ADVERTISEMENT

ಕುವೈತ್‌ನಲ್ಲಿ ದಾಳಿ: 26 ಮೃತರಲ್ಲಿ ಇಬ್ಬರು ಭಾರತೀಯರು

​ಪ್ರಜಾವಾಣಿ ವಾರ್ತೆ
Published 28 ಜೂನ್ 2015, 20:00 IST
Last Updated 28 ಜೂನ್ 2015, 20:00 IST

ಕುವೈತ್ (ಪಿಟಿಐ/ಎಎಫ್‌ಪಿ): ಇಲ್ಲಿನ ಶಿಯಾ ಮಸೀದಿಯೊಂದರಲ್ಲಿ ಶುಕ್ರವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಮೃತಪಟ್ಟ 26 ಮಂದಿಯ ಪೈಕಿ ಇಬ್ಬರು ಉತ್ತರ ಪ್ರದೇಶದವರು ಎಂದು ಕುವೈತ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಭಾನುವಾರ ತಿಳಿಸಿದೆ.

ತಮ್ಮ ಸುರಕ್ಷತೆ ಮತ್ತು ಭದ್ರತೆ ಕುರಿತು ಹೆಚ್ಚು ಎಚ್ಚರ ವಹಿಸುವಂತೆ ಕುವೈತ್‌ನಲ್ಲಿನ ಭಾರತದ ಪ್ರಜೆಗಳಿಗೆ ಅದು ಸೂಚನೆ ನೀಡಿದೆ.
ಬಾಂಬ್ ದಾಳಿಯಲ್ಲಿ ಬಲಿಯಾದ ಭಾರತೀಯರನ್ನು ರಿಜ್ವಾನ್ ಹುಸೇನ್ (31) ಮತ್ತು ಇಬ್ನ್‌ ಅಬ್ಬಾಸ್‌ (25) ಎಂದು ಗುರುತಿಸಲಾಗಿದೆ. ಘಟನೆ ಸಂದರ್ಭದಲ್ಲಿ ಇಬ್ಬರೂ ಪ್ರಾರ್ಥನೆ ಸಲ್ಲಿಸುತ್ತಿದ್ದರು ಎಂದು ಕಚೇರಿ ಹೇಳಿಕೆ ತಿಳಿಸಿದೆ.

ಉತ್ತರ ಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯ ವಾಲಿಪುರ ಗ್ರಾಮದವರಾದ ಹುಸೇನ್‌ ಅದೇ ಮಸೀದಿಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು.
ಜಲಾಲ್‌ಪುರ ಜಿಲ್ಲೆಯ ಅಂಬೇಡ್ಕರ್‌ ನಗರದ ಅಬ್ಬಾಸ್‌ ಚಾಲಕ ವೃತ್ತಿಯಲ್ಲಿದ್ದರು.

ಕುಟುಂಬದವರ ಬಯಕೆ ಮೇರೆಗೆ ಮೃತದೇಹಗಳನ್ನು ಇರಾಕ್‌ನ ಪವಿತ್ರ ನಗರ ನಜಾಫ್‌ನಲ್ಲಿ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಕುವೈತ್‌ನಲ್ಲಿನ ಭಾರತದ ರಾಯಭಾರಿ ಸುನೀಲ್‌ ಜೈನ್‌ ಅವರು ದುರಂತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿರುವ ಭಾರತ ಮೂಲದ ನಾಗರಿಕರ ಯೋಗಕ್ಷೇಮ ವಿಚಾರಿಸಿದರು.

ಗಾಯಗೊಂಡ ಎಲ್ಲಾ ಭಾರತೀಯರ ಸ್ಥಿತಿ ಸ್ಥಿರವಾಗಿದೆ. ಕೆಲವರನ್ನು ಪ್ರಾಥಮಿಕ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ರಾಯಭಾರ ಕಚೇರಿ ಅಧಿಕಾರಿಯೊಬ್ಬರು ಹೇಳಿದರು.

ಸೌದಿಯ ದಾಳಿಕೋರ: 26 ಜನರ ಸಾವಿಗೆ ಕಾರಣವಾದ ದಾಳಿಗೆ ಕಾರಣಕರ್ತನಾದ ಆತ್ಮಾಹುತಿ ಬಾಂಬರ್ ‘ಸೌದಿ ಪ್ರಜೆ’ ಎಂದು ಕುವೈತ್‌ ಆಂತರಿಕ ಭದ್ರತಾ ಸಚಿವಾಲಯ ಭಾನುವಾರ ತಿಳಿಸಿದೆ.

ಸೌದಿ ಮೂಲದ ಫಹದ್‌ ಸುಲೇಮಾನ್‌ ಅಬ್ದುಲ್‌ ಮೊಹ್ಸಿನ್‌ ಅಲ್ ಖಾಬಾ ಎಂಬಾತ ಈ ದಾಳಿ ನಡೆಸಿದ್ದು, ಶುಕ್ರವಾರ ನಸುಕಿನಲ್ಲಿ ಕುವೈತ್‌ ವಿಮಾನ ನಿಲ್ದಾಣದ ಮೂಲದ ದೇಶಕ್ಕೆ ಬಂದಿದ್ದ ಎಂದು ಸಚಿವಾಲಯ ಹೇಳಿರುವುದಾಗಿ ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಘಟನಾ ಸ್ಥಳಕ್ಕೆ ದಾಳಿಕೋರನನ್ನು ಕರೆದುಕೊಂಡು ಬಂದಿದ್ದ ಕಾರಿನ ಚಾಲಕನನ್ನು ಮತ್ತು ಬಾಂಬರ್ ಉಳಿದುಕೊಂಡಿದ್ದ ಮನೆಯ ಮಾಲೀಕನನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.