ADVERTISEMENT

ಕೊನೆಯಾದ ಅರ್ಧ ಶತಮಾನದ ಹಗೆತನ

ಹಮೀದ್ ಕೆ.
Published 5 ಜುಲೈ 2015, 19:30 IST
Last Updated 5 ಜುಲೈ 2015, 19:30 IST

ಕ್ಯೂಬಾವನ್ನು ಮಣಿಸಲು ಅಮೆರಿಕಕ್ಕೆ ಸಾಧ್ಯವಾಗಿಲ್ಲ ಎಂಬುದೊಂದು ಸಮಾಧಾನ ಅಮೆರಿಕ ವಿರೋಧಿಗಳಲ್ಲಿ ಬಹಳ ಕಾಲದಿಂದ ಇದೆ. ಕ್ಯೂಬಾವನ್ನು ಕಮ್ಯುನಿಸ್ಟ್ ರಾಷ್ಟ್ರವಾಗಿ ಕಟ್ಟಿ, ಅಮೆರಿಕಕ್ಕೆ ಸಡ್ಡು ಹೊಡೆದು ನಿಂತ ಫಿಡೆಲ್ ಕ್ಯಾಸ್ಟ್ರೊ ಜಗತ್ತಿನ ಎಲ್ಲೆಡೆ ಇರುವ ಎಡಪಂಥೀಯರಿಗೆ ಇಂದಿಗೂ ಹೀರೊ. ಅಮೆರಿಕದಿಂದ ಕೇವಲ 150 ಕಿಲೋಮೀಟರ್ ದೂರದಲ್ಲಿರುವ ಪುಟ್ಟ ದ್ವೀಪ ಕ್ಯೂಬಾ, ಕಳೆದ ಅರ್ಧ ಶತಮಾನ ಕಾಲ ಅಮೆರಿಕವನ್ನು ವಿರೋಧಿಸಿಕೊಂಡೇ ಬಂದದ್ದು ಹೌದು. ಈ ಸಂಘರ್ಷಕ್ಕೆ ಅಮೆರಿಕ ಮತ್ತು ಸೋವಿಯತ್ ರಷ್ಯಾ ನಡುವಣ ಶೀತಲ ಸಮರವೂ ದೊಡ್ಡ ಕೊಡುಗೆ ನೀಡಿದೆ.
ಆದರೆ, ಈಗ ಕಾಲ ಬದಲಾಗಿದೆ. ಸೋವಿಯತ್ ರಷ್ಯಾ ಒಡೆದು ಹೋಗಿದೆ. ರಷ್ಯಾ ಬಲಹೀನವಾದ ಕಾರಣಕ್ಕೆ ಶೀತಲ ಸಮರವೂ ಅರ್ಥ ಕಳೆದುಕೊಂಡಿದೆ. ನಂತರವೂ ಅಮೆರಿಕ ವಿರುದ್ಧ ವೈರತ್ವ ಮುಂದುವರಿಸಿಕೊಂಡು ಬಂದಿದ್ದ ಕ್ಯೂಬಾ ಕೂಡ ಈಗ ಬದಲಾಗಿದೆ. 

ಅಮೆರಿಕ ಮತ್ತು ಕ್ಯೂಬಾದ ಜನರಿಗೆ ಭವಿಷ್ಯ ಮತ್ತು ಭೂತದ ನಡುವೆ ಒಂದನ್ನು ಆಯ್ಕೆ ಮಾಡಿಕೊಳ್ಳುವ ಕಾಲ ಬಂದಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾರೆ. ಎರಡೂ ದೇಶಗಳು ಸಂಬಂಧ ಕಡಿದುಕೊಂಡು 54 ವರ್ಷಗಳಾಗಿವೆ. ಜುಲೈ 20ರಂದು ಅಮೆರಿಕದ ರಾಜಧಾನಿ ವಾಷಿಂಗ್ಟನ್ ಮತ್ತು ಕ್ಯೂಬಾದ ರಾಜಧಾನಿ ಹವಾನಾಗಳಲ್ಲಿ ಪರಸ್ಪರರ ರಾಯಭಾರ ಕಚೇರಿಗಳು ತೆರೆದುಕೊಳ್ಳಲಿವೆ. ಸ್ಪೇನ್‌  ವಸಾಹತು ಆಗಿದ್ದ ಕ್ಯೂಬಾ 1902ರಲ್ಲಿ ಸ್ವತಂತ್ರವಾಗುತ್ತದೆ. ಆದರೆ, ಇದು ಪೂರ್ಣ ಸ್ವಾತಂತ್ರ್ಯ ಅಲ್ಲ. ಕ್ಯೂಬಾ  ಸಂವಿಧಾನ ಪ್ರಕಾರ, ಹಣಕಾಸು ಮತ್ತು ವಿದೇಶಾಂಗ ವ್ಯವಹಾರದಲ್ಲಿ ತಲೆ ಹಾಕುವ ಹಕ್ಕು ಅಮೆರಿಕಕ್ಕೆ ಇತ್ತು.

ಸಾರ್ಜಂಟ್ ಬ್ಯಾಟಿಸ್ಟಾ ಅವರ ಸರ್ಕಾರದ ವಿರುದ್ಧ ದಂಗೆ ಎದ್ದ ಫಿಡೆಲ್ ಕ್ಯಾಸ್ಟ್ರೊ ನೇತೃತ್ವದ ಕಮ್ಯುನಿಸ್ಟರು 1959ರಲ್ಲಿ ಬ್ಯಾಟಿಸ್ಟಾ ಅವರನ್ನು

ಪದಚ್ಯುತಗೊಳಿಸುತ್ತಾರೆ. ಈ ದಂಗೆಗೆ ಅಮೆರಿಕದ ಪರೋಕ್ಷ ಬೆಂಬಲವೂ ಇತ್ತು. ಯಾಕೆಂದರೆ ಬ್ಯಾಟಿಸ್ಟಾ ಪರವಾಗಿ ನಿಯೋಜಿಸಿದ್ದ ಸೇನೆಯನ್ನು 1958ರಲ್ಲಿ ಅಮೆರಿಕ ಹಿಂದಕ್ಕೆ ಕರೆಸಿಕೊಳ್ಳುತ್ತದೆ. ಆದರೆ, ನಂತರ ಅಮೆರಿಕ ಅಂದುಕೊಂಡಂತೆ ಯಾವುದೂ ನಡೆಯಲಿಲ್ಲ. 1959ರಲ್ಲಿ ಕ್ಯೂಬಾದ ಪ್ರಧಾನಿಯಾದ ಕ್ಯಾಸ್ಟ್ರೊ 1960ರಲ್ಲಿ ದೇಶದಲ್ಲಿದ್ದ ಅಮೆರಿಕದ ಎಲ್ಲ ವ್ಯಾಪಾರ ವಹಿವಾಟುಗಳನ್ನು ರಾಷ್ಟ್ರೀಕರಣಗೊಳಿಸುತ್ತಾರೆ.  ಕ್ಯಾಸ್ಟ್ರೊ ತಂದ ಈ ‘ಸುಧಾರಣೆ’ಯಿಂದ ಕೆರಳಿದ ಅಮೆರಿಕ ಆ ದೇಶದ ಜೊತೆಗಿನ ಎಲ್ಲ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುತ್ತದೆ. 1961ರಲ್ಲಿ ಕ್ಯೂಬಾವನ್ನು ಕಮ್ಯುನಿಸ್ಟ್ ದೇಶ ಎಂದು ಕ್ಯಾಸ್ಟ್ರೊ ಘೋಷಿಸುತ್ತಾರೆ. ಸಮೀಪದ ದೊಡ್ಡ ಶತ್ರು ಅಮೆರಿಕದ ವಿರುದ್ಧ ಸೋವಿಯತ್ ರಷ್ಯಾ ಜೊತೆ ಮೈತ್ರಿ ಮಾಡಿಕೊಳ್ಳುತ್ತಾರೆ.

ಕ್ಯಾಸ್ಟ್ರೊ ಹತ್ಯೆಗೆ ಯತ್ನ: 1960ರ ದಶಕ ಎರಡು ದೇಶಗಳ ನಡುವಣ ವೈರತ್ವ ಅತ್ಯಂತ ತೀಕ್ಷ್ಣವಾಗಿದ್ದ ಅವಧಿ. ಈ ಅವಧಿಯಲ್ಲಿ ಕ್ಯಾಸ್ಟ್ರೊ ಅವರನ್ನು ಪದಚ್ಯುತಗೊಳಿಸಲು ಅಮೆರಿಕ ನಿರಂತರವಾಗಿ ಶ್ರಮಿಸುತ್ತಲೇ ಇತ್ತು. 1961ರಿಂದ 63ರ ಅವಧಿಯಲ್ಲಿ ಅಮೆರಿಕದ ಗೂಢಚರ ಸಂಸ್ಥೆ ಸಿಐಎ ಕ್ಯಾಸ್ಟ್ರೊ ಅವರ ಹತ್ಯೆಗೆ ಕನಿಷ್ಠ ಐದು ಪ್ರಯತ್ನಗಳನ್ನು ನಡೆಸಿದೆ. 1962ರಲ್ಲಿ ಅಮೆರಿಕದ ವಿರುದ್ಧ ಅಣ್ವಸ್ತ್ರ ಕ್ಷಿಪಣಿಗಳನ್ನು ನಿಯೋಜಿಸಲು ಸೋವಿಯತ್ ರಷ್ಯಾಕ್ಕೆ ಕ್ಯಾಸ್ಟ್ರೊ ಅವಕಾಶ ನೀಡುತ್ತಾರೆ. ಇದು ಅಮೆರಿಕ ಮತ್ತು ರಷ್ಯಾ ನಡುವೆ ಅಣು ಯುದ್ಧದ ಭೀತಿಯನ್ನೂ ಸೃಷ್ಟಿಸುತ್ತದೆ.

2001ರಿಂದ ಎರಡು ದೇಶಗಳ ನಡುವೆ ಸಂಬಂಧ ನಿಧಾನವಾಗಿ ಸುಧಾರಣೆಗೊಳ್ಳುತ್ತದೆ. ‘ಮಿಷೆಲ್’ ಸುಂಟರಗಾಳಿಗೆ ತುತ್ತಾಗಿ ಕ್ಯೂಬಾ ಅಪಾರ ನಷ್ಟ

ಅನುಭವಿಸುತ್ತದೆ. ಕ್ಯೂಬಾದ ವಿನಂತಿಯಂತೆ ಅಮೆರಿಕ ಆಹಾರ ಪದಾರ್ಥಗಳನ್ನು ನೀಡುತ್ತದೆ. 40 ವರ್ಷಗಳ ನಂತರ ಮೊದಲ ಬಾರಿಗೆ ಎರಡು ದೇಶಗಳ ನಡುವೆ ಮಾನವೀಯ ಸಂಬಂಧದ ಎಳೆ ಕಾಣಿಸಿಕೊಳ್ಳುತ್ತದೆ. 2008ರ ಫೆಬ್ರುವರಿಯಲ್ಲಿ ಫಿಡೆಲ್ ಕ್ಯಾಸ್ಟ್ರೊ ಸಹೋದರ ರಾಲ್ ಕ್ಯಾಸ್ಟ್ರೊ ಕ್ಯೂಬಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಅದೇ ವರ್ಷ ನವೆಂಬರ್‌ನಲ್ಲಿ ಬರಾಕ್ ಒಬಾಮ ಅಮೆರಿಕ ಅಧ್ಯಕ್ಷರಾಗುತ್ತಾರೆ. ಇಬ್ಬರಲ್ಲೂ ಇದ್ದ ಸಂಬಂಧ ಸುಧಾರಿಸಿಕೊಳ್ಳಬೇಕು ಎಂಬ ಇಚ್ಛೆ ಈಗ ಫಲ ನೀಡಿದೆ. 

ADVERTISEMENT

ಈ ಇಡೀ ಬೆಳವಣಿಗೆಯಲ್ಲಿ ಹೆಚ್ಚು ಪ್ರಗತಿಪರವಾಗಿ ಚಿಂತಿಸುತ್ತಿರುವ ಪೋಪ್ ಫ್ರಾನ್ಸಿಸ್ ಮಹತ್ವದ ಪಾತ್ರ ವಹಿಸಿದ್ದಾರೆ. ಅದಕ್ಕಾಗಿ ಪೋಪ್‌ ಅವರಿಗೆ ಒಬಾಮ ಮತ್ತು ರಾಲ್ ಕ್ಯಾಸ್ಟ್ರೊ ಕೃತಜ್ಞತೆಯನ್ನೂ ಸಲ್ಲಿಸಿದ್ದಾರೆ.ಕ್ಯೂಬಾ ಬಂಡವಾಳಶಾಹಿ ರಾಷ್ಟ್ರವಾಗಲಿ ಎಂಬ ಹಂಬಲ ಅಮೆರಿಕಕ್ಕೆ ಮೊದಲಿನಿಂದಲೂ ಇದೆ. 1959ರಲ್ಲಿ ಅಮೆರಿಕದ ಉಪಾಧ್ಯಕ್ಷ ರಿಚರ್ಡ್ ನಿಕ್ಸನ್‌ ಅವರನ್ನು ಫಿಡೆಲ್ ಕ್ಯಾಸ್ಟ್ರೊ ವಾಷಿಂಗ್ಟನ್‌ನಲ್ಲಿ ಭೇಟಿಯಾಗಿದ್ದರು. ಈ ಭೇಟಿಯ ನಂತರ ‘ಕ್ಯಾಸ್ಟ್ರೊ ಸರಿ ದಾರಿಯಲ್ಲಿ ಸಾಗುವಂತೆ ತರಬೇತಿ ನೀಡುವುದಷ್ಟೇ ನಮಗೆ ಉಳಿದಿರುವ ಆಯ್ಕೆ’ ಎಂದು ನಿಕ್ಸನ್ ಹೇಳಿದ್ದರು.

ಕ್ಯೂಬಾ ಕಮ್ಯುನಿಸ್ಟ್ ರಾಷ್ಟ್ರವಾಗಿಯೇ ಮುಂದುವರಿಯುತ್ತದೆ ಎಂದು ಅಮೆರಿಕದೊಂದಿಗಿನ ಸಂಬಂಧ ಸುಧಾರಣೆಯ ಪ್ರತಿ ಹಂತದಲ್ಲಿಯೂ ರಾಲ್ ಕ್ಯಾಸ್ಟ್ರೊ ಹೇಳುತ್ತಾ ಬಂದಿದ್ದಾರೆ. ಹವಾನಾದಲ್ಲಿ ರಾಯಭಾರ ಕಚೇರಿ ತೆರೆದುಕೊಂಡರೆ ಅಲ್ಲಿನ ವ್ಯಾಪಾರ ಅವಕಾಶಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತದೆ. ಇದು ಅಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ವ್ಯಾಪಾರ ನಡೆಸುವುದಕ್ಕೆ ನೆರವಾಗುತ್ತದೆ ಎಂಬುದು ಅಮೆರಿಕದ ಉದ್ಯಮಿಗಳ ಆಶಾಭಾವ. ಇದೇನೇ ಇದ್ದರೂ ಸನಿಹದಲ್ಲಿರುವ ಎರಡು ರಾಷ್ಟ್ರಗಳು ಅರ್ಧ ಶತಮಾನದ ನಂತರ ಪರಸ್ಪರ ಹೃದಯ ತೆರೆದುಕೊಳ್ಳಲು ಮುಂದಾಗಿರುವುದು ಅತ್ಯಂತ ಮಾನವೀಯವಾಗಿರುವ ನಡೆಯಾಗಿದೆ.

ಅರ್ಧ ಶತಮಾನದಿಂದ ದೂರ ದೂರವೇ ಇದ್ದ ಅಮೆರಿಕ ಮತ್ತು ಕ್ಯೂಬಾ ದೇಶಗಳು ಹತ್ತಿರವಾಗಲು ನಿರ್ಧರಿಸಿವೆ. ಈ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ  ಒಬಾಮ ಮತ್ತು ಕ್ಯೂಬಾ ಅಧ್ಯಕ್ಷ ರಾಲ್‌ ಕ್ಯಾಸ್ಟ್ರೊ ಬಹುದೂರ ಸಾಗಿದ್ದಾರೆ. ಜುಲೈ 20ರಂದು ಎರಡೂ ದೇಶಗಳಲ್ಲಿ ಪರಸ್ಪರರ ರಾಯಭಾರ ಕಚೇರಿ ಆರಂಭವಾಗಲಿರುವುದು ಒಬಾಮ ವಿದೇಶಾಂಗ ನೀತಿಯ ಬಹುದೊಡ್ಡ  ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.