ADVERTISEMENT

ಕಾಶ್ಮೀರ ಕೆದಕಿದ ಪಾಕ್‌ ಸೇನಾ ಮುಖ್ಯಸ್ಥ

ವಿಶ್ವಸಂಸ್ಥೆ ನಿರ್ಣಯ ಅನುಷ್ಠಾನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2014, 19:30 IST
Last Updated 18 ಅಕ್ಟೋಬರ್ 2014, 19:30 IST

ಇಸ್ಲಾಮಾಬಾದ್‌ (ಪಿಟಿಐ): ಕಾಶ್ಮೀರ ವಿವಾದವನ್ನು ಕೆದಕಿ ಭಾರತದ ವಿರುದ್ಧ ಕೆಂಡಕಾರಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್‌ ರಹೀಲ್‌ ಷರೀಫ್‌, ಯಾವುದೇ ಬಾಹ್ಯ ಬೆದರಿಕೆಗಳನ್ನು ಎದುರಿಸಲು ಸೇನೆ ಸರ್ವಸಮರ್ಥವಾಗಿದೆ ಎಂದರು.

ದೇಶದ ಮೇಲೆ ನಡೆಯುವ ಯಾವುದೇ ಅಪ್ರಚೋದಿತ ಆಕ್ರಮಣಕ್ಕೆ ತಕ್ಕ ಜವಾಬು ನೀಡಲಾಗುವುದು ಎಂದರು. ಕಾಕುಲ್‌ನ ಸೇನಾ ಅಕಾಡೆಮಿಯಲ್ಲಿ ನಡೆದ ಸೈನಿಕರ ತರಬೇತಿ ನಿರ್ಗಮನ ಪಥ ಸಂಚಲನ ಕಾರ್ಯ­ಕ್ರಮದಲ್ಲಿ ಮಾತನಾಡಿದ ಅವರು, ಪಾಕ್‌ ಮೇಲೆ ಭಾರತ ಅಪ್ರಚೋದಿತ ದಾಳಿ ನಡೆಸುತ್ತಿದೆ ಎಂದು ಆರೋಪಿಸಿದರು.

ತಮ್ಮ ಭವಿಷ್ಯದ ಬಗ್ಗೆ ತೀರ್ಮಾನ ಕೈಗೊಳ್ಳಲು ಕಾಶ್ಮೀರದ ಜನತೆಗೆ ಅವಕಾಶ ನೀಡಬೇಕು. ಇದು ವಿಶ್ವಸಂಸ್ಥೆ ನಿರ್ಣಯದಂತೆ ನಡೆಯಬೇಕು ಎಂದರು. ಪರಸ್ಪರ ಗೌರವ, ಸಮಾನತೆಯ ಆಧಾರದಲ್ಲಿ ಪ್ರಾದೇಶಿಕ ವಲಯದಲ್ಲಿ ಸ್ಥಿರತೆ ಕಾಯ್ದಕೊಳ್ಳಲು ಪಾಕ್‌ ಬಯಸುತ್ತದೆ. ಸುಸ್ಥಿರವಾದ ಶಾಂತಿ ಸಾಧಿಸಬೇಕಾದರೆ ಕಾಶ್ಮೀರ ವಿವಾದ ಕುರಿತ ವಿಶ್ವಸಂಸ್ಥೆ ನಿರ್ಣಯ ಅತ್ಯಗತ್ಯವಾಗಿ ಅನುಷ್ಠಾನವಾಗಬೇಕು ಎಂದರು.

‘ನಾವು ಪ್ರಾದೇಶಿಕವಾಗಿ ಹಾಗೂ ಅದರಾಚೆಗೆ ನಿರಂತರ ಶಾಂತಿಯನ್ನು ಬಯಸುತ್ತೇವೆ. ಶಾಂತಿಯೇ ನಮ್ಮ ದೇಶದ ಮಹಾನ್‌ ಶಕ್ತಿ’ ಎಂದು ಹೇಳಿದರು. ಕಾಶ್ಮೀರದ ಜನರು ತಮ್ಮ ಹಣೆಬರಹವನ್ನು  ವಿಶ್ವಸಂಸ್ಥೆಯ ನಿರ್ಣಯದ ಮೂಲಕವೇ ನಿರ್ಧ ರಿಸಲು ಅವಕಾಶ ನೀಡಬೇಕು. ಕಾಶ್ಮೀರ ವಿವಾದದ ಕುರಿತ ವಿಶ್ವಸಂಸ್ಥೆ ನಿರ್ಣಯವು ಆ ಪ್ರದೇಶದಲ್ಲಿ ಸುಸ್ಥಿರ ಶಾಂತಿ ಸ್ಥಾಪನೆಗೆ  ನೆರವಾಗಲಿದೆ ಎಂದರು.

ಇತ್ತೀಚೆಗೆ ಗಡಿ ನಿಯಂತ್ರಣ ರೇಖೆ ಮತ್ತು ಅಂತರರಾಷ್ಟೀಯ ಗಡಿಗಳಲ್ಲಿ ನಡೆದ ಕದನ ವಿರಾಮ ಉಲ್ಲಂಘನೆಗಳಲ್ಲಿ ಭಾರತ ಮತ್ತು ಪಾಕ್‌ ದೇಶಗಳ 20ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಗಡಿ ವಿವಾದವನ್ನು ಬಗೆಹರಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ್ದ ಪಾಕ್‌ ತೀವ್ರ ಮುಖಭಂಗ ಎದುರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.