂಡರು ಅಮೆರಿಕಗೆ ಯಾವುದೇ ಸುಳಿವು ನೀಡಲಿಲ್ಲ. ಲಾಡೆನ್‌ ಬಗ್ಗೆ ಮಾಹಿತಿಯೇ ಇಲ್ಲ ಎಂದು ಪದೇ ಪದೇ ತಿಳಿಸಿದ್ದರು.

ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ತಾಲಿಬಾನ್‌ ನಾಯಕರ ಜತೆ ಸಂಪರ್ಕ ಹೊಂದುವುದು ಐಎಸ್‌ಐಗೆ ಅಗತ್ಯ ಎನ್ನುವುದನ್ನು ಅಮೆರಿಕ ಅರಿತುಕೊಂಡಿತ್ತು. ಕಾಶ್ಮೀರ ವಿಷಯದಲ್ಲಿ  ಭಾರತದ ವಿರುದ್ಧ ನಡೆಯುವ ಸಂಘರ್ಷದಲ್ಲಿ ತಾಲಿಬಾನ್‌ ‘ಜಿಹಾದಿ’ ಪಡೆಯ ರೂಪದಲ್ಲಿ ಪಾಕಿಸ್ತಾನಕ್ಕೆ ನೆರವು ನೀಡಲಿದೆ ಎನ್ನುವ ಅಭಿಪ್ರಾಯವೂ ಮೂಡಿತ್ತು ಎನ್ನುವ ಅಂಶಗಳನ್ನು ದಾಖಲಿಸಲಾಗಿದೆ.

ಅಮೆರಿಕದ ಬೇಹುಗಾರಿಕೆ ಇಲಾಖೆ ಮತ್ತು ಇತರ ಮೂಲಗಳಿಂದ ಸಂಗ್ರಹಿಸಿದ್ದ ಮಾಹಿತಿಯನ್ನು ಐಎಸ್‌ಐ ಮುಖ್ಯಸ್ಥ ಅಸಾದ್‌ ದುರ್ರಾಣಿ ಸಹ ಪರಿಶೀಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.