ADVERTISEMENT

‘ಐಕ್ಯಾನ್‌’ಗೆ ಶಾಂತಿ ನೊಬೆಲ್‌ ಪುರಸ್ಕಾರ

ಏಜೆನ್ಸೀಸ್
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST
ಶಾಂತಿ ನೊಬೆಲ್‌ ಪ್ರಶಸ್ತಿ ಘೋಷಣೆಯಾದ ಬಳಿಕ ಐಕ್ಯಾನ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಬಯಾಟ್ರಿಸ್‌ ಫಿನ್‌ ಮತ್ತು ಸಂಯೋಜಕ ಡೇನಿಯಲ್‌ ಹಾಗ್‌ಸ್ಟನ್‌ ಪತ್ರಿಕಾಗೋಷ್ಠಿ ನಡೆಸಿ ಸಂತಸ ಹಂಚಿಕೊಂಡರು. ಎಎಫ್‌ಪಿ ಚಿತ್ರ
ಶಾಂತಿ ನೊಬೆಲ್‌ ಪ್ರಶಸ್ತಿ ಘೋಷಣೆಯಾದ ಬಳಿಕ ಐಕ್ಯಾನ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಬಯಾಟ್ರಿಸ್‌ ಫಿನ್‌ ಮತ್ತು ಸಂಯೋಜಕ ಡೇನಿಯಲ್‌ ಹಾಗ್‌ಸ್ಟನ್‌ ಪತ್ರಿಕಾಗೋಷ್ಠಿ ನಡೆಸಿ ಸಂತಸ ಹಂಚಿಕೊಂಡರು. ಎಎಫ್‌ಪಿ ಚಿತ್ರ   

ಓಸ್ಲೊ/ಜಿನೀವಾ : ಅಣು ಬಾಂಬ್‌ ಬಳಕೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿರುವ ನೊಬೆಲ್‌ ಪ್ರಶಸ್ತಿ ಸಮಿತಿಯು, ಶಾಂತಿ ಸ್ಥಾಪನೆಗಾಗಿ ನಡೆಸಿದ ಹೋರಾಟಕ್ಕೆ ನೀಡಲಾಗುವ ನೊಬೆಲ್‌ ಪುರಸ್ಕಾರವನ್ನು ಜಗತ್ತನ್ನು ಅಣ್ವಸ್ತ್ರಮುಕ್ತಗೊಳಿಸಲು ಶ್ರಮಿಸುತ್ತಿರುವ ಸಂಘಟನೆ ‘ಐಕ್ಯಾನ್‌’ಗೆ ನೀಡುವುದಾಗಿ ಘೋಷಿಸಿದೆ.

ಐಕ್ಯಾನ್‌ ಎಂದರೆ ಇಂಟರ್‌ನ್ಯಾಷನಲ್‌ ಕ್ಯಾಂಪೇನ್‌ ಟು ಅಬಾಲಿಷ್‌ ನ್ಯೂಕ್ಲಿಯರ್ ವೆಪನ್ಸ್‌ (ಅಣ್ವಸ್ತ್ರ ನಿರ್ಮೂಲನೆಗಾಗಿ ಅಂತರರಾಷ್ಟ್ರೀಯ ಅಭಿಯಾನ) (ಐಕ್ಯಾನ್‌).

ಇದು ಅಷ್ಟೊಂದು ಪ್ರಸಿದ್ಧ ಸಂಘಟನೆ ಅಲ್ಲ. ಸಂಘಟನೆಯೇ ಹೇಳಿಕೊಳ್ಳುವಂತೆ, ಇದು ತಳಮಟ್ಟದಲ್ಲಿ ಕೆಲಸ ಮಾಡುವ ಸರ್ಕಾರೇತರ ಸಂಘಟನೆಗಳ ಕೂಟ. ಈಗ ನೂರಕ್ಕೂ ಹೆಚ್ಚು ದೇಶಗಳಲ್ಲಿ ಕೆಲಸ ಮಾಡುತ್ತಿದೆ. 2007ರಲ್ಲಿ ವಿಯೆನ್ನಾದಲ್ಲಿ ಅಧಿಕೃತವಾಗಿ ತನ್ನ ಕಾರ್ಯಚಟುವಟಿಕೆಯನ್ನು ಐಕ್ಯಾನ್‌ ಆರಂಭಿಸಿತು.

ADVERTISEMENT

ಅಣ್ವಸ್ತ್ರ ಬಳಕೆಯ ಅಪಾಯ ಬಹಳ ಹೆಚ್ಚಾಗಿರುವ ಜಗತ್ತಿನಲ್ಲಿ ನಾವು ವಾಸಿಸುತ್ತಿದ್ದೇವೆ ಎಂದು ಪ್ರಶಸ್ತಿ ಸಮಿತಿಯ ಪದಾಧಿಕಾರಿ ಬೆರಿಟ್‌ ರೀಸ್‌ ಆ್ಯಂಡರ್ಸನ್‌ ಹೇಳಿದ್ದಾರೆ.

ಅಣ್ವಸ್ತ್ರ ನಿಷೇಧಕ್ಕಾಗಿ ವಿಶ್ವಸಂಸ್ಥೆಯು ರೂಪಿಸಿದ ಒಪ್ಪಂದಕ್ಕೆ ಜುಲೈಯಲ್ಲಿ 122 ದೇಶಗಳು ಸಹಿ ಮಾಡಿವೆ. ಆದರೆ ಈ ಒಪ್ಪಂದಕ್ಕೆ ಅಣ್ವಸ್ತ್ರ ಹೊಂದಿರುವ ದೇಶಗಳಾದ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್‌, ಫ್ರಾನ್ಸ್‌, ಭಾರತ, ಇಸ್ರೇಲ್‌ ಮತ್ತು ಪಾಕಿಸ್ತಾನ ಸಹಿ ಮಾಡಿಲ್ಲ.

‘ಜಾಗತಿಕ ಮಟ್ಟದಲ್ಲಿ ಅತಿಯಾದ ಉದ್ವಿಗ್ನತೆ ಇದೆ. ಭೀತಿ ಸೃಷ್ಟಿಸುವ ಬೆದರಿಕೆ ಮಾತುಗಳು ಬಹಳ ಸುಲಭವಾಗಿ, ನಿಷ್ಕರುಣೆಯಿಂದ ಊಹಿಸಲಾಗದಂತಹ ಕ್ರೌರ್ಯಕ್ಕೆ ನಮ್ಮನ್ನು ತಳ್ಳಬಹುದು. ಅಣ್ವಸ್ತ್ರ ಯುದ್ಧದ ಭೀತಿ ಮತ್ತೆ ಗಾಢವಾಗಿ ಕಾಡುತ್ತಿದೆ. ಅಣ್ವಸ್ತ್ರಗಳಿಗೆ ತಮ್ಮ ವಿರೋಧವನ್ನು ದೇಶಗಳು ದೃಢವಾಗಿ ಸಾರಬೇಕಿರುವ ಸಂದರ್ಭ ಇದ್ದರೆ ಅದು ಈಗಲೇ’ ಎಂದು ಐಕ್ಯಾನ್‌ ಹೇಳಿದೆ.

ಅಮೆರಿಕ ಮತ್ತು ಉತ್ತರ ಕೊರಿಯಾ ನಡುವೆ ಅಣ್ವಸ್ತ್ರ ಬಳಕೆಯ ಬೆದರಿಕೆಗಳು ವಿನಿಮಯ ಆಗುತ್ತಿದೆ. ಇರಾನ್‌ ಜತೆಗೆ ಅಮೆರಿಕ ಮತ್ತು ಇತರ ದೇಶಗಳು 2015ರಲ್ಲಿ ಮಾಡಿಕೊಂಡ ಅಣ್ವಸ್ತ್ರ ತಯಾರಿಕೆ ನಿಷೇಧ ಒಪ್ಪಂದ ಅನಿಶ್ಚಿತವಾಗಿದೆ. ಇಂತಹ ಸಂದರ್ಭದಲ್ಲಿ ಅಣು ನಿಶ್ಶಸ್ತ್ರೀಕರಣಕ್ಕೆ ಬಲ ತುಂಬುವುದಕ್ಕಾಗಿ ಈ ಬಾರಿಯ ನೊಬೆಲ್‌ ಶಾಂತಿ ಪ್ರಶಸ್ತಿ ಪ್ರಯತ್ನಿಸಿದೆ. ‌

ಅಚ್ಚರಿ: ಹೆಚ್ಚು ಸದ್ದು ಗದ್ದಲವಿಲ್ಲದೆ ಕೆಲಸ ಮಾಡುತ್ತಿರುವ ಐಕ್ಯಾನ್‌ಗೆ ಪ್ರಶಸ್ತಿ ಘೋಷಿಸುವ ಮೂಲಕ ನೊಬೆಲ್‌ ಪ್ರಶಸ್ತಿಯು ಅಚ್ಚರಿ ಮೂಡಿಸಿದೆ. ಅಣ್ವಸ್ತ್ರ ತಯಾರಿಕೆ ತಡೆಯುವುದಕ್ಕೆ ಇರಾನ್‌ ಜತೆಗೆ ಅತ್ಯಂತ ಸಂಕೀರ್ಣ ಒಪ್ಪಂದವನ್ನು ಹಲವು ಸುತ್ತು ಮಾತುಕತೆ ಮತ್ತು ಸಂಧಾನದ ಮೂಲಕ ಮಾಡಲಾಗಿದೆ. ಹಾಗಾಗಿ ಈ ಒಪ್ಪಂದದ ಹಿಂದೆ ಇದ್ದವರಿಗೆ ಈ ಬಾರಿಯ ಶಾಂತಿ ನೊಬೆಲ್‌ ಪುರಸ್ಕಾರ ದೊರೆಯಬಹುದು ಎಂಬ ನಿರೀಕ್ಷೆ ಇತ್ತು.

‘ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬುದಕ್ಕೆ ನೊಬೆಲ್‌ ಸಮಿತಿಯು ತನ್ನದೇ ಆದ ಮಾನದಂಡಗಳನ್ನು ಹೊಂದಿದೆ. ಹಾಗಿದ್ದರೂ ಇರಾನ್‌ ಜತೆಗಿನ ಒಪ್ಪಂದ, ಕಾರ್ಯರೂಪಕ್ಕೆ ಬಂದ ದೊಡ್ಡ ಪ್ರಯತ್ನ. ಈ ಒಪ‍್ಪಂದಕ್ಕಾಗಿ ಕೆಲಸ ಮಾಡಿದವರು ಶಾಂತಿ ನೊಬೆಲ್‌ಗೆ ಅರ್ಹರು’ ಎಂದು ಸ್ವೀಡನ್‌ನ ಮಾಜಿ ಪ್ರಧಾನಿ ಕಾರ್ಲ್‌ ಬಿಲ್ಟ್‌ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ತಿರುಗೇಟು ನೀಡುವುದಕ್ಕಾಗಿಯೇ ಈ ಆಯ್ಕೆ ಮಾಡಲಾಗಿದೆ ಎಂಬ ಆರೋಪವನ್ನು ನೊಬೆಲ್‌ ಪ್ರಶಸ್ತಿ ಸಮಿತಿ ಅಲ್ಲಗಳೆದಿದೆ. ಅಣು ನಿಶ್ಶಸ್ತ್ರೀಕರಣದ ಭರವಸೆ ಕೊಟ್ಟ ದೇಶಗಳು ಆ ಭರವಸೆಯನ್ನು ಕಾರ್ಯರೂಪಕ್ಕೆ ತರುವುದನ್ನು ನೆನಪಿಸುವುದಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.