ADVERTISEMENT

ಗಾಂಧಿ, ನೆಹರೂ, ಅಂಬೇಡ್ಕರ್‌ ಅನಿವಾಸಿ ಭಾರತೀಯರಾಗಿದ್ದರು: ರಾಹುಲ್‌ ಗಾಂಧಿ

‘ಭಾರತದ ಬಗ್ಗೆ ಯೋಚಿಸುವವರೆಲ್ಲರೂ ಭಾರತೀಯರು’

ಏಜೆನ್ಸೀಸ್
Published 22 ಸೆಪ್ಟೆಂಬರ್ 2017, 11:12 IST
Last Updated 22 ಸೆಪ್ಟೆಂಬರ್ 2017, 11:12 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನ್ಯೂಯಾರ್ಕ್‌: ‘ಭಾರತ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರೆಲ್ಲರೂ ಅನಿವಾಸಿ ಭಾರತೀಯರಾಗಿದ್ದರು (ಎನ್‌ಆರ್‌ಐ). ಕಾಂಗ್ರೆಸ್ ಪಕ್ಷವು ಎನ್‌ಆರ್‌ಐ ಆಂದೋಲನದ ಸಂದರ್ಭದಲ್ಲಿ ಹುಟ್ಟಿದ್ದು’ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಹೇಳಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿ ಗುರುವಾರ ಅನಿವಾಸಿ ಭಾರತೀಯರ ಸಭೆಯಲ್ಲಿ ಮಾತನಾಡಿದ ಅವರು, ‘ಮೂಲ ಕಾಂಗ್ರೆಸ್‌ ಚಳವಳಿಯು ಎನ್‌ಆರ್‌ಐ ಚಳವಳಿಯಾಗಿತ್ತು. ಮಹಾತ್ಮ ಗಾಂಧಿ ಅನಿವಾಸಿ ಭಾರತೀಯರಾಗಿದ್ದರು. ಜವಾಹರ ಲಾಲ್‌ ನೆಹರೂ ಇಂಗ್ಲೆಂಡ್‌ನಿಂದ ವಾಪಸ್‌ ಬಂದಿದ್ದರು. ಅಂಬೇಡ್ಕರ್‌, ಆಜಾದ್‌, ಪಟೇಲ್‌ ಇವರೆಲ್ಲರೂ ಅನಿವಾಸಿ ಭಾರತೀಯರಾಗಿದ್ದರು’ ಎಂದಿದ್ದಾರೆ.

‘ಈ ನಾಯಕರೆಲ್ಲರೂ ಭಾರತದಿಂದ ಹೊರಗೆ ಹೋಗಿ ಜಗತ್ತನ್ನು ನೋಡಿದರು. ಮರಳಿ ಭಾರತಕ್ಕೆ ಬಂದ ನಂತರ ಇವರೆಲ್ಲರೂ ಹೊರ ಜಗತ್ತಿನ ಗ್ರಹಿಕೆಯ ಜ್ಞಾನವನ್ನು ಭಾರತದ ಬೆಳವಣಿಗೆಗೆ ಧಾರೆ ಎರೆದರು’ ಎಂದು ರಾಹುಲ್‌ ಹೇಳಿದ್ದಾರೆ.

ADVERTISEMENT

‘ಬೇರೆ ದೇಶಗಳಿಂದ ಭಾರತಕ್ಕೆ ವಾಪಸ್‌ ಬಂದು ಭಾರತದ ಅಭಿವೃದ್ಧಿಗೆ ಕಾಣಿಕೆ ನೀಡಿದ ಹಲವು ಮಂದಿ ಇದ್ದಾರೆ. ಕ್ಷೀರ ಕ್ರಾಂತಿಯ ಹರಿಕಾರ ವರ್ಗಿಸ್‌ ಕುರಿಯನ್‌ ಅಮೆರಿಕದಿಂದ ಭಾರತಕ್ಕೆ ಬಂದು ಇಲ್ಲಿ ಪಶುಸಂಗೋಪನೆಯನ್ನು ಅಭಿವೃದ್ಧಿಪಡಿಸಿದರು. ಅನಿವಾಸಿ ಭಾರತೀಯರ ವಿಷಯಕ್ಕೆ ಬಂದಾಗ ಇಂತಹ ಸಾವಿರಾರು ಉದಾಹರಣೆಗಳು ಸಿಗುತ್ತವೆ’ ಎಂದು ರಾಹುಲ್‌ ತಿಳಿಸಿದ್ದಾರೆ.

‘ಅಮೆರಿಕದಲ್ಲಿ ಸಾಕಷ್ಟು ಮಂದಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಅವರು ಕೇವಲ ಅಮೆರಿಕಕ್ಕಾಗಿ ಕೆಲಸ ಮಾಡುತ್ತಿಲ್ಲ, ಅವರು ಭಾರತಕ್ಕಾಗಿಯೂ ಕೆಲಸ ಮಾಡುತ್ತಿದ್ದಾರೆ. ಅನಿವಾಸಿ ಭಾರತೀಯರು ಭಾರತದ ಬೆನ್ನೆಲುಬು ಇದ್ದಂತೆ. ಕೆಲವರು ಭಾರತವನ್ನು ಒಂದು ಭೌಗೋಳಿಕ ರಚನೆ ಎಂಬಂತೆ ನೋಡುತ್ತಾರೆ. ಆದರೆ, ಭಾರತ ಎಂಬುದು ಸಿದ್ಧಾಂತಗಳ ಒಟ್ಟು ರೂಪದಂತೆ ನನಗೆ ಕಾಣುತ್ತದೆ. ಈ ದೃಷ್ಟಿಯಿಂದ ಭಾರತದ ಬೆಳವಣಿಗೆಯ ಬಗ್ಗೆ ಆಲೋಚಿಸುವವರೆಲ್ಲರೂ ಭಾರತೀಯರು’ ಎಂದು ರಾಹುಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.